HomeKarnatakaಎಂ.ಪಿ. ಪ್ರಕಾಶ್ ಆದರ್ಶಗಳು, ಸೇವೆ ಎಂದಿಗೂ ಜನಮಾನಸದಲ್ಲಿ ಜೀವಂತ: ಸಿದ್ಧರಾಮಯ್ಯ

ಎಂ.ಪಿ. ಪ್ರಕಾಶ್ ಆದರ್ಶಗಳು, ಸೇವೆ ಎಂದಿಗೂ ಜನಮಾನಸದಲ್ಲಿ ಜೀವಂತ: ಸಿದ್ಧರಾಮಯ್ಯ

ಹೂವಿನಹಡಗಲಿ: ಎಂ.ಪಿ. ಪ್ರಕಾಶ್‌ ಅವರು ತಮ್ಮ ಆದರ್ಶಗಳು, ಸೇವೆ ಮತ್ತು ವ್ಯಕ್ತಿತ್ವದ ಮೂಲಕ ಜನಮಾನಸದಲ್ಲಿ ಎಂದೆಂದಿಗೂ ಜೀವಂತವಾಗಿರುತ್ತಾರೆ ಎಂಬ ದೃಢ ನಂಬಿಕೆ ನನಗಿದೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ.

ವಿಜಯನಗರ ಜಿಲ್ಲೆಯ ಹೂವಿನ ಹಡಗಲಿಯಲ್ಲಿ ಆಯೋಜಿಸಿದ್ದ ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಅವರ 86ನೇ ಜನ್ಮದಿನೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

ಶ್ರೀಮತಿ ಉಮಾ ಪ್ರಕಾಶ್‌ ಅವರು ಎಂ.ಪಿ. ಪ್ರಕಾಶ್‌ ಅವರ ಪುತ್ಥಳಿಯನ್ನು ಲೋಕಾರ್ಪಣೆ ಮಾಡುವಂತೆ ನನಗೆ ಆಹ್ವಾನ ನೀಡಿದ್ದರು. ಅವರಂತಹ ಹಿರಿಯ ರಾಜಕಾರಣಿಯ ಪುತ್ಥಳಿಯನ್ನು ಅನಾವರಣಗೊಳಿಸುವ ಅವಕಾಶ ದೊರೆತಿರುವುದು ನನ್ನ ಸೌಭಾಗ್ಯ. ಅತ್ಯಂತ ಸಂತೋಷ ಮತ್ತು ಗೌರವದಿಂದ ಅವರ ಪುತ್ಥಳಿಯನ್ನು ಲೋಕಾರ್ಪಣೆ ಮಾಡಿದ್ದೇನೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಎಂ.ಪಿ. ಪ್ರಕಾಶ್‌ ಅವರ 86ನೇ ಜನ್ಮ ದಿನೋತ್ಸವವೂ ಆಗಿದ್ದು, ಅವರು ನಮ್ಮನ್ನಗಲಿ 15 ವರ್ಷಗಳು ಕಳೆದಿವೆ. ಅವರ ಅಗಲಿಕೆಯಿಂದ ಅವರ ಕುಟುಂಬಕ್ಕೆ ಮಾತ್ರವಲ್ಲ, ಇಡೀ ಕರ್ನಾಟಕ ರಾಜ್ಯವೇ ಒಬ್ಬ ಪ್ರಾಮಾಣಿಕ, ಮೌಲ್ಯಾಧಾರಿತ ಮತ್ತು ಜನಪರ ನಾಯಕನನ್ನು ಕಳೆದುಕೊಂಡಿದೆ ಎಂದರು.

ಎಂ.ಪಿ. ಪ್ರಕಾಶ್‌ ಅವರು ನನಗಿಂತ ಆರೇಳು ವರ್ಷ ಹಿರಿಯರು. ಅವರ ಅಗಲಿಕೆಯಿಂದ ಕರ್ನಾಟಕವು ಒಬ್ಬ ಸಜ್ಜನ, ಮೌಲ್ಯಾಧಾರಿತ ಹಾಗೂ ಅಜಾತಶತ್ರುವಿನಂತಹ ಅಪರೂಪದ ರಾಜಕಾರಣಿಯನ್ನು ಕಳೆದುಕೊಂಡಿದೆ. ಜೀವನದುದ್ದಕ್ಕೂ ಸಿದ್ಧಾಂತಗಳಿಗೆ ಬದ್ಧರಾಗಿ ಜನಸೇವೆಯನ್ನೇ ಧ್ಯೇಯವಾಗಿಸಿಕೊಂಡು ಅವರು ರಾಜಕೀಯದಲ್ಲಿ ಹೋರಾಟ ನಡೆಸಿದರು ಎಂದರು.

ನಾನು ಮತ್ತು ಅವರು ಒಂದೇ ಕಾಲಘಟ್ಟದ ರಾಜಕಾರಣಿಗಳು. ಅವರು 1978ರಲ್ಲಿಯೇ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದರು. ಆಗ ನಾನೂ ಜನತಾ ಪಕ್ಷದಲ್ಲಿದ್ದರೂ, ಟಿಕೆಟ್‌ ದೊರೆಯದ ಕಾರಣ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗಿರಲಿಲ್ಲ. ನಂತರದ ಚುನಾವಣೆಯಲ್ಲಿ ಎಂ.ಪಿ. ಪ್ರಕಾಶ್‌ ಅವರು ಸೋಲು ಕಂಡರೂ, 1983ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಸ್ಪರ್ಧಿಸಿ ವಿಜಯಶಾಲಿಯಾದರು. ಬಳಿಕ ನಾನು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾದಾಗ, ಅವರೊಂದಿಗೆ ಶಾಸನಸಭೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರೆಯಿತು ಎಂದರು.

ಎಂ.ಪಿ. ಪ್ರಕಾಶ್‌ ಅವರು ಜನತಾ ಪಕ್ಷಕ್ಕೆ ಸೇರುವ ಮೊದಲು ಸಮಾಜವಾದಿ ಪಕ್ಷದಲ್ಲಿದ್ದರು. ನಾನು ಸಮಾಜವಾದಿ ಪಕ್ಷದಲ್ಲಿದ್ದಾಗಲೇ ಅವರು ಅತ್ಯಂತ ಕ್ರಿಯಾಶೀಲ ನಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದರು. ಪ್ರೊ. ನಂಜುಂಡಸ್ವಾಮಿ ಅವರು ನನ್ನನ್ನು ಸಮಾಜವಾದಿ ಪಕ್ಷದ ಸದಸ್ಯನನ್ನಾಗಿ ಮಾಡಿದ್ದರು. ಆ ವೇಳೆಗೆ ಎಂ.ಪಿ. ಪ್ರಕಾಶ್‌ ಅವರು ಪಕ್ಷದ ಪ್ರಮುಖ ನಾಯಕರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದರು ಎಂದು ತಿಳಿಸಿದರು.

ಎಂ.ಪಿ. ಪ್ರಕಾಶ್‌ ಅವರು ಅಪಾರ ಜ್ಞಾನ ಹೊಂದಿದ್ದ ಬುದ್ಧಿವಂತ ರಾಜಕಾರಣಿಯಾಗಿದ್ದರು. ರಾಜಕೀಯ ಕ್ಷೇತ್ರದಲ್ಲಿ ಅವರಷ್ಟು ಅಧ್ಯಯನಶೀಲರು ಮತ್ತು ಓದಿನ ಆಸಕ್ತಿ ಹೊಂದಿದ್ದ ನಾಯಕರು ವಿರಳ. ಬಿಡುವಿನ ಸಮಯ ಸಿಕ್ಕಾಗಲೆಲ್ಲಾ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಅವರು ಬೆಳೆಸಿಕೊಂಡಿದ್ದರು. ಅದರಿಂದಲೇ ವಿವಿಧ ವಿಷಯಗಳಲ್ಲಿ ಆಳವಾದ ಜ್ಞಾನವನ್ನು ಸಂಪಾದಿಸಿ, ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವವನ್ನು ಮೈಗೂಡಿಸಿಕೊಂಡಿದ್ದರು. ಇಂತಹ ಸಜ್ಜನ ರಾಜಕಾರಣಿಯ ಪುತ್ಥಳಿಯನ್ನು ನನ್ನ ಕೈಯಿಂದ ಅನಾವರಣಗೊಳಿಸಿರುವುದು ಸಂತೋಷದ ವಿಚಾರ ಎಂದರು.

ನಾನು ಸಚಿವನಾಗಿದ್ದ ಸಂದರ್ಭದಲ್ಲಿ ಯಾವುದೇ ಸಮಸ್ಯೆ ಎದುರಾದರೂ ಮೊದಲು ಭೇಟಿ ಮಾಡುತ್ತಿದ್ದ ವ್ಯಕ್ತಿ ಎಂ.ಪಿ. ಪ್ರಕಾಶ್‌ ಅವರೇ. ಅವರೊಂದಿಗೆ ಚರ್ಚಿಸಿದ ಬಳಿಕ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳುತ್ತಿದ್ದೆ. ಅಂತಹ ವ್ಯಕ್ತಿಯನ್ನು ಇಂದು ನಾನು ಸ್ಮರಿಸಿಕೊಳ್ಳುತ್ತಿದ್ದೇನೆ ಎಂದರೆ ಅದಕ್ಕಿಂತಲೂ ಸಂತೋಷದ ವಿಚಾರ ಇನ್ನೊಂದಿಲ್ಲ ಎಂದರು.

ನಾನು ಎಂ.ಪಿ. ಪ್ರಕಾಶ್‌ ಅವರೊಂದಿಗೆ ಅನೇಕ ಬಾರಿ ಹೂವಿನ ಹಡಗಲಿಗೆ ಬಂದಿದ್ದೇನೆ. ಅವರ ಮನೆಯಲ್ಲಿ ಹಲವಾರು ಬಾರಿ ಊಟ ಮಾಡಿದ್ದೇನೆ. ಅವರು ನನಗೆ ಕೇವಲ ಸ್ನೇಹಿತರಷ್ಟೇ ಅಲ್ಲ, ಆತ್ಮೀಯ ರಾಜಕೀಯ ಸಹೋದ್ಯೋಗಿ ಮತ್ತು ಮಾರ್ಗದರ್ಶಕರಾಗಿದ್ದರು. ನಾನು ಅವರನ್ನು ಭೇಟಿಯಾದಾಗಲೆಲ್ಲಾ ಸಮಕಾಲೀನ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚಿಸುತ್ತಿದ್ದೆ. ನಾವು ಸಮಾಜದಲ್ಲಿ ಮುಂದೆ ಏನಾಗಬೇಕು? ಸರ್ಕಾರದ ಕಾರ್ಯಕ್ರಮಗಳು ಹೇಗಿರಬೇಕು ಎಂಬ ವಿಷಯಗಳ ಬಗ್ಗೆಯೂ ಸುದೀರ್ಘವಾಗಿ ಚರ್ಚಿಸುತ್ತಿದ್ದೇವು. ಎಂ.ಪಿ. ಪ್ರಕಾಶ್‌ ಅವರು ನನಗೆ ಮಾರ್ಗದರ್ಶಕರಾಗಿದ್ದರು ಎನ್ನುವುದು ಅತಿಶಯೋಕ್ತಿಯಲ್ಲ ಎಂದರು.

ಎಂ.ಪಿ. ಪ್ರಕಾಶ್‌ ಅವರು ಜಾತ್ಯಾತೀತ ವ್ಯಕ್ತಿತ್ವ ಇದ್ದಂತಹ ವ್ಯಕ್ತಿ. ಅವರು ಎಂದಿಗೂ ಜಾತಿ ಆಧಾರಿತ ರಾಜಕೀಯವನ್ನು ಮಾಡಲಿಲ್ಲ. ಒಂದು ವೇಳೆ ಜಾತಿಯನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿದ್ದರೆ, ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಇನ್ನೂ ಉನ್ನತ ಸ್ಥಾನಕ್ಕೇರಬಹುದಾಗಿತ್ತು. ಅದೇ ರೀತಿ ರಾಜಕೀಯ ಲಾಭಕ್ಕಾಗಿ ಸ್ವಾಮೀಜಿಗಳನ್ನು ದುರುಪಯೋಗಪಡಿಸಿಕೊಳ್ಳುವ ಪ್ರವೃತ್ತಿಯಿಂದಲೂ ಅವರು ಸದಾ ದೂರವಿದ್ದರು ಎಂದರು.

ಮಾಜಿ ಪ್ರಧಾನಿ ಎಚ್‌.ಡಿ ದೇವೆಗೌಡ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನಾನು ಹಣಕಾಸು ಸಚಿವನಾಗಿ ಕಾರ್ಯನಿರ್ವಹಿಸುತ್ತಿದ್ದೆ. ಆಗ ಎಂ.ಪಿ. ಪ್ರಕಾಶ್‌ ಅವರು ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದರು. ತಮ್ಮ ನಂತರ ಲೀಲಾವತಿಯವರೇ ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಬೇಕು ಎಂದು ಅವರು ವ್ಯಕ್ತಪಡಿಸಿದ್ದ ಅಭಿಪ್ರಾಯ ಇಂದಿಗೂ ನನ್ನ ಮನಸ್ಸಿನಲ್ಲಿ ಹಚ್ಚಹಸಿರಾಗಿದೆ. ಎಂ.ಪಿ. ಪ್ರಕಾಶ್‌ ಅವರಂತಹ ಸಿದ್ಧಾಂತನಿಷ್ಠ ಮತ್ತು ಪ್ರಾಮಾಣಿಕ ರಾಜಕಾರಣಿಗೆ ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಉಳಿದುಕೊಳ್ಳುವುದು ಅತ್ಯಂತ ಕಷ್ಟಕರವಾಗುತ್ತಿತ್ತು. ಏಕೆಂದರೆ ಅವರು ಪ್ರಾಮಾಣಿಕತೆಗೆ ಎಂದಿಗೂ ರಾಜಿ ಮಾಡಿಕೊಂಡವರಲ್ಲ ಹಾಗೂ ಇಂದು ಅಂತಹ ರಾಜಕೀಯ ಪರಿಸ್ಥಿತಿ ಇಲ್ಲ. ಅವರ ಅಗಲಿಕೆಯಿಂದ ಕರ್ನಾಟಕವು ಒಬ್ಬ ಉತ್ತಮ, ಸಜ್ಜನ ಮತ್ತು ಮುತ್ಸದ್ದಿ ರಾಜಕಾರಣಿಯನ್ನು ಕಳೆದುಕೊಂಡಿದೆ ಎಂದರು

ನಾನು ಮತ್ತು ಎಂ.ಪಿ. ಪ್ರಕಾಶ್‌ ಅವರು ಒಂದೇ ಕಾಲಘಟ್ಟದಲ್ಲಿ ರಾಜಕೀಯಕ್ಕೆ ಬಂದವರಾದರೂ, ಅವರಷ್ಟು ಅಧ್ಯಯನಶೀಲ ಮತ್ತು ಬುದ್ಧಿವಂತ ರಾಜಕಾರಣಿ ನಾನು ಅಲ್ಲ. ಆದರೆ, ಜೆ.ಎಚ್. ಪಟೇಲ್‌ ಅವರ ಸರ್ಕಾರದಲ್ಲಿ ನಾನು ಅವರಿಗಿಂತ ಮೊದಲೇ ಉಪಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುವ ಅವಕಾಶ ಪಡೆದಿದ್ದೆ. ಎಂ.ಪಿ. ಪ್ರಕಾಶ್‌ ಅವರು ಸಾಮಾಜಿಕ ನ್ಯಾಯದ ತತ್ವದಲ್ಲಿ ಅಚಲ ನಂಬಿಕೆ ಹೊಂದಿದ್ದ ನಾಯಕರು. ತಮ್ಮ ರಾಜಕೀಯ ಜೀವನದುದ್ದಕ್ಕೂ ಸಿದ್ಧಾಂತಗಳಿಗೆ ಬದ್ಧರಾಗಿ ನಡೆದುಕೊಂಡ ಅವರು ಯಾವುದೇ ಸಂದರ್ಭದಲ್ಲೂ ತಮ್ಮ ತತ್ವಗಳಿಗೆ ರಾಜಿ ಮಾಡಿಕೊಂಡ ಉದಾಹರಣೆಗಳಿಲ್ಲ ಎಂದರು. 

ಎಂ.ಪಿ. ಪ್ರಕಾಶ್‌ ಅವರು ಕ್ಯಾನ್ಸರ್‌ಗೆ ತುತ್ತಾದಾಗ ಅವರನ್ನು ಭೇಟಿಯಾಗಲು ನಾನು ಅವರ ಮನೆಗೆ ಹೋಗಿದ್ದೆ. ಉತ್ತಮ ವ್ಯಕ್ತಿತ್ವ ಮತ್ತು ಸದ್ಗುಣಗಳನ್ನು ಹೊಂದಿದ್ದ ಅವರು ಎಂದಿಗೂ ಸಿಗರೇಟ್‌ ಸೇದುವುದು ಅಥವಾ ಮದ್ಯಪಾನ ಮಾಡುವಂತಹ ದುಶ್ಚಟಗಳಿಗೆ ಒಳಗಾಗಿರಲಿಲ್ಲ. ಆದರೂ ಅವರು ಕ್ಯಾನ್ಸರ್‌ಗೆ ತುತ್ತಾಗಿರುವುದು ನನಗೆ ಅತ್ಯಂತ ಆಶ್ಚರ್ಯ ಮತ್ತು ನೋವುಂಟು ಮಾಡಿದ ಸಂಗತಿಯಾಗಿತ್ತು. ಅವರು ನಿಧನ ಹೊಂದುವ ಸುಮಾರು ಹದಿನೈದು ದಿನಗಳ ಮೊದಲು ಜನಾರ್ಧನ ಹೋಟೆಲ್‌ನಲ್ಲಿ ಅವರೊಂದಿಗೆ ಕುಳಿತು ದೋಸೆ ಸವಿದಿದ್ದೆ. ಅವರು ನಿಧನ ಹೊಂದಿರುವ ಮಾಹಿತಿ ಬಂದಾಗ ನನಗೆ ನಂಬಲು ಸಾಧ್ಯವಾಗಿರಲಿಲ್ಲ ಎಂದರು.

 2004ರಲ್ಲಿ ನಾವು ಎಲ್ಲರೂ ಜನತಾದಳ ಎಸ್‌ ಪಕ್ಷದಲ್ಲಿದ್ದೆವು. ದೇವೇಗೌಡರು, ಇಬ್ರಾಹಿಂ, ಎಂ.ಪಿ. ಪ್ರಕಾಶ್‌, ಸಿಂಧ್ಯಾ ಮತ್ತು ನಾನು ಸೇರಿ ಪಕ್ಷದ ಪ್ರಮುಖ ನಾಯಕರಾಗಿದ್ದೆವು. ಆ ಸಂದರ್ಭದಲ್ಲಿ ಸಚಿವ ಸಂಪುಟ ರಚನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಯಾಗಿ ಯಾರು ಆಯ್ಕೆಯಾಗಬೇಕು ಎಂಬ ಚರ್ಚೆ ನಡೆದಾಗ, ಎಂ.ಪಿ. ಪ್ರಕಾಶ್‌ ಅವರು ನನ್ನ ಹೆಸರನ್ನೇ ಸೂಚಿಸಿ, ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ತಮ್ಮನ್ನು ತಾವೇ ಮುಖ್ಯಮಂತ್ರಿಯಾಗಬೇಕು ಎಂದು ಅವರು ಎಂದಿಗೂ ಹೇಳಿಕೊಂಡವರಲ್ಲ. ನಂತರ ಜನತಾದಳ ಎಸ್‌ ಮತ್ತು ಕಾಂಗ್ರೆಸ್‌ ಮೈತ್ರಿ ಸರ್ಕಾರ ರಚನೆಯಾದ ಹಿನ್ನೆಲೆಯಲ್ಲಿ ಧರಂ ಸಿಂಗ್‌ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಆ ಸರ್ಕಾರದಲ್ಲಿ ನಾನು ಉಪಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರೆ, ಎಂ.ಪಿ. ಪ್ರಕಾಶ್‌ ಅವರು ಸಚಿವರಾಗಿ ಸೇವೆ ಸಲ್ಲಿಸಿದ್ದರು ಎಂದರು.

ನಾನು ಅಹಿಂದ ಸಂಘಟನೆಯನ್ನು ರೂಪಿಸುತ್ತಿದ್ದ ಸಂದರ್ಭದಲ್ಲಿ ಎಂ.ಪಿ. ಪ್ರಕಾಶ್‌ ಅವರನ್ನೂ ನನ್ನೊಂದಿಗೆ ಬರಲು ಆಹ್ವಾನಿಸಿದ್ದೆ. ಆದರೆ ಅವರು, ತಾವು ರಾಜಕೀಯ ಪಕ್ಷದಲ್ಲಿಯೇ ಮುಂದುವರಿಯುವುದಾಗಿ ತಿಳಿಸಿದ್ದರು. ಎಂ.ಪಿ. ಪ್ರಕಾಶ್‌ ಅವರ ವಿಶೇಷ ಗುಣವೆಂದರೆ, ಸಚಿವ ಸಂಪುಟ ಅಥವಾ ವಿಧಾನಸಭೆಯಲ್ಲಿ ಯಾವುದೇ ಇಲಾಖೆಗೆ ಸಂಬಂಧಿಸಿದ ಪ್ರಶ್ನೆ ಬಂದರೂ ಅದಕ್ಕೆ ಸಮರ್ಪಕವಾಗಿ ಉತ್ತರಿಸುವಷ್ಟು ವಿಷಯಜ್ಞಾನ ಅವರಿಗಿತ್ತು. ಅವರು ಪ್ರತಿಯೊಂದು ಇಲಾಖೆಯ ಕಾರ್ಯಚಟುವಟಿಕೆಗಳ ಬಗ್ಗೆ ಗಮನಹರಿಸುತ್ತಿದ್ದಂತಹ ಅಪರೂಪದ ರಾಜಕಾರಣಿಗಳಲ್ಲಿ  ಅವರು ಒಬ್ಬರಾಗಿದ್ದರು ಎಂದರು.

ಎಂ.ಪಿ. ಪ್ರಕಾಶ್‌ ಅವರಂತಹ ಮುತ್ಸದ್ದಿ ಮತ್ತು ಜನಪರ ನಾಯಕ ಕನಿಷ್ಠ ಒಮ್ಮೆಯಾದರೂ ಕರ್ನಾಟಕದ ಮುಖ್ಯಮಂತ್ರಿಯಾಗಬೇಕಿತ್ತು. ಹೂವಿನ ಹಡಗಲಿಯ ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜಿಗೆ ಎಂ.ಪಿ. ಪ್ರಕಾಶ್‌ ಅವರ ಹೆಸರನ್ನು ನಾಮಕರಣ ಮಾಡುವಂತೆ ನಾನೂ ಸಹ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ. ಆ ಮೂಲಕ ಅವರ ಹೆಸರು ಶಾಶ್ವತವಾಗಿ ಉಳಿಯಲಿದೆ. ನಾನು ಮೈಸೂರು ದಸರಾ ಉತ್ಸವವನ್ನು ಆಯೋಜಿಸುತ್ತಿದ್ದ ಸಂದರ್ಭದಲ್ಲಿ, ಹಂಪಿ ಉತ್ಸವವನ್ನೂ ಆರಂಭಿಸೋಣ ಎಂಬ ಸಲಹೆಯನ್ನು ನೀಡಿ, ಅದಕ್ಕಾಗಿ ನನ್ನಿಂದ ಅನುದಾನ ಮಂಜೂರು ಮಾಡಿಸಿಕೊಂಡು, ಮೊದಲ ಬಾರಿಗೆ ಹಂಪಿ ಉತ್ಸವವನ್ನು ಯಶಸ್ವಿಯಾಗಿ ಆಯೋಜಿಸಿದವರು ಎಂ.ಪಿ. ಪ್ರಕಾಶ್‌ ಅವರೇ. ಎಂ.ಪಿ. ಪ್ರಕಾಶ್‌ ಅವರು ತಮ್ಮ ಆದರ್ಶಗಳು, ಸೇವೆ ಮತ್ತು ವ್ಯಕ್ತಿತ್ವದ ಮೂಲಕ ಜನಮಾನಸದಲ್ಲಿ ಎಂದೆಂದಿಗೂ ಜೀವಂತವಾಗಿರುತ್ತಾರೆ ಎಂಬ ದೃಢ ನಂಬಿಕೆ ನನಗಿದೆ ಎಂದರು.

ಲಿಂಗನಾಯಕನಹಳ್ಳಿ ಜಂಗಮ ಕ್ಷೇತ್ರದ ಶ್ರೀ ಚನ್ನವೀರ ಶಿವಯೋಗಿ ಸ್ವಾಮೀಜಿ, ಸಂಸದರಾದ ತುಕಾರಾಂ, ಶಾಸಕರಾದ ಲತಾ ಮಲ್ಲಿಕಾರ್ಜುನ, ಕೃಷ್ಣಾ ನಾಯಕ, ರಾಘವೇಂದ್ರ ಹಿಟ್ನಾಳ್, ಗಣೇಶ ಪ್ರಸಾದ್, ಅನ್ನಪೂರ್ಣ, ಮಾಜಿ ಸಚಿವರಾದ ಪರಮೇಶ್ವರ ನಾಯಕ, ಎಸ್.ಎಸ್. ಪಾಟೀಲ್, ಲೀಲಾದೇವಿ ಪ್ರಸಾದ್, ಅಮರೇಗೌಡ ಬಯ್ಯಾಪುರ, ಕಿರುತೆರೆ ನಿರ್ದೇಶಕ ಟಿ.ಎನ್. ಸೀತಾರಾಮ್ ಅವರು ಈ ವೇಳೆ ಉಪಸ್ಥಿತರಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular