ಬೆಳಗಾವಿ: ಕುಟುಂಬದವರಿಂದಲೇ ಪ್ರೇಯಸಿ ಹತ್ಯೆಯಾದ ಕಾರಣ ಮನನೊಂದು ಪ್ರಿಯಕರ ಆಕೆಯ ಜನ್ಮದಿನದಂದೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ನದಿಗುಡಕ್ಷೇತ್ರ ಗ್ರಾಮದ ಕೃಷ್ಣ ಸಹದೇವ ಪಾಟೀಲ(30) ಆತ್ಮಹತ್ಯೆ ಮಾಡಿಕೊಂಡವರು. ರಾಯಭಾಗ ತಾಲೂಕಿನ ಹುಬ್ಬರವಾಡಿ ಗ್ರಾಮದ ವಿವಾಹಿತ ಮಹಿಳೆ ಮತ್ತು ಕೃಷ್ಣ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಕೆಲವು ದಿನಗಳ ಹಿಂದೆ ಇಬ್ಬರೂ ಮನೆ ಬಿಟ್ಟು ಹೋಗಿದ್ದು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ನಂತರದಲ್ಲಿ ಪೊಲೀಸರು ಇಬ್ಬರನ್ನು ಪತ್ತೆ ಮಾಡಿ ಕರೆತಂದು ಆಯಾ ಕುಟುಂಬದವರಿಗೆ ಒಪ್ಪಿಸಿದ್ದರು.
ನಂತರದಲ್ಲಿ ಮಹಿಳೆಯನ್ನು ಅವರ ಕುಟುಂಬದವರು ಮಹಾರಾಷ್ಟ್ರಕ್ಕೆ ಕರೆದುಕೊಂಡು ಹೋಗಿದ್ದರು. ಆಕೆಯ ಸುಳಿವು ಸಿಗದ ಕಾರಣ ಅನುಮಾನಗೊಂಡ ಕೃಷ್ಣ ಯಮಕನಮರಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ತನಿಖೆ ನಡೆಸಿದ ಮಹಾರಾಷ್ಟ್ರದಲ್ಲಿ ಮಹಿಳೆಯನ್ನು ಆಕೆಯ ಕುಟುಂಬದವರೇ ಕೊಲೆ ಮಾಡಿರುವುದು ಬೆಳಕಿಗೆ ಬಂದಿತ್ತು.
ಪ್ರಿಯತಮೆ ಸಾವಿನಿಂದ ತೀವ್ರವಾಗಿ ಮನನೊಂದ ಕೃಷ್ಣ ಸಹದೇವ ಪಾಟೀಲ ಜೂನ್ 4ರಂದು ಪ್ರಿಯತಮೆಯ ಜನ್ಮದಿನದಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

