HomeKarnatakaಸರ್ಕಾರಿ ನೌಕರರ ಗೈರು, ವಿಳಂಬಕ್ಕೆ ಬ್ರೇಕ್: ಇನ್ಮುಂದೆ 10ಗಂಟೆಗೆ ಕಚೇರಿಯಲ್ಲಿರಬೇಕು; ಕರ್ತವ್ಯ ಆಪ್ ನಲ್ಲಿ ಹಾಜರಾತಿ...

ಸರ್ಕಾರಿ ನೌಕರರ ಗೈರು, ವಿಳಂಬಕ್ಕೆ ಬ್ರೇಕ್: ಇನ್ಮುಂದೆ 10ಗಂಟೆಗೆ ಕಚೇರಿಯಲ್ಲಿರಬೇಕು; ಕರ್ತವ್ಯ ಆಪ್ ನಲ್ಲಿ ಹಾಜರಾತಿ ಕಡ್ಡಾಯ

ಬೆಂಗಳೂರು: ಇನ್ಮುಂದೆ ಸರ್ಕಾರಿ ನೌಕರರು ಕಚೇರಿಗೆ ಬೇಕಾ ಬಿಟ್ಟಿಯಾಗಿ ಬರುವುದು, ವಿಳಂಬವಾಗಿ ಬರುವುದು, ಮನಬಂದಂತೆ ಗೈರು ಹಾಜರಾಗುವಂತಿಲ್ಲ. ರಾಜ್ಯದ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರ ಗೈರುಹಾಜರಿ ಹಾಗೂ ವಿಳಂಬಕ್ಕೆ ಬ್ರೇಕ್ ಹಾಕಲು ರಾಜ್ಯ ಸರ್ಕಾರ ಎಐ (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನದ ಮೊರೆ ಹೋಗಿದೆ.

ಸರ್ಕಾರದ ಪ್ರತಿಯೊಬ್ಬ ಅಧಿಕಾರಿ ಮತ್ತು ಸಿಬ್ಬಂದಿಯು ಪ್ರತಿದಿನ ಬೆಳಗ್ಗೆ 10 ಗಂಟೆಯೊಳಗೆ ಕಡ್ಡಾಯವಾಗಿ ಕಚೇರಿಗೆ ಹಾಜರಾಗಬೇಕೆಂದು ಮುಖ್ಯಮಂತ್ರಿಗಳು ನಡೆಸಿದ ಸಭೆಯಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಇದರ ಬೆನ್ನಲ್ಲೇ, ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರು ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸರ್ಕಾರಿ ನೌಕರರ ಹಾಜರಾತಿಯನ್ನು ಡಿಜಿಟಲೀಕರಣಗೊಳಿಸಲು ಇ-ಆಡಳಿತ ಇಲಾಖೆಯು ಕರ್ತವ್ಯ (KAAMS) App ಸಿದ್ಧಪಡಿಸಿದೆ. ಈಗಾಗಲೇ HRMS ತಂತ್ರಾಂಶದಲ್ಲಿ ಲಭ್ಯವಿರುವ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರ ಮಾಹಿತಿಯನ್ನು ಇದರಲ್ಲಿ ನೋಂದಾಯಿಸಲಾಗಿದೆ. ಆದರೆ, ಬಹಳಷ್ಟು ಸಿಬ್ಬಂದಿಗಳು ಈ ಆಪ್ ಅನ್ನು ನಿರಂತರವಾಗಿ ಬಳಸುತ್ತಿಲ್ಲದಿರುವುದು ಸರ್ಕಾರದ ಗಮನಕ್ಕೆ ಬಂದಿದೆ.

ಹೀಗಾಗಿ, ಇನ್ನು ಸರ್ಕಾರದ ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು ಮತ್ತು ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಸೇರಿದಂತೆ ಪ್ರತಿಯೊಬ್ಬರೂ ಬೆಳಗ್ಗೆ 10 ಗಂಟೆಗೆ ಕರ್ತವ್ಯ ಆಪ್‌ನಲ್ಲಿ ಚೆಕ್ ಇನ್ ಹಾಗೂ Check Out ದಾಖಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಇ-ಆಡಳಿತ ಇಲಾಖೆಯು ಅತ್ಯಾಧುನಿಕ AI (ಕೃತಕ ಬುದ್ಧಿಮತ್ತೆ) ತಂತ್ರಾಂಶವನ್ನು ಬಳಸಿಕೊಳ್ಳುತ್ತಿದೆ. ಪ್ರತಿದಿನ ಬೆಳಗ್ಗೆ 10 ಗಂಟೆಗೆ ಹಾಜರಾತಿ ದಾಖಲಿಸದ ಅಧಿಕಾರಿ ಮತ್ತು ಸಿಬ್ಬಂದಿಗಳ ಜಿಲ್ಲಾವಾರು ಹಾಗೂ ಕಚೇರಿವಾರು ಮಾಹಿತಿಯನ್ನು ಎಐ ತಂತ್ರಾಂಶವು ಸ್ವಯಂಚಾಲಿತವಾಗಿ ವರದಿ ಸಿದ್ಧಪಡಿಸಲಿದೆ. ಈ ಎಐ ಜನರೇಟೆಡ್ ವರದಿಯನ್ನು ಆಯಾ ಇಲಾಖೆಯ ಮುಖ್ಯಸ್ಥರ ವೈಯಕ್ತಿಕ ಲಾಗಿನ್ ಡ್ಯಾಶ್‌ ಬೋರ್ಡ್‌ಗೆ ನೇರವಾಗಿ ಕಳುಹಿಸಲಾಗುತ್ತದೆ. ಇಲಾಖಾ ಮುಖ್ಯಸ್ಥರು ಪ್ರತಿದಿನ ಈ ಡ್ಯಾಶ್‌ ಬೋರ್ಡ್ ಪರಿಶೀಲಿಸಿ, ಹಾಜರಾತಿ ದಾಖಲಿಸದವರಿಗೆ ತಕ್ಷಣವೇ ಸೂಕ್ತ ಸೂಚನೆ ಅಥವಾ ನೋಟಿಸ್ ನೀಡಬೇಕಾಗುತ್ತದೆ.

ಒಂದು ವೇಳೆ ಅಧಿಕಾರಿಗಳು ಅಥವಾ ಸಿಬ್ಬಂದಿಗಳು ಕಚೇರಿ ಕೆಲಸದ ನಿಮಿತ್ತ ಹೊರಗಡೆ ಪ್ರವಾಸದಲ್ಲಿದ್ದರೆ ಅದಕ್ಕೂ ಆ್ಯಪ್​ನಲ್ಲಿ ಅವಕಾಶ ಕಲ್ಪಿಸಲಾಗಿದೆ. ಅಂತಹ ನೌಕರರು ಆ್ಯಪ್​ನಲ್ಲಿರುವ OOD Option ಆಯ್ಕೆ ಮಾಡಿ, ತಮ್ಮ ಪ್ರವಾಸದ ಉದ್ದೇಶವನ್ನು ನಮೂದಿಸಿ ಹಾಜರಾತಿ ದಾಖಲಿಸಬೇಕು. ತದನಂತರ ಇದನ್ನು ಸಂಬಂಧಪಟ್ಟ ಮೇಲಾಧಿಕಾರಿಗಳು ಪರಿಶೀಲಿಸಿ ಧೃಡೀಕರಿಸಬೇಕಾಗುತ್ತದೆ.

ಈ ಆದೇಶವನ್ನು ಕಡ್ಡಾಯವೆಂದು ಪರಿಗಣಿಸಲಾಗಿದ್ದು, ತಕ್ಷಣದಿಂದಲೇ ಜಾರಿಗೆ ಬರುವಂತೆ ಕ್ರಮ ಕೈಗೊಳ್ಳಲು ಮುಖ್ಯ ಕಾರ್ಯದರ್ಶಿಗಳು ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular