ಬೆಂಗಳೂರು: ದೇವಸ್ಥಾನಕ್ಕೆ ಹೋಗಿ ಭಕ್ತಿಯಿಂದ ದೇವರ ದರ್ಶನ ಮುಗಿಸಿ ಹೊರಬರುವಾಗ ಮೆಟ್ಟಿಲ ಮೇಲೆ ಬಿಟ್ಟಿದ್ದ ಚಪ್ಪಲಿ ಕಾಣದಿದ್ದರೆ ಹೇಗಾಗಬೇಡ? 200 ರೂಪಾಯಿಯ ಚಪ್ಪಲಿ ಹೋದರೂ ಆ ಕ್ಷಣಕ್ಕೆ ನಮಗೆ ಆಗುವ ಆ ನೋವು ಅಷ್ಟಿಷ್ಟಲ್ಲ ದೇವಸ್ಥಾನಕ್ಕೆ ಬಂದು ಪುಣ್ಯ ಸಿಕ್ಕೋ ಇಲ್ವೋ ಗೊತ್ತಿಲ್ಲ ಇದ್ದ ಚಪ್ಪಲಿ ಮಾತ್ರ ಹೋಯ್ತು ಅಂತ ಗೊಣಗುತ್ತಾ ಬರಿಗಾಲಿನಲ್ಲಿ ಮನೆಗೆ ಬಂದ ಅನುಭವ ನಮಗೆಲ್ಲಾ ಒಂದಲ್ಲ ಒಂದು ಬಾರಿ ಆಗಿರುತ್ತದೆ.
ಆದರೆ ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತೆ ಗೊತ್ತಾ? ನಿಮ್ಮ ಚಪ್ಪಲಿ ಕಳುವಾದರೆ ಅದು ನೀವು ಅಂದುಕೊಂಡಂತೆ ಬ್ಯಾಡ್ ಲಕ್ ಅಲ್ಲ, ಬದಲಿಗೆ ನಿಮ್ಮ ಅದೃಷ್ಟದ ಬಾಗಿಲು ತೆರೆಯುತ್ತಿದೆ ಎಂದರ್ಥ
1.ಶನಿವಾರ ಚಪ್ಪಲಿ ಹೋದರೆ ಅದು ಶುಭ ಶಕುನ
ಜ್ಯೋತಿಷ್ಯದ ಪ್ರಕಾರ, ಚಪ್ಪಲಿ ಅಥವಾ ಪಾದರಕ್ಷೆಗಳು ಶನಿದೇವನಿಗೆ ಸಂಬಂಧಿಸಿದ ವಸ್ತುಗಳು. ಮನುಷ್ಯನ ಪಾದಗಳಲ್ಲಿ ಶನಿಯ ನೆಲೆ ಇರುತ್ತದೆ ಎನ್ನಲಾಗುತ್ತದೆ. ಅದರಲ್ಲೂ ಶನಿವಾರದ ದಿನ ದೇವಸ್ಥಾನದಲ್ಲಿ ಚಪ್ಪಲಿ ಕಳೆದುಹೋದರೆ, ನಿಮ್ಮ ಜಾತಕದಲ್ಲಿರುವ ಶನಿ ದೋಷದ ಪ್ರಭಾವ ಕಡಿಮೆಯಾಗುತ್ತಿದೆ ಎಂದರ್ಥ. ನಿಮ್ಮ ಪಾದರಕ್ಷೆಯ ಜೊತೆಗೆ ನಿಮ್ಮ ದಾರಿದ್ರ್ಯವೂ ತೊಲಗಿತು ಎಂಬ ನಂಬಿಕೆ ನಮ್ಮಲ್ಲಿದೆ.
2.ದಾರಿದ್ರ್ಯ ಕಳೆದಂತೆ ಲೆಕ್ಕ
ದೇವಸ್ಥಾನದಲ್ಲಿ ಚಪ್ಪಲಿ ಕಳೆದುಹೋದರೆ ಅದನ್ನು ದಾರಿದ್ರ್ಯ ಕಳೆದಂತೆ ಎಂದು ಹಿರಿಯರು ಹೇಳುತ್ತಾರೆ. ಜೀವನದಲ್ಲಿ ಸಾಲದ ಬಾಧೆ ಅಥವಾ ಕೆಲಸಗಳಲ್ಲಿ ಅಡೆತಡೆ ಅನುಭವಿಸುತ್ತಿರುವವರಿಗೆ ಇದು ಶುಭ ಬೆಳವಣಿಗೆ. ನಿಮ್ಮ ಪಾಪದ ಹೊರೆ ಕಡಿಮೆಯಾಗಿ ಜೀವನದಲ್ಲಿ ಹೊಸ ಬೆಳಕು ಬರಲಿದೆ ಎಂಬುದರ ಸಂಕೇತವಿದು.
3.ನೀವಾಗಿಯೇ ಚಪ್ಪಲಿ ಬಿಟ್ಟು ಬರಬಹುದು
ಶನಿ ದೋಷದಿಂದ ಮುಕ್ತಿ ಪಡೆಯಲು ಬಯಸುವವರು ಶನಿವಾರದಂದು ದೇವಸ್ಥಾನಕ್ಕೆ ಹೋಗಿ ತಾವು ಧರಿಸಿದ ಹಳೆಯ ಕಪ್ಪು ಚಪ್ಪಲಿಯನ್ನು ಅಲ್ಲೇ ಬಿಟ್ಟು ಬರಬಹುದು.
ಇಲ್ಲಿ ನೀವು ಗಮನಿಸಬೇಕಾದ ವಿಷಯವೆಂದರೆ ಆ ಚಪ್ಪಲಿಯನ್ನು ನೀವು ಕೆಲವು ದಿನಗಳಾದರೂ ಬಳಸಿದ ಹಳೆಯ ಪಾದರಕ್ಷೆಯಾಗಿರಬೇಕು. ಹೊಸ ಚಪ್ಪಲಿ ಬಿಟ್ಟು ಬರುವುದಕ್ಕಿಂತ, ನೀವು ಬಳಸಿದ ಚಪ್ಪಲಿ ಬಿಟ್ಟು ಬರುವುದು ಶನಿದೋಷ ನಿವಾರಣೆಗೆ ಬೆಸ್ಟ್ ಐಡಿಯಾ
ಆಧ್ಯಾತ್ಮಿಕ ಅರ್ಥವೇನು?
ದೇವಸ್ಥಾನದ ಹೊರಗೆ ಚಪ್ಪಲಿ ಬಿಡುವುದು ಅಂದರೆ ಕೇವಲ ಪಾದರಕ್ಷೆ ಬಿಡುವುದಲ್ಲ ನಮ್ಮ ಅಹಂಕಾರ, ದ್ವೇಷ ಮತ್ತು ಹೆಮ್ಮೆಯಂತಹ ನಕಾರಾತ್ಮಕ ಭಾವನೆಗಳನ್ನು ಹೊರಗೇ ಬಿಟ್ಟು ದೇವರ ಮುಂದೆ ಶರಣಾಗುವುದು ಎಂದರ್ಥ. ಇದು ರಾಮಾಯಣದಲ್ಲಿ ಭರತನು ರಾಮನ ಪಾದುಕೆಗಳನ್ನು ಸಿಂಹಾಸನದ ಮೇಲೆ ಇಟ್ಟು ರಾಜ್ಯಭಾರ ಮಾಡಿದ ಪವಿತ್ರ ಸಂಪ್ರದಾಯವನ್ನು ನೆನಪಿಸುತ್ತದೆ.ಇನ್ನು ಮುಂದೆ ದೇವಸ್ಥಾನದಲ್ಲಿ ನಿಮ್ಮ ಚಪ್ಪಲಿ ಕಳುವಾದಾಗ ಕಳ್ಳನಿಗೆ ಬೈಯುವ ಬದಲು, ಮನಸ್ಸಿನಲ್ಲೇ ಶನಿದೇವನಿಗೆ ಕೈಮುಗಿಯಿರಿ. ನನ್ನ ಕಷ್ಟಗಳೆಲ್ಲಾ ಈ ಚಪ್ಪಲಿ ಜೊತೆಗೆ ಹೋಗಲಿ ಎಂದು ಪ್ರಾರ್ಥಿಸಿ. ಬರಿಗಾಲಿನಲ್ಲಿ ಮನೆಗೆ ಬರುವಾಗ ಆ ಚಪ್ಪಲಿಯ ನೋವಿಗಿಂತ, ನಿಮ್ಮ ಅದೃಷ್ಟ ಬದಲಾಗುತ್ತಿದೆ ಎಂಬ ಖುಷಿ ಹೆಚ್ಚಿರಲಿ

