ರಾಯಚೂರು: ವಕ್ಫ್ ಬೋರ್ಡ್ ಅನುದಾನ ದುರ್ಬಳಕೆ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿದ್ದಕ್ಕೆ ವ್ಯಕ್ತಿ ಮೇಲೆ 30 ಜನರ ಗುಂಪು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.
ಸನಾವುಲ್ಲಾ ಎಂಬುವವರ ಮೇಲೆ ಸುಮಾರು 30 ಜನರ ಗುಂಪು ಚಾಕು, ಭರ್ಜಿಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದೆ. ತಹಶಿಲ್ದಾರ್ ಕಚೇರಿ ಬಳಿ ನಡೆದ ಈ ಘಟನೆಯಲ್ಲಿ ಸನಾವುಲ್ಲಾ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ರಾಯಚೂರು ತಾಲೂಕಿನ ತಲಮಾರಿ ಗ್ರಾಮದ ಮಸೀದಿ, ಖಬರಸ್ತಾನ ಹಾಗೂ ಈದ್ಗಾ ಮೈದಾನದ ಅಭಿವೃದ್ಧಿಗಾಗಿ 2017-19ನೇ ಸಾಲಿನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಹಬ್ ಹಾಗೂ ವಕ್ಫ್ ಮಂಡಳಿಯಿಂದ ಒಟ್ಟು 26 ಲಕ್ಷ ರೂಪಾಯಿ ಅನುದಾನ ಬಿಡುಗಡೆಯಾಗಿತ್ತು. ಆದರೆ ಈ ಕಾಮಗಾರಿಯಲ್ಲಿ ಭಾರಿ ಅನುದಾನ ದುರ್ಬಳಕೆಯಾಗಿದೆ ಎಂದು ಆರೋಪಿಸಿ ತಲಮಾರಿ ಗ್ರಾಮದ ಸನಾವುಲ್ಲಾ ಎಂಬುವವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಇತ್ತೀಚೆಗಷ್ಟೇ ಲೋಕಾಯುಕ್ತ ಅಧಿಕಾರಿಗಳ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿತ್ತು.
ಇದರಿಂದ ತೀವ್ರ ಆಕ್ರೋಶಗೊಂಡಿದ್ದ ಎದುರಾಳಿಗಳು, ಪ್ರಕರಣವನ್ನು ರಾಜಿ ಮಾಡಿಕೊಳ್ಳುವ ನೆಪದಲ್ಲಿ ದೂರುದಾರ ಸನಾವುಲ್ಲಾನನ್ನು ರಾಯಚೂರಿನ ತಹಶಿಲ್ದಾರ್ ಕಚೇರಿ ಬಳಿ ಕರೆಸಿಕೊಂಡಿದ್ದಾರೆ. ಮಾತುಕತೆ ನಡೆಸುವಾಗಲೇ ಏಕಾಏಕಿ ದಾಳಿ ನಡೆಸಿದ್ದಾರೆ. ಸುಮಾರು 30 ಜನರ ಗುಂಪು ಚಾಕು, ಭರ್ಜಿ ಹಾಗೂ ಮಾರಕಾಸ್ತ್ರಗಳಿಂದ ಸನಾವುಲ್ಲಾ ಮತ್ತು ಆತನ ಸ್ನೇಹಿತರ ಮೇಲೆ ಮನಸ್ಸೋಇಚ್ಛೆ ಹಲ್ಲೆ ನಡೆಸಿದ್ದಾರೆ.
ನಡುರಸ್ತೆಯಲ್ಲೇ ಮಾರಣಂತಿಕ ಹಲ್ಲೆ ನಡೆದಿದ್ದು, ಸನಾವುಲ್ಲಾ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸನಾವುಲ್ಲಾ ಅವರಿಗೆ ಬರೋಬ್ಬರಿ 24 ಹೊಲಿಗೆ ಹಾಕಲಾಗಿದೆ.
ರಾಯಚೂರಿನ ಓಪೆಕ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಪೊಲೀಸ್ ಭದ್ರತೆಯೊಂದಿಗೆ ಸನಾವುಲ್ಲಾ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಹಲ್ಲೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳಾದ ಅಶುಪಟೇಲ್, ನಿಜಾಮ್ ಪಟೇಲ್, ಇರ್ಫಾನ್ ಸೇರಿದಂತೆ 15ಕ್ಕೂ ಹೆಚ್ಚು ಜನರ ವಿರುದ್ಧ ರಾಯಚೂರಿನ ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

