
ಮುಂಬೈ: ಬಾಲಿವುಡ್ ನಟ ಸನ್ನಿ ಡಿಯೋಲ್ ಮದ್ಯಪಾನ ಮಾಡಿ ಮುಂಬೈನ ರಸ್ತೆಯಲ್ಲಿ ಓಡಾಡುತ್ತಿದ್ದ ವಿಡಿಯೋ ಭಾರಿ ವೈರಲ್ ಆಗಿದೆ.
ಕುಡಿದ ಮತ್ತಿನಲ್ಲಿ ಮುಂಬೈನ ಜುಹು ಸರ್ಕಲ್‌ನಲ್ಲಿ ನಟ ಸನ್ನಿ ಡಿಯೋಲ್ ತೂರಾಡುತ್ತಾ ರಸ್ತೆ ಮಧ್ಯೆ ಬಂದಿದ್ದಾರೆ. ಈ ವೇಳೆ ಅದೇ ಮಾರ್ಗದಲ್ಲಿ ಬಂದ ಆಟೋ ಚಾಲಕನೊಬ್ಬ ನಟನನ್ನು ಕಂಡು ಆಟೋ ನಿಲ್ಲಿಸಿ ತಮ್ಮ ಆಟೋದಲ್ಲಿ ಸನ್ನಿ ಡಿಯೋಲ್ ಅವರನ್ನು ಕೂರಿಸಿಕೊಂಡಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಗದರ್- 2 ಚಿತ್ರದ ಯಶಸ್ಸಿನಲ್ಲಿರುವ ಸನ್ನಿ ಡಿಯೋಲ್ ಮಂಗಳವಾರ ರಾತ್ರಿ ಮುಂಬೈನಲ್ಲಿ ಮದ್ಯಪಾನ ಮಾಡಿ ರಸ್ತೆಯಲ್ಲಿ ತೂರಾಡುತ್ತಿರುವುದು ಅಚ್ಚರಿಗೆ ಕಾರಣವಾಗಿದೆ. ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೀಡಿಯೊವನ್ನು ಹಂಚಿಕೊಂಡಿರುವ ನೆಟಿಜನ್, ಮುಂಬೈನ ಜುಹು ಸರ್ಕಲ್‌ನಲ್ಲಿ ಸನ್ನಿ ಡಿಯೋಲ್ ಅಮಲೇರಿದ ಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದಲ್ಲದೇ ಕಂಟ್ರೋಲ್ ತಪ್ಪಿ ತೂರಾಡುತ್ತಿರುವುದಾಗಿ ಕಿಡಿಕಾರಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ ಸನ್ನಿ ಡಿಯೋಲ್ ಎಡವುತ್ತಾ ರಸ್ತೆಯ ಮಧ್ಯದಲ್ಲಿ ನಡೆಯುತ್ತಿದ್ದಾರೆ. ಇದೇ ವೇಳೆ ಬಂದ ಆಟೋ ಚಾಲಕ ತನ್ನ ಆಟೋ ನಿಲ್ಲಿಸಿ ವಾಹನದೊಳಗೆ ಕುಳಿತುಕೊಳ್ಳಲು ಸಹಾಯ ಮಾಡಿದ್ದಾರೆ.
ಸನ್ನಿ ಡಿಯೋಲ್ ರ ಈ ವಿಡಿಯೋ ನೋಡಿ ಕೆಲವರು ಇದು ಸಾರ್ವಜನಿಕರನ್ನು ದಾರಿ ತಪ್ಪಿಸುವ ಮತ್ತು ಸನ್ನಿ ವಿರುದ್ಧ ದ್ವೇಷವನ್ನು ಹರಡುವ ಉದ್ದೇಶದಿಂದ ಹರಿಬಿಟ್ಟಿರುವ ವಿಡಿಯೋ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ಸನ್ನಿ ಡಿಯೋಲ್ ಶಶಾಂಕ್ ಉದ್ರಾಪುರ್ಕರ್ ನಿರ್ದೇಶನದ ಮುಂಬರುವ ಚಿತ್ರ ‘ಸಫರ್’ ಚಿತ್ರೀಕರಣ ಮಾಡುತ್ತಿದ್ದು, ಈ ಸಿನಿಮಾ ದೃಶ್ಯವಿರಬಹುದು ಎಂದಿದ್ದಾರೆ.
ಕೆಲವು ತಿಂಗಳ ಹಿಂದೆ, ಸನ್ನಿ ಡಿಯೋಲ್ ಸಂದರ್ಶನವೊಂದರಲ್ಲಿ ನಾನು ಕುಡಿಯುವುದಿಲ್ಲ. ಜನರು ಮದ್ಯವನ್ನು ಹೇಗೆ ಇಷ್ಟಪಡುತ್ತಾರೆ ಮತ್ತು ಸಹಿಸಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಹಲವು ವರ್ಷಗಳ ಹಿಂದೆ ನಾನು ಇಂಗ್ಲೆಂಡ್‌ಗೆ ಭೇಟಿ ನೀಡಿದಾಗ ಇಂಗ್ಲಿಷ್ ಸಮಾಜಕ್ಕೆ ಹೊಂದಿಕೊಳ್ಳಲು ಮೊದಲ ಬಾರಿ ಮದ್ಯಪಾನ ಮಾಡಲು ಪ್ರಯತ್ನಿಸಿದ್ದೆ. ಆದರೆ ಇಷ್ಟವಾಗಲಿಲ್ಲ. ಅದು ಕಹಿಯಾಗಿದೆ, ದುರ್ವಾಸನೆಯಿಂದ ಕೂಡಿದೆ ಮತ್ತು ತಲೆನೋವು ತರಿಸುತ್ತದೆ. ಅದನ್ನು ಜನರು ಹೇಗೆ ಅಭ್ಯಾಸ ಮಾಡಿಕೊಳ್ಳುತ್ತಾರೆ ಎಂಬುದು ಅರ್ಥವಾಗಲ್ಲ ಎಂದು ಹೇಳಿದ್ದರು. ಆದರೆ ಈಗ ಸನ್ನಿ ಡಿಯೋಲ್ ಮುಂಬೈ ಜುಹು ಸರ್ಕಲ್ ನಲ್ಲಿ ಕುಡಿದ ಮತ್ತಲ್ಲಿ ತೂರಾಡುತ್ತಿರುವ ದೃಶ್ಯ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.