ಬೆಂಗಳೂರು: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾರರ ಮೇಲೆ ಪ್ರಭಾವ ಬೀರುವ ಸಂಭವ ಹಿನ್ನೆಲೆಯಲ್ಲಿ ಒಂದೇ ಜಿಲ್ಲೆಯಲ್ಲಿ ಮೂರು ವರ್ಷದಿಂದ ಸೇವೆ ಸಲ್ಲಿಸುತ್ತಿರುವ ಅಥವಾ ಸ್ವಂತ ಜಿಲ್ಲೆಯಲ್ಲಿರುವ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗುತ್ತಿದೆ.
ಕೇಂದ್ರ ಚುನಾವಣಾ ಆಯೋಗದ ಸೂಚನೆಯಂತೆ ಪೊಲೀಸ್ ಇಲಾಖೆ ಈಗಾಗಲೇ ಕೆಲವು ಅಧಿಕಾರಿಗಳನ್ನು ವರ್ಗಾಯಿಸಿದ್ದು, ನಿಯಮಾವಳಿಗೆ ವಿರುದ್ಧವಾಗಿ ಉಳಿದುಕೊಂಡ ಸಿಬ್ಬಂದಿ ವರ್ಗಾವಣೆಗೂ ಸೂಚನೆ ನೀಡಲಾಗಿದೆ.
ಮಾರ್ಗಸೂಚಿಯ ಪ್ರಕಾರ ಚುನಾವಣೆ ಕರ್ತವ್ಯಕ್ಕೆ ನೇಮಿಸಿದ ಸ್ಥಳ ನಿಯೋಜಿಸಿದ ಪೊಲೀಸ್ ಅಧಿಕಾರಿಯ ಸ್ವಂತ ಜಿಲ್ಲೆಯಾಗಿರಬಾರದು, ನಿಯೋಜಿತ ಅಧಿಕಾರಿ ಕಳೆದ ನಾಲ್ಕು ವರ್ಷಗಳಲ್ಲಿ ಒಂದೇ ಜಿಲ್ಲೆಯಲ್ಲಿ ಸತತ ಮೂರು ವರ್ಷ ಸೇವೆ ಸಲ್ಲಿಸಿರಬಾರದು. ಸಬ್ ಇನ್ಸ್ಪೆಕ್ಟರ್ ಹುದ್ದೆಯ ಅಧಿಕಾರಿಗಳು ಕಳೆದ ನಾಲ್ಕು ವರ್ಷಗಳಲ್ಲಿ ಒಂದೇ ಪೊಲೀಸ್ ವಿಭಾಗದಲ್ಲಿ ಸತತ ಮೂರು ವರ್ಷ ಸೇವೆ ಸಲ್ಲಿಸಿರಬಾರದು.
ನಿಯೋಜನೆಗೊಂಡ ಸ್ಥಳ ಈ ಹಿಂದೆ ಕರ್ತವ್ಯ ನಿರ್ವಹಿಸಿದ ಅದೇ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟಿರಬಾರದು. ಹೆಚ್ಚುವರಿಯಾಗಿ ನಿಯೋಜನೆಗೊಂಡ ಅಧಿಕಾರಿಗಳು ಮಾರ್ಗಸೂಚಿಯ ಷರತ್ತಿಗೆ ಒಳಪಟ್ಟಿದ್ದಲ್ಲಿ ಅಂತಹ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು ಎಂದು ಹೇಳಲಾಗಿದೆ.
ಮಾರ್ಗಸೂಚಿ ಅನ್ವಯ ವಲಯ ವ್ಯಾಪ್ತಿಯಲ್ಲಿ ಡಿವೈಎಸ್ಪಿ, ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್ ಗಳನ್ನು ಬೇರೆ ಕಡೆಗೆ ಸ್ಥಳ ನಿಯೋಜಿಸುವ ಅಧಿಕಾರಿಗಳನ್ನು ಆಯಾ ವಲಯಗಳ ಐಜಿಪಿಗಳಿಗೆ ನೀಡಲಾಗಿದೆ.