ಬೆಂಗಳೂರು : ಬೆಂಗಳೂರಿನ ಕೆಂಪೇಗೌಡ ಏರ್ ಪೋರ್ಟ್ ನಲ್ಲಿ ಇಂದಿನಿಂದ ಇಂದಿರಾ ಕ್ಯಾಂಟೀನ್ ಸೇವೆ ಆರಂಭವಾಗಿದ್ದು, ಸಿಎಂ ಸಿದ್ದರಾಮಯ್ಯ ಇಂದು ಉದ್ಘಾಟಿಸಿದರು.
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ನೂತನವಾಗಿ ಆರಂಭವಾಗಿರುವ ಇಂದಿರಾ ಕ್ಯಾಂಟೀನ್ ಅನ್ನು ಮುಖ್ಯಮಂತ್ರಿಗಳು ಉದ್ಘಾಟಿಸಿದರು. ಶ್ರಮಿಕರು, ಬಡವರಿಗೆ ನೆರವಾಗುವ ನಿಟ್ಟಿನಲ್ಲಿ ಸರ್ಕಾರ ಈ ಮಹತ್ವದ ಹೆಜ್ಜೆ ಇಟ್ಟಿದೆ. ಇನ್ನುಮುಂದೆ ಏರ್ಪೋರ್ಟ್ ಕ್ಯಾಬ್ ಚಾಲಕರು, ಕಾರ್ಮಿಕರು ಹಾಗೂ ಮೊದಲಾದವರು ಇಂದಿರಾ ಕ್ಯಾಂಟೀನ್ ಸೌಲಭ್ಯ ಪಡೆಯಬಹುದಾಗಿದೆ ಎಂದು ಡಿಸಿಎಂ ಡಿಕೆಶಿ ಹೇಳಿದ್ದಾರೆ.
ನಗರ ಪ್ರದೇಶಗಳಲ್ಲಿ ಬಡಜನರಿಗೆ ಕೈಗೆಟುಕುವ ದರದಲ್ಲಿ ಆಹಾರ ಒದಗಿಸುವ ಜನಪರ ಕಾಳಜಿಯೊಂದಿಗೆ ನಾವು ಜಾರಿಗೆ ತಂದಿದ್ದ ಯೋಜನೆ ಇಂದಿರಾ ಕ್ಯಾಂಟೀನ್. ಈ ಯೋಜನೆ ಇಂದು ರಾಜ್ಯಾದ್ಯಂತ ನಿತ್ಯ ಲಕ್ಷಾಂತರ ಬಡಜನರ ಹಸಿವು ನೀಗಿಸುವ ತನ್ನ ಉದ್ದೇಶವನ್ನು ಅತ್ಯಂತ ಯಶಸ್ವಿಯಾಗಿ ಈಡೇರಿಸುತ್ತಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕ್ಯಾಬ್ ಚಾಲಕರು, ಕಾರ್ಮಿಕರು ಮತ್ತು ಸುತ್ತಲಿನ ಬಡಜನರ ಅನುಕೂಲಕ್ಕಾಗಿ ವಿಮಾನ ನಿಲ್ದಾಣದ ಆವರಣದಲ್ಲಿ ಇಂದು ನೂತನ ಇಂದಿರಾ ಕ್ಯಾಂಟೀನನ್ನು ಲೋಕಾರ್ಪಣೆಗೊಳಿಸುತ್ತಿದ್ದೇವೆ. ನಮ್ಮ ಈ ಇಂದಿರಾ ಕ್ಯಾಂಟೀನ್ ಮತ್ತಷ್ಟು ಹಸಿದ ಜೀವಗಳಿಗೆ ಘನತೆಯ ಆಹಾರ ನೀಡಲಿ ಎಂಬ ಹಾರೈಕೆ ನನ್ನದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.