ಕಳೆದ ಕೆಲವು ದಿನಗಳಿಂದ ಏರಿಕೆಯ ಹಾದಿಯಲ್ಲಿರುವ ಚಿನ್ನದ ದರ, ಯುಗಾದಿ ಹಬ್ಬದ ಮುನ್ನಾ ದಿನವೂ ಆಭರಣ ಪ್ರಿಯರಿಗೆ ಬಿಗ್ ಶಾಕ್ ನೀಡಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸೋಮವಾರದಂದು ಚಿನ್ನ ಮತ್ತು ಬೆಳ್ಳಿಯ ದರ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ.
10 ಗ್ರಾಂ ಚಿನ್ನ ಬರೋಬ್ಬರಿ 73,560 ರೂಪಾಯಿಗಳಿಗೆ ಮಾರಾಟವಾಗಿದ್ದರೆ, ಕೆ.ಜಿ. ಬೆಳ್ಳಿ ದರ 83,900 ರೂಪಾಯಿ ತಲುಪಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿಯ ದರದಲ್ಲಿ ಏರಿಕೆಯಾಗುತ್ತಿರುವುದು ದೇಶಿಯ ಮಾರುಕಟ್ಟೆಯ ಮೇಲೂ ಪರಿಣಾಮ ಬೀರಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.
ಇನ್ನು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲೂ ಸೋಮವಾರದಂದು 10 ಗ್ರಾಂ ಚಿನ್ನದ ದರದಲ್ಲಿ 350 ರೂಪಾಯಿಗಳು ಏರಿಕೆಯಾಗುವ ಮೂಲಕ 71,700 ರೂಪಾಯಿ ತಲುಪಿದ್ದರೆ ಪ್ರತಿ ಕೆಜಿ ಬೆಳ್ಳಿ ದರದಲ್ಲಿ 800 ರೂಪಾಯಿ ಹೆಚ್ಚಳವಾಗುವ ಮೂಲಕ ಕೆ.ಜಿ. ಬೆಳ್ಳಿ 84,000 ರೂಪಾಯಿಗಳಿಗೆ ಮಾರಾಟವಾಗಿದೆ.