ಬೆಂಗಳೂರು: ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಬಿಜೆಪಿ ವಿರುದ್ಧ ಅಸಮಾಧಾನಗೊಂಡು ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷ ಸ್ಥಾಪನೆ ಮಾಡಿರುವ ಬೆನ್ನಲ್ಲೇ ಇದೀಗ ರಾಜ್ಯ ಬಿಜೆಪಿ ನಾಯಕರು ಜನಾರ್ಧನ ರೆಡ್ಡಿ ಮನವೊಲಿಕೆಗೆ ಮುಂದಾಗಿದ್ದಾರೆ.
ಬೆಂಗಳೂರಿನಲ್ಲಿ ನಿನ್ನೆ ನಡೆದ ರಾಜ್ಯ ಬಿಜೆಪಿ ನಾಯಕರ ಸಭೆಯಲ್ಲಿ ಜನಾರ್ಧನ ರೆಡ್ದಿ ಅವರನ್ನು ವಾಪಸ್ ಕರೆತರಬೇಕು ಎಂದು ಬಿಜೆಪಿ ನಾಯಕರು ಬಿ.ಎಲ್. ಸಂತೋಷ್ ಅವರನ್ನು ಒತ್ತಾಯಿಸಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಸಭೆಯಲ್ಲಿ ಮಾತನಾಡಿದ ಬಿ.ಎಲ್. ಸಂತೋಷ್, ಜನಾರ್ಧನ ರೆಡ್ಡಿ ವಾಪಸ್ ಪಕ್ಷಕ್ಕೆ ಕರೆತರುವ ಬಗ್ಗೆ ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿ. ಜನಾರ್ಧನ ರೆಡ್ಡಿ ಹಾಗೂ ಪಿ. ಚಿದಂಬರಂ ನಡುವೆ ಏನು ವ್ಯತ್ಯಾಸವಿದೆ ? ಪಿ. ಚಿದಂಬರಂ ಈಗ ಮತ್ತೆ ಕಾಂಗ್ರೆಸ್ ನಲ್ಲಿ ಸಕ್ರಿಯರಾಗಿಲ್ಲವೇ ? ಹಾಗಾಗಿ ರೆಡ್ಡಿ ಕರೆತರುವ ಬಗ್ಗೆ ವರಿಷ್ಠರು ತೀರ್ಮಾನಿಸಲಿ ಎಂದಿದ್ದಾರೆ.
ಇನ್ನು ರೆಡ್ದಿ ಬೇರೆ ಪಕ್ಷದ ಮೂಲಕ ಗಂಗಾವತಿಯಿಂದ ಸ್ಪರ್ಧಿಸಿದರೆ ಬಿಜೆಪಿಗೆ ಹೊಡೆತ ಬೀಳುವ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಗಿದ್ದು, ಗಂಗಾವತಿಯನ್ನು ಕಳೆದುಕೊಳ್ಳುವ ಬದಲು ಸಿಂಧನೂರು ಬಿಡುವುದು ಒಳಿತು. ಇಲ್ಲವಾದಲ್ಲಿ ಮೂರು- ನಾಲ್ಕು ಜಿಲ್ಲೆಗಳ ಮೇಲೆ ಪರಿಣಾಮ ಬೀರಲಿದೆ ಎಂದು ಸಂತೋಷ್ ಅಭಿಪ್ರಾಯಪಟ್ಟಿದ್ದಾರೆ ಎನ್ನಲಾಗಿದೆ.