ಬೆಂಗಳೂರು: ನೀವು ಮತ್ತು ನಿಮ್ಮ ಸಂಗಾತಿ ಇಬ್ಬರೂ ಭವಿಷ್ಯದ ಆರ್ಥಿಕ ಭದ್ರತೆಯ ಬಗ್ಗೆ ಚಿಂತಿಸುತ್ತಿದ್ದೀರಾ? ಹಾಗಾದ್ರೆ ಭಾರತೀಯ ಜೀವ ವಿಮಾ ನಿಗಮ (LIC) ವಿವಾಹಿತ ದಂಪತಿಗಳಿಗಾಗಿಯೇ ಭರ್ಜರಿ ಹೊಸ ಯೋಜನೆಯೊಂದನ್ನು ಪ್ರಕಟಿಸಿದೆ. ಕೇವಲ ಒಂದೇ ಪಾಲಿಸಿಯಲ್ಲಿ ದಂಪತಿಗಳಿಗೆ ಉಳಿತಾಯ ಮತ್ತು ರಕ್ಷಣೆಯ ಡಬಲ್ ಧಮಾಕಾ ಸಿಗಲಿದ್ದು, ಈ ಜಂಟಿ ವಿಮಾ ಪಾಲಿಸಿಯು (Joint Life Policy) ಬರುವ ಜೂನ್ 1, 2026 ರಿಂದ ದೇಶಾದ್ಯಂತ ಅಧಿಕೃತವಾಗಿ ಜಾರಿಗೆ ಬರಲಿದೆ.
ಜೀವನ್ ಸಾಥಿ ಸರಣಿಯ ಅಡಿಯಲ್ಲಿ ಎಲ್ಐಸಿ ಇದೀಗ ಎಲ್ಐಸಿಯ ನ್ಯೂ ಜೀವನ್ ಸಾಥಿ – ಸಿಂಗಲ್ ಪ್ರೀಮಿಯಂ ಮತ್ತು ಎಲ್ಐಸಿಯ ನ್ಯೂ ಜೀವನ್ ಸಾಥಿ – ಲಿಮಿಟೆಡ್ ಪ್ರೀಮಿಯಂ ಎಂಬ ಎರಡು ಹೊಸ ಜಂಟಿ ಜೀವ ವಿಮಾ ಯೋಜನೆಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಈ ಯೋಜನೆಯ ಕಂಪ್ಲೀಟ್ ಇನ್ಸೈಡ್ ರಿಪೋರ್ಟ್ ಹಾಗೂ ಯಾರೆಲ್ಲಾ ಇದಕ್ಕೆ ಅರ್ಹರು ಎಂಬ ಮಾಹಿತಿ ಇಲ್ಲಿದೆ:
ಏನಿದು ನ್ಯೂ ಜೀವನ್ ಸಾಥಿ ಪ್ಲಾನ್? ಇದರ ವಿಶೇಷತೆಗಳೇನು?
ವಿವಾಹಿತರಿಗೆ ಮಾತ್ರ ಸೀಮಿತ: ಇದು ಕೇವಲ ವಿವಾಹಿತ ದಂಪತಿಗಳಿಗೆ ಮಾತ್ರ ಆರ್ಥಿಕ ರಕ್ಷಣೆ ಮತ್ತು ವ್ಯವಸ್ಥಿತ ಉಳಿತಾಯ ನೀಡಲು ರೂಪಿಸಲಾಗಿರುವ ವಿಶೇಷ ಎಂಡೋಮೆಂಟ್ ಪ್ಲಾನ್ ಆಗಿದೆ. ಇದರಲ್ಲಿ ಪ್ರಾಥಮಿಕ ವಿಮಾದಾರರು (ಗಂಡ ಅಥವಾ ಹೆಂಡತಿ) ಮುಖ್ಯ ಪಾಲಿಸಿದಾರರಾಗಿರುತ್ತಾರೆ.
ಮಾರ್ಕೆಟ್ ರಿಸ್ಕ್ ಇರಲ್ಲ: ಸೆಬಿ ನಿಯಮಾವಳಿಗಳ ಅಡಿಯಲ್ಲಿ ಎಲ್ಐಸಿ ನೀಡಿರುವ ಮಾಹಿತಿ ಪ್ರಕಾರ, ಇವೆರಡೂ ಯೋಜನೆಗಳು ನಾನ್-ಪಾರ್ಟಿಸಿಪೇಟಿಂಗ್ (ಲಾಭಾಂಶ ರಹಿತ) ಮತ್ತು ನಾನ್-ಲಿಂಕ್ಡ್ (ಮಾರುಕಟ್ಟೆ ಆಧಾರಿತವಲ್ಲದ) ವೈಯಕ್ತಿಕ ಉಳಿತಾಯ ಯೋಜನೆಗಳಾಗಿವೆ. ಅಂದರೆ, ಮಾರುಕಟ್ಟೆಯ ಏರಿಳಿತಗಳಿಂದ ಇದಕ್ಕೆ ಯಾವುದೇ ತೊಂದರೆ ಇರಲ್ಲ, ಮೆಚುರಿಟಿ ಮೊತ್ತ ಮೊದಲೇ ನಿಗದಿಯಾಗಿರುತ್ತದೆ.
ಆಪತ್ತಿನಲ್ಲೂ ಕಾವಲು: ಒಂದು ವೇಳೆ ಪಾಲಿಸಿ ಅವಧಿಯಲ್ಲಿ ಪ್ರಾಥಮಿಕ ವಿಮಾದಾರರಿಗೆ ಏನಾದರೂ ಆಪತ್ತು ಸಂಭವಿಸಿದರೆ, ತಕ್ಷಣವೇ ಸಂಗಾತಿಯು ಪಾಲಿಸಿದಾರರಾಗಿ ಮುಂದುವರಿಯುತ್ತಾರೆ. ಈ ಮೂಲಕ ಕುಟುಂಬಕ್ಕೆ ಯಾವುದೇ ಆರ್ಥಿಕ ಅಡಚಣೆಯಿಲ್ಲದೆ ಭದ್ರತೆ ಸಿಗುತ್ತದೆ.
ಶಕ್ತಿಶಾಲಿ ರಕ್ಷಣಾ ಆಯ್ಕೆಗಳು ಮತ್ತು ಗ್ಯಾರಂಟಿ ರಿಟರ್ನ್ಸ್
ಎಲ್ಐಸಿ ಈ ಪಾಲಿಸಿಯಲ್ಲಿ ಗ್ರಾಹಕರಿಗೆ ಎರಡು ಬಗೆಯ ರಕ್ಷಣಾ ಆಯ್ಕೆಗಳನ್ನು ಪ್ರಸ್ತಾವನೆ ಹಂತದಲ್ಲೇ ಆರಿಸಿಕೊಳ್ಳುವ ಅವಕಾಶ ನೀಡಿದೆ:
ಆಯ್ಕೆ 1: ಮೂಲ ವಿಮಾ ಮೊತ್ತದ 1.25 ಪಟ್ಟು ರಕ್ಷಣೆ ಸಿಗುತ್ತದೆ.
ಆಯ್ಕೆ 2: ನೀವು ಪಾವತಿಸಿದ ಪ್ರೀಮಿಯಂನ ಬರೋಬ್ಬರಿ 10 ಪಟ್ಟು ರಕ್ಷಣೆ ಸಿಗುತ್ತದೆ.
ಪ್ರತಿ ವರ್ಷ ಹಣ ಆಡ್ ಆಗುವ ಗ್ಯಾರಂಟಿ ಎಡಿಷನ್’ ಸೌಲಭ್ಯ:
ಲಿಮಿಟೆಡ್ ಪ್ರೀಮಿಯಂ ಆವೃತ್ತಿ: ಎಲ್ಲಾ ಪ್ರೀಮಿಯಂಗಳನ್ನು ಸರಿಯಾಗಿ ಪಾವತಿಸಿದರೆ, ಪ್ರತಿ ಪಾಲಿಸಿ ವರ್ಷದ ಕೊನೆಯಲ್ಲಿ ಪಾವತಿಸಿದ ಒಟ್ಟು ವಾರ್ಷಿಕ ಪ್ರೀಮಿಯಂನ ಶೇಕಡಾ 7 ರಷ್ಟು ಮೊತ್ತವು ಗ್ಯಾರಂಟಿ ಸೇರ್ಪಡೆಯಾಗಿ ಆಡ್ ಆಗುತ್ತಾ ಹೋಗುತ್ತದೆ.
ಸಿಂಗಲ್ ಪ್ರೀಮಿಯಂ ಆವೃತ್ತಿ: ಆಯ್ದುಕೊಂಡ ಪಾಲಿಸಿ ಅವಧಿಯುದ್ದಕ್ಕೂ ಪ್ರತಿ 1,000 ರೂಪಾಯಿ ಮೂಲ ವಿಮಾ ಮೊತ್ತಕ್ಕೆ 70 ರೂಪಾಯಿಗಳ ಸ್ಥಿರ ಗ್ಯಾರಂಟಿ ಮೊತ್ತವನ್ನು ಹೆಚ್ಚುವರಿಯಾಗಿ ಸೇರಿಸಲಾಗುತ್ತದೆ.
ತಾಂತ್ರಿಕ ಅರ್ಹತೆ ಮತ್ತು ನಿಯಮಗಳು (Eligibility Criteria):
ವಯಸ್ಸಿನ ಮಿತಿ: ಈ ಯೋಜನೆಯನ್ನು ಪಡೆಯಲು ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಆಯ್ಕೆ 1 ಕ್ಕೆ ಗರಿಷ್ಠ ವಯಸ್ಸು 60 ವರ್ಷಗಳಾಗಿದ್ದರೆ, ಆಯ್ಕೆ 2 ಕ್ಕೆ 35 ವರ್ಷಗಳ ಮಿತಿ ನಿಗದಿಪಡಿಸಲಾಗಿದೆ.
ವಿಮಾ ಮೊತ್ತ: ಕನಿಷ್ಠ 3 ಲಕ್ಷ ರೂಪಾಯಿ ವಿಮಾ ಮೊತ್ತದೊಂದಿಗೆ ನೀವು ಪಾಲಿಸಿಯನ್ನು ಪ್ರಾರಂಭಿಸಬಹುದು. ಗರಿಷ್ಠ ಮೊತ್ತಕ್ಕೆ ಯಾವುದೇ ಮಿತಿ ಇಲ್ಲ.
ಅವಧಿಯ ಆಯ್ಕೆ: ಇದು ಸಿಂಗಲ್ ಪ್ರೀಮಿಯಂ ಪಾಲಿಸಿ ಆಗಿರುವುದರಿಂದ, ಒಮ್ಮೆ ಹಣ ಪಾವತಿಸಿದರೆ ಸಾಕು, 10, 15, 20 ಅಥವಾ 25 ವರ್ಷಗಳವರೆಗೆ ನೀವು ಆರಾಮಾಗಿರಬಹುದು.
ಉದಾಹರಣೆ: 35 ವರ್ಷದ ದಂಪತಿಗಳು ಆಯ್ಕೆ 1 ರಲ್ಲಿ 20 ವರ್ಷಕ್ಕೆ 10 ಲಕ್ಷ ವಿಮೆಯೊಂದಿಗೆ ಪಾಲಿಸಿ ತೆಗೆದುಕೊಂಡರೆ, 24 ಲಕ್ಷ ರೂಪಾಯಿವರೆಗೆ ಖಾತರಿಯ ಲಾಭ ಪಡೆಯಬಹುದು.
ಪ್ರೀಮಿಯಂ ಮನ್ನಾ ಮತ್ತು ಕ್ಲೈಮ್ ಕಂತುಗಳ ಸೌಲಭ್ಯ
ಪ್ರೀಮಿಯಂ ಮನ್ನಾ (Premium Waiver): ಲಿಮಿಟೆಡ್ ಪ್ರೀಮಿಯಂ ಆವೃತ್ತಿಯಲ್ಲಿ, ಪ್ರೀಮಿಯಂ ಪಾವತಿಸುವ ಅವಧಿಯಲ್ಲಿ ಪಾಲಿಸಿ ಹೊಂದಿರುವ ಮುಖ್ಯ ವ್ಯಕ್ತಿ ಅಕಸ್ಮಾತ್ ನಿಧನರಾದರೆ, ಜೀವಂತವಿರುವ ಸಂಗಾತಿಯ ಮುಂದಿನ ಎಲ್ಲಾ ಪ್ರೀಮಿಯಂ ಪಾವತಿಯನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗುತ್ತದೆ.
ಕಂತುಗಳಲ್ಲಿ ಹಣ ಪಡೆಯುವ ಆಯ್ಕೆ: ಪಾಲಿಸಿದಾರರು ತಮ್ಮ ಮೆಚುರಿಟಿ ಅಥವಾ ಮರಣದ ಸಂದರ್ಭದಲ್ಲಿ ಬರುವ ಕ್ಲೈಮ್ ಮೊತ್ತವನ್ನು ಒಟ್ಟಿಗೆ ಪಡೆಯುವ ಬದಲಾಗಿ, ಮುಂದಿನ 5, 10 ಅಥವಾ 15 ವರ್ಷಗಳ ಅವಧಿಗೆ ವಾರ್ಷಿಕ ಅಥವಾ ಮಾಸಿಕ ಕಂತುಗಳ ರೂಪದಲ್ಲಿ ಪಡೆಯಬಹುದು.
ವಿಶೇಷ ರಿಯಾಯಿತಿ ಮತ್ತು ಸಾಲ: ಹೆಚ್ಚಿನ ಮೊತ್ತದ ವಿಮೆಗೆ ವಿಶೇಷ ರಿಯಾಯಿತಿ ಸಿಗಲಿದೆ. ಜೊತೆಗೆ ಎಲ್ಐಸಿಯ ಹಳೆಯ ಕಾರ್ಪೊರೇಟ್ ಪಾಲಿಸಿದಾರರಿಗೆ ಹಾಗೂ ತುರ್ತು ಅಗತ್ಯಗಳಿಗಾಗಿ ಈ ಪಾಲಿಸಿಗಳ ಮೇಲೆ ಸಾಲ ಪಡೆಯುವ ಅವಕಾಶವನ್ನೂ ಕಲ್ಪಿಸಲಾಗಿದೆ.

