ಶಿವಮೊಗ್ಗ: ಗ್ರಾಮೀಣ ಗ್ರಂಥ ಪಾಲಕರನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕಾಯಂ ನೌಕರರು ಎಂದು ಆದೇಶ ಹೊರಡಿಸಿ ನಿಯಮಾವಳಿ ರೂಪಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಏಪ್ರಿಲ್ 28ರಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಳ್ಳಲಾಗಿದೆ.
ರಾಜ್ಯ ಗ್ರಾಮೀಣ ಗ್ರಂಥಾಲಯಗಳ ನೌಕರರ ಸಂಘದ ಅಧ್ಯಕ್ಷ ಕೆ.ವಿ. ಸತ್ಯನಾರಾಯಣ ಈ ಬಗ್ಗೆ ಮಾಹಿತಿ ನೀಡಿದ್ದು, ಪ್ರತಿ ತಿಂಗಳ 5ನೇ ತಾರೀಖಿನೊಳಗೆ ವೇತನ ಜಮಾ ಮಾಡಬೇಕು. ಗ್ರಾಚುಟಿ ಮತ್ತು ಪಿಂಚಣಿ ಸೌಲಭ್ಯ ಒದಗಿಸಬೇಕು ಎಂಬ ಬೇಡಿಕೆಗಳನ್ನು ಸರ್ಕಾರದ ಮುಂದೆ ಇಡಲಾಗುವುದು ಎಂದು ತಿಳಿಸಿದ್ದಾರೆ.
ಅರಿವು ಕೇಂದ್ರಗಳ ಗ್ರಂಥಪಾಲಕರನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನೌಕರರೆಂದು ಆದೇಶ ಹೊರಡಿಸಿ ಒಂದೇ ನಿಯಮಾವಳಿ ರೂಪಿಸಬೇಕು. ಇಲ್ಲವಾದಲ್ಲಿ ನಮ್ಮನ್ನು ಗ್ರಂಥಾಲಯ ಇಲಾಖೆಗೆ ಮರಳಿಸಬೇಕು. ಸಂಪೂರ್ಣ ಕನಿಷ್ಠ ವೇತನವನ್ನು ನೇರವಾಗಿ ಗ್ರಂಥ ಪಾಲಕರ ಖಾತೆಗೆ ಪ್ರತಿ ತಿಂಗಳ 5ನೇ ತಾರೀಖಿನೊಳಗೆ ಪಾವತಿಸಬೇಕು. 2019 ರಿಂದ 22ರ ನಡುವೆ ಅಕಾಲಿಕವಾಗಿ ನಿಧನ ಹೊಂದಿದ ಮೇಲ್ವಿಚಾರಕರ ಕುಟುಂಬಕ್ಕೆ ವಿದ್ಯಾರ್ಥಿ ಅನುಕಂಪದ ಹುದ್ದೆ ನೀಡಬೇಕು ಎಂದು ಒತ್ತಾಯಿಸಲಾಗಿದೆ.