ಬೆಂಗಳೂರು-ಹುಬ್ಬಳ್ಳಿ ನಡುವಿನ ರೈಲು ವೇಳಾಪಟ್ಟಿ ಬದಲಾವಣೆ ಮಾಡುವಂತೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣಗೆ ಪತ್ರ ಬರೆಯಲಾಗಿದೆ. ಈ ಕುರಿತು ಹುಬ್ಬಳ್ಳಿ-ಧಾರವಾಡ ಕೇಂದ್ರದ ಶಾಸಕ ಮಹೇಶ ಟೆಂಗಿನಕಾಯಿ ಪತ್ರವನ್ನು ಬರೆದಿದ್ದಾರೆ.
ಹುಬ್ಬಳ್ಳಿ-ಬೆಂಗಳೂರು ನಡುವಿನ SBC UBL SF EXP (20688) ರೈಲಿನ ಸಮಯವನ್ನು ಬದಲಾಯಿಸುವಂತೆ ಕೋರಿ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಪತ್ರದ ಮೂಲಕ ಮನವಿ ಸಲ್ಲಿಸಲಾಗಿದೆ ಎಂದು ಶಾಸಕರು ಪೋಸ್ಟ್ ಹಾಕಿದ್ದಾರೆ.
ಹಿಂದೆ ರಾತ್ರಿ 11:55ಕ್ಕೆ ಬೆಂಗಳೂರಿನಿಂದ ಹೊರಡುತ್ತಿದ್ದ ಈ ರೈಲಿನ ಸಮಯವನ್ನು ಪ್ರಸ್ತುತ ರಾತ್ರಿ 10:20ಕ್ಕೆ ಬದಲಾಯಿಸಲಾಗಿದೆ. ಇದರಿಂದ ವ್ಯಾಪಾರಸ್ಥರಿಗೆ, ಉದ್ಯೋಗಿಗಳಿಗೆ ಹಾಗೂ ಸಾಮಾನ್ಯ ಜನರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಸಾರ್ವಜನಿಕರ ಒತ್ತಾಸೆಯಂತೆ ಈ ರೈಲನ್ನು ಪುನಃ ಹಳೆಯ ಸಮಯಕ್ಕೇ ನಿಗದಿಪಡಿಸಬೇಕೆಂದು ವಿನಂತಿಸಿದ್ದೇನೆ ಎಂದು ಹೇಳಿದ್ದಾರೆ.
ಶಾಸಕರ ಪತ್ರದ ವಿವರ: ಶಾಸಕರ ಪತ್ರವು ಬೆಂಗಳೂರು-ಹುಬ್ಬಳ್ಳಿ (SBC UBL SF EXP (20688) ರೈಲಿನ ಸಮಯವನ್ನು ರಾತ್ರಿ 11:55ಕ್ಕೆ ಬದಲಾಯಿಸುವ ಕುರಿತು ಎಂಬ ವಿಷಯವನ್ನು ಒಳಗೊಂಡಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ, ಬೆಂಗಳೂರು ಮತ್ತು ಹುಬ್ಬಳ್ಳಿ ನಡುವೆ ಸಂಚರಿಸುವ (SBC UBL SF EXP (20688) ವಿಶೇಷ ರೈಲನ್ನು ಕಾಯಂಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟಿರುವುದಕ್ಕಾಗಿ ನಿಮಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಆದರೆ, ಈ ರೈಲನ್ನು ಕಾಯಂಗೊಳಿಸಿದ ನಂತರ ಅದರ ಸಂಚಾರದ ಸಮಯದಲ್ಲಿ ಮಾಡಲಾದ ಬದಲಾವಣೆಯು ಪ್ರಯಾಣಿಕರಿಗೆ ಅನಾನುಕೂಲವನ್ನು ಉಂಟುಮಾಡುತ್ತಿದೆ. ಈ ಹಿಂದೆ ಬೆಂಗಳೂರಿನಿಂದ ರಾತ್ರಿ 11:55ಕ್ಕೆ ಹೊರಡುತ್ತಿದ್ದ ಈ ರೈಲು, ಪ್ರಸ್ತುತ ರಾತ್ರಿ 10:20ಕ್ಕೆ ಹೊರಡುತ್ತಿದೆ.
ಹುಬ್ಬಳ್ಳಿಯಿಂದ ಬೆಂಗಳೂರಿಗೆ ವಿವಿಧ ಕೆಲಸಗಳಿಗಾಗಿ ಬರುವ ಸಾರ್ವಜನಿಕರು, ವ್ಯಾಪಾರಸ್ಥರು ಮತ್ತು ಉದ್ಯೋಗಿಗಳಿಗೆ ತಮ್ಮ ಕೆಲಸ ಮುಗಿಸಿ 10:20ರ ಒಳಗೆ ರೈಲು ನಿಲ್ದಾಣ ತಲುಪುವುದು ಕಷ್ಟವಾಗುತ್ತಿದೆ.
ರಾತ್ರಿ 11 ಗಂಟೆಗೆ ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್ ಲಭ್ಯವಿದ್ದರೂ ಸಹ, ಅದರಲ್ಲಿ ವಿಪರೀತ ಒತ್ತಡವಿರುವುದರಿಂದ ಸಾಮಾನ್ಯ ಪ್ರಯಾಣಿಕರಿಗೆ ಟಿಕೆಟ್ ಲಭ್ಯತೆ ಕಡಿಮೆಯಿದೆ.
ಆದ್ದರಿಂದ, ಸಾರ್ವಜನಿಕರ ಮತ್ತು ಪ್ರಯಾಣಿಕರ ಹಿತದೃಷ್ಟಿಯಿಂದ ಈಗಿರುವ 10:20ರ ಸಮಯವನ್ನು ಬದಲಾಯಿಸಿ, ಪುನಃ ಹಳೆಯ ಸಮಯವಾದ ರಾತ್ರಿ 11:55ಕ್ಕೆ ನಿಗದಿಪಡಿಸಬೇಕೆಂದು ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.

