ರಾತ್ರಿ ಊಟಕ್ಕೆ ಬಿಸಿ ಬಿಸಿ ರಸಂ ಇದ್ದರೆ ಅನ್ನದ ರುಚಿಯೇ ಬೇರೆ. ಸಾಮಾನ್ಯವಾಗಿ ಟೊಮೆಟೊ ರಸಂ, ಮೆಣಸು ರಸಂ ಹೆಚ್ಚು ಜನಪ್ರಿಯ. ಆದರೆ ನಿಂಬೆ ರಸಂ ಕೂಡ ಒಮ್ಮೆ ಮಾಡಿ ನೋಡಿದರೆ ಇಷ್ಟವಾಗಬಹುದು.
ತೊಗರಿಬೇಳೆ, ಟೊಮೆಟೊ, ಹಸಿಮೆಣಸು ಮತ್ತು ನಿಂಬೆಹಣ್ಣಿನ ರಸದಿಂದ ತಯಾರಿಸುವ ಈ ರಸಂ ರುಚಿಯಲ್ಲಿ ಹುಳಿ-ಖಾರವಾಗಿರುತ್ತದೆ. ಬಿಸಿ ಅನ್ನಕ್ಕೆ ತುಪ್ಪ ಹಾಕಿಕೊಂಡು ಇದರ ಜತೆ ಸವಿದರೆ ಚೆನ್ನಾಗಿರುತ್ತದೆ.
ಬೇಕಾಗುವ ಪದಾರ್ಥಗಳು
1 ಕಪ್ ತೊಗರಿಬೇಳೆ
4 ಟೇಬಲ್‌ಸ್ಪೂನ್ ಸಣ್ಣಗೆ ಹೆಚ್ಚಿದ ಟೊಮೆಟೊ
5 ಹಸಿಮೆಣಸು
ಸ್ವಲ್ಪ ತುರಿದ ಶುಂಠಿ
ಸ್ವಲ್ಪ ಕರಿಬೇವು
½ ಟೀಸ್ಪೂನ್ ಅರಿಶಿನ
ರುಚಿಗೆ ತಕ್ಕಷ್ಟು ಉಪ್ಪು
1 ಟೀಸ್ಪೂನ್ ಎಣ್ಣೆ
ಅಗತ್ಯಕ್ಕೆ ತಕ್ಕಷ್ಟು ನೀರು
ರುಚಿಗೆ ತಕ್ಕಷ್ಟು ನಿಂಬೆಹಣ್ಣಿನ ರಸ
ಕೊತ್ತಂಬರಿ ಸೊಪ್ಪು
ಒಗ್ಗರಣೆಗೆ
ಸ್ವಲ್ಪ ಎಣ್ಣೆ
ಸಾಸಿವೆ
2 ಒಣಮೆಣಸು
ಚಿಟಿಕೆ ಇಂಗು
ಸ್ವಲ್ಪ ಕರಿಬೇವು
ನಿಂಬೆ ರಸಂ ಮಾಡುವ ವಿಧಾನ
ಮೊದಲು ತೊಗರಿಬೇಳೆಯನ್ನು ಚೆನ್ನಾಗಿ ತೊಳೆದು ಕುಕ್ಕರ್‌ಗೆ ಹಾಕಿ. ಇದಕ್ಕೆ ಹೆಚ್ಚಿದ ಟೊಮೆಟೊ, ಸೀಳಿದ ಹಸಿಮೆಣಸು, ತುರಿದ ಶುಂಠಿ, ಕರಿಬೇವು, ಅರಿಶಿನ, ಉಪ್ಪು ಮತ್ತು ಒಂದು ಟೀಸ್ಪೂನ್ ಎಣ್ಣೆ ಹಾಕಿ.
ಮೂರು ಕಪ್ ನೀರು ಸೇರಿಸಿ ಕುಕ್ಕರ್ ಮುಚ್ಚಿ. ಮಧ್ಯಮ ಉರಿಯಲ್ಲಿ ಸುಮಾರು ಐದು ವಿಷಲ್ ಬರುವವರೆಗೆ ಬೇಯಿಸಿ. ನಂತರ ಕುಕ್ಕರ್‌ನ ಒತ್ತಡ ತಾನಾಗಿಯೇ ಇಳಿಯಲು ಬಿಡಿ.
ಬೇಳೆ ಬೆಂದ ಬಳಿಕ ಅದನ್ನು ಚೆನ್ನಾಗಿ ಕಿವುಚಿ. ಈಗ ಮತ್ತೆ ಮೂರು ಕಪ್ ನೀರು ಹಾಕಿ ಚೆನ್ನಾಗಿ ಕಲಸಿ.
ಈ ಮಿಶ್ರಣವನ್ನು ಮತ್ತೆ ಒಲೆಯ ಮೇಲಿಟ್ಟು ಕುದಿಯಲು ಬಿಡಿ. ರಸಂ ಗಟ್ಟಿಯಾಗಿದ್ದರೆ ಸ್ವಲ್ಪ ನೀರು ಸೇರಿಸಿ. ರಸಂ ತೆಳುವಾಗಿ ಇರಬೇಕು.
ಸುಮಾರು ಐದು ನಿಮಿಷ ಸಣ್ಣ ಉರಿಯಲ್ಲಿ ಕುದಿಸಿ. ರುಚಿ ನೋಡಿ ಅಗತ್ಯವಿದ್ದರೆ ಉಪ್ಪು ಸೇರಿಸಿ.
ಒಗ್ಗರಣೆ ಹಾಕಿ
ಒಂದು ಸಣ್ಣ ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿ. ಸಾಸಿವೆ ಹಾಕಿ ಸಿಡಿದ ಬಳಿಕ ಒಣಮೆಣಸು, ಇಂಗು ಮತ್ತು ಕರಿಬೇವು ಹಾಕಿ.
ಈ ಒಗ್ಗರಣೆಯನ್ನು ಕುದಿಯುತ್ತಿರುವ ರಸಂಗೆ ಹಾಕಿ ಚೆನ್ನಾಗಿ ಕಲಸಿ.
ಕೊನೆಯಲ್ಲಿ ಉರಿಯನ್ನು ಆಫ್ ಮಾಡಿ ಅಥವಾ ತುಂಬಾ ಕಡಿಮೆ ಮಾಡಿ. ನಂತರ ರುಚಿಗೆ ತಕ್ಕಷ್ಟು ನಿಂಬೆಹಣ್ಣಿನ ರಸ ಸೇರಿಸಿ.
ನಿಂಬೆ ರಸ ಹಾಕಿದ ಬಳಿಕ ರಸಂ ಅನ್ನು ಮತ್ತೆ ಕುದಿಸಬೇಡಿ. ಇದರಿಂದ ನಿಂಬೆಯ ತಾಜಾ ಪರಿಮಳ ಮತ್ತು ಹುಳಿ ರುಚಿ ಕಡಿಮೆಯಾಗಬಹುದು.ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ. ಬಿಸಿ ಅನ್ನದೊಂದಿಗೆ ನಿಂಬೆ ರಸಂ ಸವಿಯಿರಿ.

