ಬೆಂಗಳೂರು: ಪ್ರತಿಯೊಬ್ಬರೂ ತಮ್ಮ ಮನೆ ಸುಂದರವಾಗಿರಬೇಕು ಮತ್ತು ಕುಟುಂಬದಲ್ಲಿ ಸದಾ ಶಾಂತಿ, ನೆಮ್ಮದಿ ನೆಲೆಸಿರಬೇಕು ಎಂದು ಬಯಸುತ್ತಾರೆ. ಇದಕ್ಕಾಗಿ ಮನೆ ನಿರ್ಮಾಣದಿಂದ ಹಿಡಿದು ಅಂಗಳದಲ್ಲಿ ನೆಡುವ ಗಿಡ-ಮರಗಳವರೆಗೆ ವಾಸ್ತು ಶಾಸ್ತ್ರದ ನಿಯಮಗಳನ್ನು ಅನುಸರಿಸುವುದು ನಮಗೆ ಅನಾದಿಕಾಲದಿಂದಲೂ ಬಂದ ಅಭ್ಯಾಸ.
ಆದರೆ, ಮನೆಯ ಆವರಣದಲ್ಲಿ ನಿಂಬೆ ಗಿಡ ಬೆಳೆಸುವ ವಿಚಾರಕ್ಕೆ ಬಂದಾಗ ಅನೇಕರಲ್ಲಿ ದೊಡ್ಡ ಮಟ್ಟದ ಗೊಂದಲಗಳಿವೆ. ಕೆಲವರು ಮುಳ್ಳಿರುವ ಗಿಡ ಮನೆಯಲ್ಲಿದ್ದರೆ ಅಶುಭ ಎಂದರೆ, ಮತ್ತೆ ಕೆಲವರು ಇದು ಶುಭ ತರುತ್ತದೆ ಎನ್ನುತ್ತಾರೆ. ಹಾಗಾದರೆ ವಾಸ್ತು ಪ್ರಕಾರ ಮನೆಯಲ್ಲಿ ನಿಂಬೆ ಗಿಡ ನೆಡುವುದು ಸರಿಯೇ? ಅದರಿಂದಾಗುವ ಲಾಭಗಳೇನು? ಇಲ್ಲಿದೆ ಪೂರ್ಣ ಮಾಹಿತಿ.
ಮುಳ್ಳಿರುವ ಗಿಡ ಎಂಬುದು ತಪ್ಪು ಕಲ್ಪನೆ ಸತ್ಯಾಂಶವೇನು?
ಸಾಮಾನ್ಯವಾಗಿ ಕಳ್ಳಿ (Cactus) ಯಂತಹ ಮುಳ್ಳಿರುವ ಕಾಡು ಗಿಡಗಳನ್ನು ಮನೆಯಲ್ಲಿ ಬೆಳೆಸಬಾರದು ಎಂಬ ನಿಯಮ ವಾಸ್ತು ಶಾಸ್ತ್ರದಲ್ಲಿದೆ. ಇದೇ ಕಾರಣಕ್ಕೆ ಹಲವರು ನಿಂಬೆ ಗಿಡದಲ್ಲೂ ಮುಳ್ಳು ಇರುವುದರಿಂದ ಮನೆಯಲ್ಲಿ ಇಡಬಾರದು ಎಂಬ ತಪ್ಪು ಕಲ್ಪನೆಗೆ ಒಳಗಾಗಿದ್ದಾರೆ.
ಆದರೆ, ವಾಸ್ತು ತಜ್ಞರ ಪ್ರಕಾರ ಔಷಧೀಯ ಹಾಗೂ ದೈವಿಕ ಗುಣಗಳನ್ನು ಹೊಂದಿರುವ ನಿಂಬೆ ಗಿಡಕ್ಕೆ ಈ ನಿಯಮ ಅನ್ವಯಿಸುವುದಿಲ್ಲ. ಇನ್ನು ನಿಂಬೆಹಣ್ಣು ಹುಳಿಯಾಗಿರುವುದರಿಂದ ಕುಟುಂಬದ ಸಂಬಂಧಗಳಲ್ಲಿ ಹುಳಿ ಹಿಂಡಿದಂತಾಗುತ್ತದೆ ಎಂಬುದು ಕೇವಲ ಮೂಢನಂಬಿಕೆಯಷ್ಟೇ ಹೊರತು ಬೇರೇನೂ ಅಲ್ಲ
ಮನೆಯಲ್ಲಿ ನಿಂಬೆ ಗಿಡ ಬೆಳೆಸುವುದರಿಂದ ಆಗುವ ಪ್ರಮುಖ ಲಾಭಗಳು:
ರಕ್ಷಣಾ ಕವಚ ಹಾಗೂ ಧನಾತ್ಮಕ ಶಕ್ತಿ: ಸಿಟ್ರಸ್ ಅಂಶವಿರುವ ನಿಂಬೆ ಗಿಡವು ಮನೆಯ ಸುತ್ತಮುತ್ತಲಿನ ಗಾಳಿಯನ್ನು ಶುದ್ಧೀಕರಿಸುತ್ತದೆ. ಕೆಟ್ಟ ದೃಷ್ಟಿ (ನಜರ್) ಹಾಗೂ ನಕಾರಾತ್ಮಕ ಶಕ್ತಿಗಳು ಮನೆಯನ್ನು ಪ್ರವೇಶಿಸದಂತೆ ತಡೆದು, ಒಂದು ಶಕ್ತಿಯುತ ರಕ್ಷಣಾ ಕವಚವನ್ನು ನಿರ್ಮಿಸುತ್ತದೆ.
ಆದಾಯ ದ್ವಿಗುಣ (ಆರ್ಥಿಕ ಸಮೃದ್ಧಿ): ಮನೆಯ ಸರಿಯಾದ ದಿಕ್ಕಿನಲ್ಲಿ ನಿಂಬೆ ಗಿಡ ಬೆಳೆಸಿದರೆ ಆರ್ಥಿಕ ಪ್ರಗತಿಯಾಗುತ್ತದೆ, ಆದಾಯದ ಮೂಲಗಳು ಏರಿಕೆಯಾಗುತ್ತವೆ.
ಮನೆಯಲ್ಲಿ ಶಾಂತಿ-ನೆಮ್ಮದಿ: ನಿತ್ಯ ಜಗಳ, ಮನಸ್ತಾಪಗಳಿಂದ ಕಂಗಾಲಾಗಿರುವ ಮನೆಗಳಲ್ಲಿ ಧನಾತ್ಮಕ ಶಕ್ತಿಯನ್ನು ಪ್ರವಹಿಸುವಂತೆ ಮಾಡಿ ಕುಟುಂಬದಲ್ಲಿ ಶಾಂತಿ ಮತ್ತು ಪ್ರೀತಿಯನ್ನು ಹೆಚ್ಚಿಸುತ್ತದೆ.
ವಾಸ್ತು ಪ್ರಕಾರ ನಿಂಬೆ ಗಿಡವನ್ನು ಯಾವ ದಿಕ್ಕಿನಲ್ಲಿ ನೆಡಬೇಕು?
ನಿಂಬೆ ಗಿಡದ ಸಂಪೂರ್ಣ ಶುಭ ಫಲಗಳು ಸಿಗಬೇಕೆಂದರೆ ಅದನ್ನು ಸರಿಯಾದ ದಿಕ್ಕಿನಲ್ಲಿಯೇ ನೆಡುವುದು ಅತ್ಯಗತ್ಯ:
ಸೂಕ್ತ ದಿಕ್ಕು: ವಾಸ್ತು ಪ್ರಕಾರ ನಿಂಬೆ ಗಿಡವನ್ನು ಮನೆಯ ಪೂರ್ವ, ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ನೆಡುವುದು ಅತ್ಯಂತ ಶ್ರೇಷ್ಠ. ಇದು ಮನೆಗೆ ಯಶಸ್ಸು ಹಾಗೂ ಸಂತೋಷವನ್ನು ತರುತ್ತದೆ.
ಎಲ್ಲಿ ಇಡಬಾರದು?: ಯಾವುದೇ ಕಾರಣಕ್ಕೂ ನಿಂಬೆ ಗಿಡವನ್ನು ದಕ್ಷಿಣ ಅಥವಾ ನೈಋತ್ಯ ದಿಕ್ಕಿನಲ್ಲಿ ನೆಡಬಾರದು.
ಎಚ್ಚರಿಕೆ: ಮನೆಯ ಮುಖ್ಯ ದ್ವಾರಕ್ಕೆ ತೀರಾ ಹತ್ತಿರವಾಗಿ, ದ್ವಾರಕ್ಕೆ ನೇರವಾಗಿ ಅಡ್ಡಿಯಾಗುವಂತೆ ಅಥವಾ ಶೌಚಾಲಯ ಮತ್ತು ಸ್ಟೋರ್ ರೂಂ ಬಳಿ ಈ ಗಿಡವನ್ನು ನೆಡಬೇಡಿ.
ಈ ಸಣ್ಣ ತಪ್ಪುಗಳನ್ನು ತಪ್ಪದೇ ನಿವಾರಿಸಿ:
ಮನೆಯಲ್ಲಿ ನಿಂಬೆ ಗಿಡ ಬೆಳೆಸುವಾಗ ಕೆಲವೊಂದು ಜಾಗರೂಕತೆ ವಹಿಸುವುದು ಮುಖ್ಯ:
ಒಣಗಲು ಬಿಡಬೇಡಿ: ಮನೆಯಲ್ಲಿರುವ ನಿಂಬೆ ಗಿಡವನ್ನು ಯಾವುದೇ ಕಾರಣಕ್ಕೂ ಒಣಗಲು ಬಿಡಬಾರದು.
ಶುಚಿತ್ವ ಕಾಪಾಡಿ: ಗಿಡದ ಸುತ್ತಮುತ್ತಲಿನ ಜಾಗವನ್ನು ಸದಾ ಸ್ವಚ್ಛವಾಗಿಟ್ಟುಕೊಳ್ಳಿ.
ಸತ್ತ ಕೊಂಬೆಗಳನ್ನು ತೆಗೆಯಿರಿ: ಗಿಡದಲ್ಲಿರುವ ಒಣಗಿದ ಎಲೆ ಹಾಗೂ ಸತ್ತ ಕೊಂಬೆಗಳನ್ನು ಕಾಲಕಾಲಕ್ಕೆ ಕತ್ತರಿಸಿ ತೆಗೆದುಹಾಕಿ.
ಹಸಿರಿನಿಂದ ಕಂಗೊಳಿಸುವ ನಿಂಬೆ ಗಿಡವು ಮನೆಯ ವಾಸ್ತು ದೋಷಗಳನ್ನು ನಿವಾರಿಸಿ, ಮನೆಯಲ್ಲಿ ಸದಾ ಸಿರಿ-ಸಂಪತ್ತು ಹಾಗೂ ಸಂತೋಷ ನೆಲೆಸುವಂತೆ ಮಾಡುತ್ತದೆ.

