HomeLive News55 ಸಾವಿರ ಕೊಟ್ಟು ರೂಮ್ ಬುಕ್ ಮಾಡಿದ್ರೆ ಸಿಕ್ಕಿದ್ದು ಅವಮಾನ: ಉದಯಪುರದ ಲೀಲಾ ಪ್ಯಾಲೇಸ್‌ಗೆ ಬಿತ್ತು...

55 ಸಾವಿರ ಕೊಟ್ಟು ರೂಮ್ ಬುಕ್ ಮಾಡಿದ್ರೆ ಸಿಕ್ಕಿದ್ದು ಅವಮಾನ: ಉದಯಪುರದ ಲೀಲಾ ಪ್ಯಾಲೇಸ್‌ಗೆ ಬಿತ್ತು ಭಾರಿ ದಂಡ!

ಐಷಾರಾಮಿ ವಾಸ್ತವ್ಯದ ಕನಸು ಹೊತ್ತು ರಾಜಸ್ಥಾನದ ಉದಯಪುರಕ್ಕೆ ತೆರಳಿದ್ದ ಚೆನ್ನೈ ದಂಪತಿಗೆ ಅಲ್ಲಿನ ಪಂಚತಾರಾ ಹೋಟೆಲ್ ‘ದಿ ಲೀಲಾ ಪ್ಯಾಲೇಸ್’ನಲ್ಲಿ ಆಘಾತಕಾರಿ ಅನುಭವವಾಗಿದೆ. ದಂಪತಿ ರೂಮಿನ ಒಳಗಿದ್ದಾಗಲೇ ಹೌಸ್‌ಕೀಪಿಂಗ್ ಸಿಬ್ಬಂದಿ ಮಾಸ್ಟರ್ ಕೀ ಬಳಸಿ ಒಳಬಂದಿರುವುದು ದಂಪತಿಯ ನೆಮ್ಮದಿ ಕೆಡಿಸಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಚೆನ್ನೈ ಗ್ರಾಹಕ ನ್ಯಾಯಾಲಯವು ಹೋಟೆಲ್‌ಗೆ ಭಾರಿ ದಂಡ ವಿಧಿಸಿದೆ.

ನಡೆದಿದ್ದೇನು? 2025ರ ಜನವರಿ 26 ರಂದು ಚೆನ್ನೈ ಮೂಲದ ವಕೀಲರೊಬ್ಬರು ಈ ಹೋಟೆಲ್‌ನಲ್ಲಿ ಒಂದು ದಿನದ ವಾಸ್ತವ್ಯಕ್ಕಾಗಿ 55,500 ರೂಪಾಯಿ ಪಾವತಿಸಿ ರೂಮ್ ಬುಕ್ ಮಾಡಿದ್ದರು. ದಂಪತಿ ರೂಮಿನ ವಾಶ್‌ರೂಮ್‌ನಲ್ಲಿದ್ದಾಗ, ಹೌಸ್‌ಕೀಪಿಂಗ್ ಸಿಬ್ಬಂದಿಯೊಬ್ಬರು ಬೆಲ್ ಮಾಡಿ, ಕೇವಲ ಒಂದು ನಿಮಿಷದ ಒಳಗೆ ಮಾಸ್ಟರ್ ಕೀ ಬಳಸಿ ಒಳಬಂದಿದ್ದಾರೆ. ದಂಪತಿ ಒಳಗಿನಿಂದ “ನೋ ಸರ್ವಿಸ್” (ಸೇವೆ ಬೇಡ) ಎಂದು ಕಿರುಚಿದರೂ ಕೇಳಿಸಿಕೊಳ್ಳದ ಸಿಬ್ಬಂದಿ, ವಾಶ್‌ರೂಮ್‌ನ ಕಿಟಕಿ ಅಥವಾ ಬಾಗಿಲಿನ ಸಂದು ಮೂಲಕ ಇಣುಕಿ ನೋಡಿದ್ದಾರೆ ಎಂದು ದೂರು ನೀಡಲಾಗಿತ್ತು.

ಕೋರ್ಟ್ ನೀಡಿದ ಚಾಟಿ: ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಗ್ರಾಹಕ ವಿವಾದಗಳ ಪರಿಹಾರ ಆಯೋಗವು ಹೋಟೆಲ್ ಮ್ಯಾನೇಜ್‌ಮೆಂಟ್‌ಗೆ ಈ ಕೆಳಗಿನಂತೆ ಆದೇಶಿಸಿದೆ:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ
  • ದಂಪತಿಗೆ ಉಂಟಾದ ಮಾನಸಿಕ ಕಿರಿಕಿರಿ ಮತ್ತು ಖಾಸಗಿತನದ ಉಲ್ಲಂಘನೆಗಾಗಿ 10 ಲಕ್ಷ ರೂಪಾಯಿ ಪರಿಹಾರ ನೀಡಬೇಕು.
  • ರೂಮ್ ಬಾಡಿಗೆಯಾದ 55,500 ರೂಪಾಯಿ ಹಣವನ್ನು ಶೇ. 9ರಷ್ಟು ಬಡ್ಡಿಯೊಂದಿಗೆ ವಾಪಸ್ ನೀಡಬೇಕು.
  • ಕಾನೂನು ಹೋರಾಟದ ವೆಚ್ಚವಾಗಿ 10,000 ರೂಪಾಯಿ ಪಾವತಿಸಬೇಕು.

“ಹೋಟೆಲ್‌ನ ಆಂತರಿಕ ನಿಯಮಗಳು ಅತಿಥಿಗಳ ಮೂಲಭೂತ ಹಕ್ಕಾದ ಖಾಸಗಿತನ ಮತ್ತು ಸುರಕ್ಷತೆಗಿಂತ ಮಿಗಿಲಲ್ಲ” ಎಂದು ನ್ಯಾಯಾಲಯ ಈ ಸಂದರ್ಭದಲ್ಲಿ ಗುಡುಗಿದೆ. ಅಲ್ಲದೆ ಹೋಟೆಲ್‌ನ ಸಿಸಿಟಿವಿ ಕ್ಯಾಮೆರಾಗಳು ಕೆಲಸ ಮಾಡದಿರುವುದನ್ನು ಆಯೋಗವು ತರಾಟೆಗೆ ತೆಗೆದುಕೊಂಡಿದೆ.

ಹೋಟೆಲ್ ವಾದವೇನು? ಹೋಟೆಲ್ ಮ್ಯಾನೇಜ್‌ಮೆಂಟ್ ಈ ಆರೋಪವನ್ನು ನಿರಾಕರಿಸಿದ್ದು, “ಅತಿಥಿಗಳು ಬಾಗಿಲಿಗೆ ‘ಡೋಂಟ್ ಡಿಸ್ಟರ್ಬ್’ (ತೊಂದರೆ ನೀಡಬೇಡಿ) ಬೋರ್ಡ್ ಹಾಕಿರಲಿಲ್ಲ. ಸಿಬ್ಬಂದಿ ಬೆಲ್ ಮಾಡಿದ ನಂತರವೇ ಒಳಗೆ ಹೋಗಿದ್ದಾರೆ ಮತ್ತು ದಂಪತಿ ಒಳಗಿರುವುದು ತಿಳಿಯುತ್ತಿದ್ದಂತೆ ತಕ್ಷಣ ಹೊರಬಂದಿದ್ದಾರೆ” ಎಂದು ವಾದಿಸಿತ್ತು. ಆದರೆ ನ್ಯಾಯಾಲಯವು ಹೋಟೆಲ್‌ನ ಈ ಸಮರ್ಥನೆಯನ್ನು ಒಪ್ಪಲಿಲ್ಲ.

For Latest News Updates, Join Our Whatsapp Community🚩
RELATED ARTICLES

Most Popular