ಬೆಳಗಾವಿ: ಇತ್ತೀಚಿನ ದಿನಗಳಲ್ಲಿ ಹೃದಯಾಘಾತಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಮತ್ತೆ ಹೆಚ್ಚುತ್ತಿದೆ. ಮಾಜಿ ಡಿಸಿಎಂ, ಶಾಸಕ ಲಕ್ಷ್ಮಣ ಸವದಿ ಅವರ ಆತ್ಮೀಯ ಬೆಂಬಲಿಗರೊಬ್ಬರು ಶಾಸಕರ ಕಣ್ಣೆದುರೇ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತಾವಂಶಿ ಗ್ರಾಮದಲ್ಲಿ ಇಂದು ಬೆಳಿಗ್ಗೆ ಈ ಘಟನೆ ನಡೆದಿದೆ. ರಾವಸಾಬ ಬೇವನೂರ (65) ಮೃತ ದುರ್ದೈವಿ. ಶಾಸಕ ಲಕ್ಷ್ಮಣ್ ಸವದಿ ಎದುರೇ ಈ ಘಟನೆ ನಡೆದಿದೆ.
ತಾವಂಶಿ ಗ್ರಾಮದಲ್ಲಿ ನಡೆದ ಗೃಹ ಪ್ರವೇಶ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಶಾಸಕ ಲಕ್ಷ್ಮಣ ಸವದಿ ತೆರಳಿದ್ದರು. ಈ ಸಂದರ್ಭದಲ್ಲಿ ಅವರ ಆಪ್ತ ಬೆಂಬಲಿಗ ರಾವಸಾಬ ಕೂಡ ಜೊತೆಗಿದ್ದರು. ರಾವಸಾಬ ಅವರಿಗೆ ಇದ್ದಕ್ಕಿದ್ದಂತೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಶಾಸಕರೇ ಮುತುವರ್ಜಿ ವಹಿಸಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ವ್ಯವಸ್ಥೆ ಮಾಡಿದರೂ ಸಹ, ರಾವಸಾಬ ಮಾರ್ಗಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ.
ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಅದಾಗಲೇ ರಾವಸಾಬ ಮೃತಪಟ್ತಿರುವುದಾಗಿ ತಿಳಿಸಿದ್ದಾಳೆ. ಬಹುಕಾಲದ ಆಪ್ತನನ್ನು ಕಳೆದುಕೊಂಡ ಶಾಸಕ ಲಕ್ಷ್ಮಣ ಸವದಿ ಕಂಬನಿ ಮಿಡಿದಿದ್ದಾರೆ.

