ದಕ್ಷಿಣ ಭಾರತದ ಖ್ಯಾತ ನಟಿ ಹಾಗೂ ರಾಜಕಾರಣಿ ಖುಷ್ಬೂ ಸುಂದರ್ ತಮ್ಮ ಆಕರ್ಷಕ ಮತ್ತು ಕಾಂತಿಯುತ ಚರ್ಮದ ಹಿಂದಿರುವ ಸೌಂದರ್ಯದ ರಹಸ್ಯವನ್ನು ಇತ್ತೀಚಿನ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ತಮ್ಮ 56ನೇ ವಯಸ್ಸಿನಲ್ಲೂ ಯೌವನಯುತವಾಗಿ ಮತ್ತು ಮೈಕಾಂತಿಯಿಂದ ಕಂಗೊಳಿಸುವ ಈ ನಟಿ, ದುಬಾರಿ ಸೌಂದರ್ಯವರ್ಧಕ ಉತ್ಪನ್ನಗಳ ಬದಲು ಸಂಪೂರ್ಣವಾಗಿ ನೈಸರ್ಗಿಕ ಮನೆಮದ್ದುಗಳನ್ನೇ ನೆಚ್ಚಿಕೊಂಡಿದ್ದಾರೆ. ಹಸಿ ಹಾಲು, ಕುಂಕುಮ ಕೇಶರ ಹಾಗೂ ತೆಂಗಿನೆಣ್ಣೆಯಂತಹ ಸರಳ ಪದಾರ್ಥಗಳೇ ತಮ್ಮ ಆರೋಗ್ಯಕರ ಚರ್ಮದ ರಹಸ್ಯ ಎಂದು ಅವರು ಹೆಮ್ಮೆಯಿಂದ ಹಂಚಿಕೊಂಡಿದ್ದಾರೆ.
ಇತ್ತೀಚೆಗೆ ‘ಮಾಲೈ ಮಲಾರ್’ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಾ ಖುಷ್ಬೂ ಸುಂದರ್, “ನಾನು ಮುಂಜಾನೆ ಬೇಗ ಏಳುವ ಅಭ್ಯಾಸವಿರುವವಳು. ಸಾಮಾನ್ಯವಾಗಿ ಬೆಳಿಗ್ಗೆ 4:30 ರಿಂದ 5:00 ಗಂಟೆಯೊಳಗೆ ಎಚ್ಚರಗೊಳ್ಳುತ್ತೇನೆ. ಮನೆಯವರಿಗಾಗಿ ನಾನೇ ಖುದ್ದಾಗಿ ಚಹಾ ತಯಾರಿಸುತ್ತೇನೆ. ಆ ಸಮಯದಲ್ಲಿ ಸ್ವಲ್ಪ ಹಸಿ ಹಾಲನ್ನು ಮುಖಕ್ಕೆ ಹಚ್ಚಿಕೊಳ್ಳುತ್ತೇನೆ. ಕೆಲವೊಮ್ಮೆ ಕುಂಕುಮ ಕೇಸರಿಯನ್ನು ನೀರಿನಲ್ಲಿ ನೆನೆಸಿ, ಆ ನೀರಿನಿಂದ ಮುಖಕ್ಕೆ ಮಸಾಜ್ ಮಾಡುತ್ತೇನೆ. ಇನ್ನುಳಿದಂತೆ ನನ್ನ ಮನಸ್ಥಿತಿಗೆ ತಕ್ಕಂತೆ ತೆಂಗಿನೆಣ್ಣೆ ಅಥವಾ ಬಾದಾಮಿ ಎಣ್ಣೆಯನ್ನು ಮುಖಕ್ಕೆ ಬಳಸುತ್ತೇನೆ. ಪ್ರತಿದಿನ ಸುಮಾರು ಅರ್ಧ ಗಂಟೆಗಳ ಕಾಲ ನನ್ನ ಚರ್ಮದ ಆರೈಕೆಗಾಗಿ ಈ ನೈಸರ್ಗಿಕ ವಿಧಾನಗಳನ್ನು ತಪ್ಪದೇ ಅನುಸರಿಸುತ್ತೇನೆ” ಎಂದು ತಮ್ಮ ದಿನಚರಿಯನ್ನು ವಿವರಿಸಿದ್ದಾರೆ.
ಕೇವಲ ಸೌಂದರ್ಯದ ವಿಚಾರ ಮಾತ್ರವಲ್ಲದೆ, ಇತ್ತೀಚಿನ ದಿನಗಳಲ್ಲಿ ಖುಷ್ಬೂ ಸುಂದರ್ ಅವರು ತಮ್ಮ ಅದ್ಭುತ ತೂಕ ಇಳಿಕೆಯ ಕಾರಣದಿಂದಲೂ ಭಾರಿ ಮುಖಪುಟಕ್ಕೇರಿದ್ದಾರೆ. ಐದು ವರ್ಷಗಳ ಸುದೀರ್ಘಾವಧಿಯಲ್ಲಿ ಅವರು ಯಾವುದೇ ಕ್ರ್ಯಾಶ್ ಡಯಟ್ ಮಾಡದೆ ಅಥವಾ ಜಿಮ್ನಲ್ಲಿ ಗಂಟೆಗಟ್ಟಲೆ ಬೆವರು ಹರಿಸದೆ, ಬರೋಬ್ಬರಿ 40 ಕೆಜಿಗಳಿಗೂ ಹೆಚ್ಚು ತೂಕವನ್ನು ಇಳಿಸಿಕೊಳ್ಳುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಹಂತ ಹಂತವಾಗಿ ದೀರ್ಘಕಾಲೀನ ಜೀವನಶೈಲಿಯಲ್ಲಿ ಅಳವಡಿಸಿಕೊಂಡ ಬದಲಾವಣೆಗಳೇ ತಮ್ಮ ಈ ಸಾಧನೆಗೆ ಕಾರಣ ಎಂದು ಅವರು ‘ದಿ ಟೈಮ್ಸ್ ಆಫ್ ಇಂಡಿಯಾ’ ಜತೆಗೆ ಮಾತನಾಡುತ್ತಾ ತಿಳಿಸಿದ್ದಾರೆ.
ಆಹಾರ ಪದ್ಧತಿಯ ಬಗ್ಗೆ ಮಾತನಾಡುವಾಗ, ಹಸಿವಾದಾಗ ಮಾತ್ರ ತಿನ್ನಬೇಕೇ ಹೊರತು ಸಮಯ ಸಿಕ್ಕಾಗಲೆಲ್ಲಾ ತಿಂಡಿ ತಿನ್ನುವ ಅಭ್ಯಾಸ ಒಳ್ಳೆಯದಲ್ಲ ಎಂದು ಖುಷ್ಬೂ ಅಭಿಪ್ರಾಯಪಟ್ಟಿದ್ದಾರೆ. ಜಪಾನಿ ಜನರ ವಿಶಿಷ್ಟ ಆಹಾರ ಶೈಲಿಯನ್ನು ತಾವೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿರುವುದಾಗಿ ಅವರು ಬಹಿರಂಗಪಡಿಸಿದ್ದಾರೆ. ದೊಡ್ಡ ತಟ್ಟೆಯಲ್ಲಿ ಬಡಿಸಿಕೊಂಡು ತಿನ್ನುವ ಬದಲು, ಜಪಾನಿಯರಂತೆ ಸಣ್ಣ ಬಟ್ಟಲು ಅಥವಾ ತಟ್ಟೆಯನ್ನು ಬಳಸಿದರೆ ದೇಹಕ್ಕೆ ಎಷ್ಟು ಬೇಕೋ ಅಷ್ಟು ಆಹಾರ ಮಾತ್ರ ಸೇರುತ್ತದೆ ಮತ್ತು ಇದು ತೂಕ ನಿಯಂತ್ರಣಕ್ಕೆ ಅತ್ಯಂತ ಸಹಕಾರಿ ಎಂದು ಅವರು ಸಲಹೆ ನೀಡಿದ್ದಾರೆ.

