ಮಡಿಕೇರಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ(ಕ.ರಾ.ರ.ಸಾ.ನಿ) ಪುತ್ತೂರು ವಿಭಾಗದ ವತಿಯಿಂದ ಇದೇ ಪ್ರಥಮ ಬಾರಿಗೆ ಮಡಿಕೇರಿ ದಸರಾ ಪ್ರಯುಕ್ತ ಕೊಡಗು ಜಿಲ್ಲೆಯ ವಿವಿಧ ಪ್ರೇಕ್ಷಣೀಯ ಸ್ಥಳಗಳನ್ನೊಳಗೊಂಡ ಒಂದು ದಿನದ ವಿಶೇಷ ಪ್ಯಾಕೇಜ್ ಟೂರ್ ಅನ್ನು ಆಯೋಜಿಸಲಾಗಿದೆ.
ಅಕ್ಟೋಬರ್ 11 ರಿಂದ ಅಕ್ಟೋಬರ್ 26 ರವರೆಗೆ ಈ ವಿಶೇಷ ಬಸ್ ಸೌಲಭ್ಯ ಲಭ್ಯವಿರಲಿದೆ. ಸಾರ್ವಜನಿಕ ಪ್ರವಾಸಿಗರಿಗಾಗಿ ಎರಡು ವಿಭಿನ್ನ ಮಾರ್ಗ ಸಿದ್ಧಪಡಿಸಲಾಗಿದೆ
ಕಾವೇರಿ ದರ್ಶನ: ಮಡಿಕೇರಿ ಬಸ್ ನಿಲ್ದಾಣದಿಂದ ಬೆಳಗ್ಗೆ 06:30 ಕ್ಕೆ ನಿರ್ಗಮಿಸುತ್ತದೆ. ಭೇಟಿ ನೀಡುವ ಪ್ರೇಕ್ಷಣೀಯ ಸ್ಥಳಗಳು: ಓಂಕಾರೇಶ್ವರ ದೇವಸ್ಥಾನ, ಇಗ್ಗುತ್ತಪ್ಪ ದೇವಸ್ಥಾನ, ಭಾಗಮಂಡಲ ದೇವಸ್ಥಾನ, ತಲಕಾವೇರಿ ದೇವಸ್ಥಾನ, ಅಬ್ಬಿ ಜಲಪಾತ ಹಾಗೂ ರಾಜಾಸೀಟು.
ಕೊಡಗಿನ ಸೊಬಗು: ಮಡಿಕೇರಿ ಬಸ್ ನಿಲ್ದಾಣದಿಂದ ಬೆಳಗ್ಗೆ 06:30 ಗಂಟೆಗೆ ನಿರ್ಗಮಿಸುತ್ತದೆ. ಸಂದರ್ಶಿಸುವ ಸ್ಥಳಗಳು: ಓಂಕಾರೇಶ್ವರ ದೇವಸ್ಥಾನ, ಹಾರಂಗಿ ಜಲಾಶಯ/ ಆನೆ ಕ್ಯಾಂಪ್, ಗೋಲ್ಡನ್ ಟೆಂಪಲ್, ಕಾವೇರಿ ನಿಸರ್ಗಧಾಮ, ಕಾಫಿ ತೋಟಗಳು(ಕಾಫಿ ಪ್ಲಾಂಟೇಷನ್), ಅಬ್ಬಿ ಜಲಪಾತ ಮತ್ತು ರಾಜಾಸೀಟು.
ಪ್ರಯಾಣ ದರ ಮತ್ತು ಸೌಲಭ್ಯಗಳು: ದರ: ವಯಸ್ಕರಿಗೆ ರೂ. 400 ಹಾಗೂ ಮಕ್ಕಳಿಗೆ ರೂ.300 ನಿಗದಿಪಡಿಸಲಾಗಿದೆ (ಊಟೋಪಹಾರ ಮತ್ತು ಪ್ರವೇಶ ಶುಲ್ಕ ಹೊರತುಪಡಿಸಿ). ಸಮಯ ಬೆಳಗ್ಗೆ 06:30 ಕ್ಕೆ ಹೊರಡುವ ಈ ಬಸ್ ಗಳು ರಾತ್ರಿ 19:30 ರ ಸುಮಾರಿಗೆ ಮಡಿಕೇರಿ ಬಸ್ ನಿಲ್ದಾಣಕ್ಕೆ ವಾಪಸ್ ತಲುಪಲಿವೆ.
ಪ್ರವಾಸಿಗರು ನಿಗಮದ ಅಧಿಕೃತ ವೆಬ್‍ಸೈಟ್ www.ksrtc.in ಮೂಲಕ ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸಿಕೊಳ್ಳಬಹುದು. ಕೊಡಗಿನ ರಮಣೀಯ ತಾಣಗಳನ್ನು ಕಣ್ತುಂಬಿಕೊಳ್ಳಲು ಇಚ್ಛಿಸುವ ಪ್ರಯಾಣಿಕರು ಈ ವಿಶೇಷ ಒಂದು ದಿನದ ಪ್ಯಾಕೇಜ್ ಟೂರ್ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವಂತೆ ಕೆಎಸ್‍ಆರ್‍ಟಿಸಿ ಪುತ್ತೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಪಿ. ಶ್ರೀಹರಿಬಾಬು ಕೋರಿದ್ದಾರೆ.
ಅ.11 ರಿಂದ ಮಡಿಕೇರಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಭ್ರಮ
ಮಡಿಕೇರಿ: ಮಡಿಕೇರಿ ದಸರಾ-2026ರ ಅಂಗವಾಗಿ ದಸರಾ ಸಾಂಸ್ಕೃತಿಕ ಸಮಿತಿಯ ವತಿಯಿಂದ ಅಕ್ಟೋಬರ್ 11 ರಿಂದ 21 ರವರೆಗೆ ವಿವಿಧ ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮ ನಡೆಯಲಿದೆ.
ನಗರದ ಗಾಂಧಿ ಮೈದಾನದಲ್ಲಿ ಕಾರ್ಯಕ್ರಮಗಳು ನಡೆಯಲಿದ್ದು, ಕಾಫಿ ದಸರಾ, ಕವಿಗೋಷ್ಠಿ, ಮಕ್ಕಳ ದಸರಾ, ಜನಪದ ದಸರಾ, ಯುವ ದಸರಾ ಹಾಗೂ ಮಹಿಳಾ ದಸರಾ ಸೇರಿದಂತೆ ಹಲವು ವೈವಿಧ್ಯಮಯ ಕಾರ್ಯಕ್ರಮಗಳು ಜನಮನ ಸೆಳೆಯಲಿವೆ.
ಅಕ್ಟೋಬರ್ 11 ರಂದು ಸಂಜೆ 5.30ಕ್ಕೆ ಪಂಪಿನ ಕೆರೆಯಲ್ಲಿ ಕರಗ ಉತ್ಸವಕ್ಕೆ ಚಾಲನೆ ದೊರೆಯಲಿದೆ.
ಅಕ್ಟೋಬರ್ 12, ರಂದು ಸಂಜೆ 6.30ಕ್ಕೆ ಗಾಂಧಿ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದೆ.
ಅಕ್ಟೋಬರ್ 13 ರಂದು ಬೆಳಗ್ಗೆ ಕಾಫಿ ದಸರಾ ಉದ್ಘಾಟನೆ ನಡೆಯಲಿದ್ದು, ಸಂಜೆ 4 ಗಂಟೆಗೆ ಗಾಂಧಿ ಮೈದಾನದಲ್ಲಿ ಕಾರ್ಯಕ್ರಮಗಳು ನಡೆಯಲಿವೆ.
ಅಕ್ಟೋಬರ್ 14 ರಂದು ಬೆಳಗ್ಗೆ 10 ಗಂಟೆಗೆ ಕಾಫಿ ದಸರಾ ಮೇಳ ಆರಂಭವಾಗಲಿದ್ದು, ಸಂಜೆ 6 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಅಕ್ಟೋಬರ್ 15 ರಂದು ಬೆಳಗ್ಗೆ 10 ಗಂಟೆಗೆ ಕವಿಗೋಷ್ಠಿ ಹಾಗೂ ಸಂಜೆ 6 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಅಕ್ಟೋಬರ್ 16 ರಂದು ಬೆಳಗ್ಗೆ 9 ಗಂಟೆಗೆ ಮಕ್ಕಳ ದಸರಾ ಸ್ಪರ್ಧೆಗಳು ಹಾಗೂ ಸಂಜೆ 6.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಅಕ್ಟೋಬರ್ 17 ರಂದು ಬೆಳಗ್ಗೆ 10 ಗಂಟೆಗೆ ಶ್ವಾನ ಪ್ರದರ್ಶನ (ಡಾಗ್ ಶೋ) ಹಾಗೂ ಸಂಜೆ 6 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಅಕ್ಟೋಬರ್ 18 ರಂದು ಬೆಳಗ್ಗೆ 10 ಗಂಟೆಗೆ ಜನಪದ ದಸರಾ ಹಾಗೂ ಸಂಜೆ 6.30ಕ್ಕೆ ಯುವ ದಸರಾ ಕಾರ್ಯಕ್ರಮ ಆಯೋಜಿಸಲಾಗಿದೆ.
ಅಕ್ಟೋಬರ್ 19 ರಂದು ಬೆಳಗ್ಗೆ 10 ಗಂಟೆಗೆ ಮಹಿಳಾ ದಸರಾ ಹಾಗೂ ಸಂಜೆ 6.30ಕ್ಕೆ ಗಾಂಧಿ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಅಕ್ಟೋಬರ್, 20 ರಂದು ಆಯುಧ ಪೂಜೆಯ ಅಂಗವಾಗಿ ಸಂಜೆ 6 ಗಂಟೆಯಿಂದ ಗಾಂಧಿ ಮೈದಾನದಲ್ಲಿ ರಸಮಂಜರಿ ಕಾರ್ಯಕ್ರಮಗಳು ನಡೆಯಲಿವೆ.
ಅಕ್ಟೋಬರ್ 21 ರಂದು ವಿಜಯ ದಶಮಿಯಂದು ಸಂಜೆ 6.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ರಾತ್ರಿ ನಗರದ ಪ್ರಮುಖ ರಸ್ತೆಗಳಲ್ಲಿ ದಸರಾ ಮಂಟಪಗಳ ಆಕರ್ಷಕ ಶೋಭಾಯಾತ್ರೆ ಸಾಗಲಿದೆ.
ಅಕ್ಟೋಬರ್ 22 ರಂದು ಬೆಳಗ್ಗೆ 6 ಗಂಟೆಗೆ ಅತಿಥಿಗಳಿಂದ ವಿಜೇತ ದಸರಾ ಮಂಟಪಗಳಿಗೆ ಪ್ರಶಸ್ತಿ ವಿತರಣೆ ನಡೆಯಲಿದೆ.

