ಕುಶಿನಗರ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಕುಶಿನಗರದಲ್ಲಿ ರಾಷ್ಟ್ರೀಯ ಹೆದ್ದಾರಿ 28ರ ಮೇಲೆ ಓಮ್ನಿ ವ್ಯಾನ್ ಮತ್ತು ಟ್ರೈಲರ್ ಟ್ರಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಕನಿಷ್ಠ ಆರು ಮಂದಿ ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಅಪಘಾತವು ಹತಾ ಕೊತ್ವಾಲಿ ಪೊಲೀಸ್ ಠಾಣಾ ವ್ಯಾಪ್ತಿಯ ಥಾರುಅದಿಹ್ (Tharuadih) ಬಳಿ ಸಂಭವಿಸಿದೆ.
ವ್ಯಾನ್ ನಲ್ಲಿ ಎಂಟು ಮಂದಿ ಪ್ರಯಾಣಿಸುತ್ತಿದ್ದಾಗ ಟ್ರೈಲರ್ ಟ್ರಕ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ, ವ್ಯಾನ್ ನಲ್ಲಿದ್ದ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ನಂತರ ಗೋರಖ್ ಪುರ ವೈದ್ಯಕೀಯ ಕಾಲೇಜಿಗೆ (Gorakhpur Medical College) ರವಾನಿಸಲಾಗಿದೆ.
ಮೃತಪಟ್ಟವರಲ್ಲಿ ಒಂದೇ ಕುಟುಂಬದ ಐವರು ಸದಸ್ಯರು ಸೇರಿದ್ದಾರೆ. ಇವರು ಕಪ್ತಂಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಭಲುಹಿ(Bhaluhi) ಗ್ರಾಮದ ನಿವಾಸಿಗಳಾಗಿದ್ದಾರೆ. ಸಂಬಂಧಿಕರ ಮನೆಯಲ್ಲಿ ನಡೆದ ಸಮಾರಂಭವೊಂದರಲ್ಲಿ ಪಾಲ್ಗೊಂಡು ಹಿಂತಿರುಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಅಪಘಾತದ ತೀವ್ರತೆ ಎಷ್ಟಿತ್ತೆಂದರೆ, ವ್ಯಾನ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಅದರಲ್ಲಿ ಪ್ರಯಾಣಿಸುತ್ತಿದ್ದ ಆರು ಮಂದಿಯೂ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.
ಸ್ಥಳೀಯ ನಿವಾಸಿಗಳು ಮತ್ತು ಪೊಲೀಸರು ಸೇರಿ, ಜಖಂಗೊಂಡ ವಾಹನದಿಂದ ಮೃತದೇಹಗಳನ್ನು ಹೊರತೆಗೆಯಲು ಸಹಾಯ ಮಾಡಿದ್ದಾರೆ.
ಮುಖ್ಯಮಂತ್ರಿ ಯೋಗಿ ಸಂತಾಪ
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಪಘಾತದ ಬಗ್ಗೆ ಮಾಹಿತಿ ಪಡೆದಿದ್ದು, ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ.
ಅಪಘಾತ ಸ್ಥಳಕ್ಕೆ ತೆರಳುವಂತೆ ಹಾಗೂ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ಅವರು ನಿರ್ದೇಶನ ನೀಡಿದ್ದಾರೆ. ಅಲ್ಲದೆ, ಸಂತ್ರಸ್ತರ ಕುಟುಂಬಗಳಿಗೆ ಅಗತ್ಯವಿರುವ ಎಲ್ಲ ರೀತಿಯ ನೆರವು ಒದಗಿಸುವುದನ್ನು ಖಚಿತಪಡಿಸಿಕೊಳ್ಳುವಂತೆ ಸೂಚಿಸಿದ್ದಾರೆ. ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಮುಖ್ಯಮಂತ್ರಿ ಹಾರೈಸಿದ್ದಾರೆ.
ಉತ್ತರ ಪ್ರದೇಶದ ಸುಲ್ತಾನ್ ಪುರದಲ್ಲಿ ಮದುವೆ ಸಂಭ್ರಮಾಚರಣೆಯ ವೇಳೆ ಗುಂಡು ಹಾರಾಟ: ಐದು ವರ್ಷದ ಬಾಲಕ ಸಾವು
ಮತ್ತೊಂದು ಘಟನೆಯಲ್ಲಿ, ಉತ್ತರ ಪ್ರದೇಶದ ಸುಲ್ತಾನ್ ಪುರ ಜಿಲ್ಲೆಯಲ್ಲಿ ಭಾನುವಾರ ಸಂಜೆ ಮದುವೆ ಮೆರವಣಿಗೆಗೆ ಮುನ್ನ ನಡೆದ ಸಂಭ್ರಮಾಚರಣೆಯ ಗುಂಡು ಹಾರಾಟದ ವೇಳೆ, ಗುಂಡು ತಗುಲಿ ಐದು ವರ್ಷದ ಬಾಲಕನೊಬ್ಬ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕದಿಪುರ ಪೊಲೀಸ್ ಠಾಣಾ ವ್ಯಾಪ್ತಿಯ ಫುಟೆಹರಿ ಬಾಂಕೆ (Futehari Banke) ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮದುವೆ ಮೆರವಣಿಗೆ ಹೊರಡುವ ಮುನ್ನ, ಬಾಲಕನ ಸಂಬಂಧಿ ಎಂದು ಗುರುತಿಸಲಾದ ಅಜಯ್ ಎಂಬಾತ ಗುಂಡು ಹಾರಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಮೃತ ಬಾಲಕನನ್ನು ಅರ್ಶ್ ಪಟೇಲ್ ಎಂದು ಗುರುತಿಸಲಾಗಿದೆ. ಬಾಲಕನ ತಾಯಿ ಅಮೃತಾ ಪಟೇಲ್ ಮತ್ತು ಕುಟುಂಬದ ಇತರ ಸದಸ್ಯರು ಕೂಡಲೇ ಆತನನ್ನು ಕದಿಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ (Community Health Centre) ಕರೆದೊಯ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅವನ ಸ್ಥಿತಿ ಗಂಭೀರವಾಗಿದ್ದರಿಂದ, ವೈದ್ಯರು ಅವನನ್ನು ಸುಲ್ತಾನ್‌ಪುರದ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಕಳುಹಿಸಿದರು; ಅಲ್ಲಿಗೆ ತಲುಪಿದಾಗ ಅವನು ಮೃತಪಟ್ಟಿದ್ದಾನೆ ಎಂದು ಘೋಷಿಸಲಾಯಿತು.
ತನಿಖೆ ನಡೆಯುತ್ತಿದೆ ಮತ್ತು ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಸರ್ಕಲ್ ಆಫೀಸರ್ ವಿನಯ್ ಗೌತಮ್ ತಿಳಿಸಿದ್ದಾರೆ. ಆರೋಪಿಗಳಿಗಾಗಿ ಪೊಲೀಸ್ ತಂಡಗಳು ಶೋಧ ನಡೆಸುತ್ತಿವೆ ಎಂದು ಅವರು ಹೇಳಿದರು.

