ಬೆಂಗಳೂರು: ಶೀಘ್ರದಲ್ಲಿಯೇ ಬಸ್ ಟಿಕೆಟ್ ದರ ಏರಿಕೆಯಾಗುವುದು ಬಹುತೇಕ ಖಚಿತವಾಗಿದೆ. ಸಾರಿಗೆ ಸಚಿವ ಬೈರತಿ ಸುರೇಶ್ ಈ ಹಿಂದೆಯೇ ಸಾರಿಗೆ ಇಲಾಖೆ ಭಾರೀ ನಷ್ಟದಲ್ಲಿದ್ದು, ಟಿಕೆಟ್ ದರ ಏರಿಕೆ ಅನಿವಾಅರ್ಯ ಎಂದಿದ್ದರು.
ಈ ಹಿನ್ನೆಲೆಯಲ್ಲಿ ಬಸ್ ಪ್ರಯಾಣ ದರ ಮತ್ತಷ್ಟು ದುಬಾರಿಯಾಗುವುದು ಬಹುತೇಕ ಖಚಿತವಾಗಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳಾದ KSRTC, BMTC, NWKRTC, KKRTC ಬಸ್ ಟಿಕೆಟ್ ದರ ಹೆಚ್ಚಳ ಮಾಡಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ.
ಸಾರಿಗೆ ನಿಗಮಗಳ ಆರ್ಥಿಕ ಸ್ಥಿತಿ ಹಾಗೂ ದರ ಪರಿಷ್ಕರಣೆ ಕುರಿತು ಅಧ್ಯಯನ ನಡೆಸಲು ನೇಮಕಗೊಂಡಿದ್ದ ನಿವೃತ್ತ ಐಎಎಸ್ ಅಧಿಕಾರಿ ಅತುಲ್ ತಿವಾರಿ ನೇತೃತ್ವದ ಉನ್ನತ ಮಟ್ಟದ ಸಮಿತಿಯು ತನ್ನ ವರದಿಯನ್ನು ಅಂತಿಮಗೊಳಿಸಿದ್ದು, ಸದ್ಯದಲ್ಲೇ ಸರ್ಕಾರಕ್ಕೆ ಸಲ್ಲಿಸಲಿದೆ. ವರದಿ ಕೈಸೇರಿದ ನಂತರ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ, ಸಚಿವ ಸಂಪುಟದ ಅನುಮೋದನೆ ಪಡೆದು ನೂತನ ದರ ಜಾರಿಗೆ ತರಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ ಒಂದು ವರ್ಷದಲ್ಲಿ 4 ಬಾರಿ ಡೀಸೆಲ್ ದರ ಹೆಚ್ಚಿಸಿದೆ. ಇದರಿಂದ ಪ್ರತಿ ಲೀಟರ್ ಡೀಸೆಲ್ ಮೇಲಿನ ವೆಚ್ಚ 15 ರಿಂದ 16 ರೂ. ರಷ್ಟು ಏರಿಕೆಯಾಗಿದ್ದು, ನಾಲ್ಕೂ ಸಾರಿಗೆ ನಿಗಮಗಳಿಗೆ ವಾರ್ಷಿಕ ಸುಮಾರು 8,000 ಕೋಟಿಯಷ್ಟು ಬೃಹತ್ ಹೊರೆ ಬೀಳುತ್ತಿದೆ. ಜಾಗತಿಕ ಯುದ್ಧ ಮತ್ತು ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕಳೆದ 7 ತಿಂಗಳುಗಳಲ್ಲಿ ಲೀಟರ್ ಡೀಸೆಲ್ ಬೆಲೆ 8 ರೂ. ರಷ್ಟು ಹೆಚ್ಚಾಗಿದೆ. ಇದರಿಂದಾಗಿ ಸಾರಿಗೆ ನಿಗಮಗಳಿಗೆ ತಿಂಗಳಿಗೆ 40 ಕೋಟಿ ರೂ. ಹಾಗೂ ವರ್ಷಕ್ಕೆ 480 ಕೋಟಿಯಷ್ಟು ಹೆಚ್ಚುವರಿ ನಷ್ಟ ಉಂಟಾಗುತ್ತಿದೆ. ಇಂಧನದ ಬೆಲೆ ಗಗನಕ್ಕೇರಿರುವುದರಿಂದ ದಿನನಿತ್ಯ ಬಸ್‌ಗಳಿಗೆ ಡೀಸೆಲ್ ಪೂರೈಸಲು ಮತ್ತು ಹಣ ಹೊಂದಿಸಲು ಸಾರಿಗೆ ನಿಗಮಗಳ ಅಧಿಕಾರಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಕಳೆದ ಮೂರು ವರ್ಷಗಳಿಂದ ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳು ಸತತ ನಷ್ಟ ಅನುಭವಿಸುತ್ತಿವೆ. 2025-26 ನೇ ಸಾಲಿನಲ್ಲಿ ವೆಚ್ಚವು ಆದಾಯಕ್ಕಿಂತ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ.
2023-24 ನೇ ಸಾಲು:
ಆದಾಯ: 11,822.35 ಕೋಟಿ ರೂ.
ವೆಚ್ಚ: 13,177.35 ಕೋಟಿ ರೂ.
ಒಟ್ಟು ನಷ್ಟ: 1,354.48 ಕೋಟಿ ರೂ.
2024-25 ನೇ ಸಾಲು:
ಆದಾಯ: 13,753 ಕೋಟಿ ರೂ.
ವೆಚ್ಚ: 14,595 ಕೋಟಿ ರೂ.
ಒಟ್ಟು ನಷ್ಟ: 842 ಕೋಟಿ ರೂ.
2025-26 ನೇ ಸಾಲು:
ಆದಾಯ: 14,991 ಕೋಟಿ ರೂ.
ವೆಚ್ಚ: 16,519 ಕೋಟಿ ರೂ.
ಒಟ್ಟು ನಷ್ಟ: 1,527 ಕೋಟಿ ರೂ. ಎನ್ನಲಾಗಿದೆ.
ಬಸ್ ಟಿಕೆಟ್ ದರ ಹೆಚ್ಚಳದಿಂದಾಗಿ ಜನಸಾಮಾನ್ಯರಿಗೆ ಮತ್ತಷ್ಟು ಬಿಸಿ ತಟ್ಟಲಿದೆ. ನಾಳೆ ನಡೆಯಲಿರುವ ಸಚಿವ ಸಂಪುಟ ಸಭೆ ಬಳಿಕ ಬಸ್ ಟಿಕೆಟ್ ದರ ಏರಿಕೆ ಬಗ್ಗೆ ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ.

