HomeLatest Newsಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಕೊನೆಯ ಎಸೆತದಲ್ಲಿ ಆರ್‌ಸಿಬಿ ಪರ ಸಿಕ್ಸರ್ ಬಾರಿಸಿ ಆವೇಶ್ ಖಾನ್...

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಕೊನೆಯ ಎಸೆತದಲ್ಲಿ ಆರ್‌ಸಿಬಿ ಪರ ಸಿಕ್ಸರ್ ಬಾರಿಸಿ ಆವೇಶ್ ಖಾನ್ ಸೊಕ್ಕು ಮುರಿದಿದ್ದ ಕೆಎಸ್ ಭರತ್

ಭಾರತೀಯ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿದ್ದ ಕೆ.ಎಸ್. ಭರತ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. 32 ವರ್ಷದ ಭರತ್ ಸಾಮಾಜಿಕ ಜಾಲತಾಣದಲ್ಲಿ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದು, ದೇಶವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕದ್ದು ಜೀವನದ ಅತ್ಯಂತ ದೊಡ್ಡ ಗೌರವ ಎಂದು ಉಲ್ಲೇಖಿಸಿ ತನ್ನ ಮೊದಲ ಐಪಿಎಲ್ ನಾಯಕ, ಮೊದಲ ಟೆಸ್ಟ್ ನಾಯಕ ರೋಹಿತ್ ಶರ್ಮಾ ಹಾಗೂ ಕೋಚ್ ರಾಹುಲ್ ದ್ರಾವಿಡ್‌ಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಆಂಧ್ರ ಪ್ರದೇಶದ ವಿಶಾಖಪಟ್ಟಣಂ ಮೂಲದ ಕೋನಾ ಶ್ರೀಕರ್ ಭರತ್ 2023ರಲ್ಲಿ ಟೀಂ ಇಂಡಿಯಾ ಪರ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಭಾರತ ತಂಡದ ಪರ ಒಟ್ಟು 7 ಟೆಸ್ಟ್ ಪಂದ್ಯಗಳಲ್ಲಿ ಆಡಿರುವ ಅವರು 221 ರನ್ ಗಳಿಸಿದ್ದರು. ವಿಕೆಟ್ ಕೀಪರ್ ಆಗಿಯೂ ಸೇವೆ ಸಲ್ಲಿಸಿದ್ದ ಭರತ್ 2023ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಕಣಕ್ಕಿಳಿದಿದ್ದ ಭಾರತ ತಂಡದಲ್ಲೂ ಸ್ಥಾನ ಪಡೆದಿದ್ದರು.

ದೇಶೀಯ ಕ್ರಿಕೆಟ್‌ನಲ್ಲಿ ಭರತ್ ಅತ್ಯಂತ ಯಶಸ್ವಿ ಆಟಗಾರರಲ್ಲಿ ಒಬ್ಬರಾಗಿದ್ದರು. 100ಕ್ಕೂ ಹೆಚ್ಚು ಪ್ರಥಮ ದರ್ಜೆ ಪಂದ್ಯಗಳಲ್ಲಿ 6,000ಕ್ಕೂ ಅಧಿಕ ರನ್ ಗಳಿಸಿರುವ ಅವರು, ರಣಜಿ ಟ್ರೋಫಿಯಲ್ಲಿ ತ್ರಿಶತಕ ಬಾರಿಸಿದ ಮೊದಲ ಭಾರತೀಯ ವಿಕೆಟ್ ಕೀಪರ್ ಎಂಬ ವಿಶೇಷ ದಾಖಲೆ ಹೊಂದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಿವೃತ್ತಿ ಘೋಷಣೆಯ ವೇಳೆ ಭರತ್ ತಮ್ಮ ಕುಟುಂಬ, ಬಿಸಿಸಿಐ, ಆಂಧ್ರ ಕ್ರಿಕೆಟ್ ಸಂಸ್ಥೆ ಹಾಗೂ ತಮ್ಮ ವೃತ್ತಿಜೀವನದಲ್ಲಿ ಬೆಂಬಲ ನೀಡಿದ ಕೋಚ್‌ಗಳು ಮತ್ತು ಸಹ ಆಟಗಾರರಿಗೆ ಕೃತಜ್ಞತೆ ಸಲ್ಲಿಸಿದರು. ಅಲ್ಲದೆ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ರಾಹುಲ್ ದ್ರಾವಿಡ್ ಅವರ ಬೆಂಬಲವನ್ನು ವಿಶೇಷವಾಗಿ ಸ್ಮರಿಸಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಅವಕಾಶಗಳು ಸಿಗದಿದ್ದರೂ, ದೇಶೀಯ ಕ್ರಿಕೆಟ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಕೆ.ಎಸ್. ಭರತ್ ಅವರ ನಿವೃತ್ತಿ ಭಾರತೀಯ ಕ್ರಿಕೆಟ್‌ನಲ್ಲಿ ಒಂದು ಅಧ್ಯಾಯದ ಅಂತ್ಯವಾಗಿದೆ.

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸಹ ಕೆ.ಎಸ್. ಭರತ್ ಹಲವು ತಂಡಗಳನ್ನು ಪ್ರತಿನಿಧಿಸಿದ್ದರು. ಅದರಲ್ಲೂ 2021ರ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದ ವೇಳೆ ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಿ ತಂಡಕ್ಕೆ ರೋಚಕ ಜಯ ತಂದುಕೊಟ್ಟ ಕ್ಷಣ ಅಭಿಮಾನಿಗಳ ಮನಸ್ಸಿನಲ್ಲಿ ಇಂದಿಗೂ ಅಚ್ಚಳಿಯದೆ ಉಳಿದಿದೆ.

ಆವೇಶ್ ಖಾನ್ ಎಸೆದ ಕೊನೆಯ ಓವರ್‌ನ ಮೂರು ಎಸೆತಗಳಲ್ಲಿ ಆರ್‌ಸಿಬಿಗೆ ಗೆಲ್ಲಲು 8 ರನ್‌ಗಳ ಅಗತ್ಯವಿತ್ತು. ಭರತ್ ಕೊನೆಯ ಓವರ್‌ನ ನಾಲ್ಕನೇ ಎಸೆತದಲ್ಲಿ ಯಾವುದೆ ರನ್ ಬಾರಿಸಲಿಲ್ಲ. ಈ ವೇಳೆ ಆವೇಶ್ ಖಾನ್ ವ್ಯಂಗ್ಯವಾಗಿ ನಕ್ಕಿದ್ದರು. ಬಳಿಕ ಐದನೇ ಎಸೆತಕ್ಕೆ ಎರಡು ರನ್ ಬಾರಿಸಿದ ಭರತ್ ಆವೇಶ್ ಖಾನ್ ವೈಡ್ ಬಾಲ್ ಹಾಕಿದ ಕಾರಣ ಕೊನೆಯ ಎಸೆತದಲ್ಲಿ ಐದು ರನ್ ಬಾರಿಸಬೇಕಾದ ಅಗತ್ಯವಿತ್ತು. ಸರಿಯಾಗಿ ಭರತ್ ಆ ಎಸೆತಕ್ಕೆ ಭರ್ಜರಿ ಸಿಕ್ಸರ್ ಬಾರಿಸಿ ನಕ್ಕಿದ್ದ ಆವೇಶ್ ಖಾನ್ ಸೊಕ್ಕು ಮುರಿದಿದ್ದರು.

ಹೀಗೆ ಈ ಒಂದು ಇನ್ನಿಂಗ್ಸ್‌ನಿಂದ ದೇಶವ್ಯಾಪಿ ಭರ್ಜರಿ ಹೆಸರು ಮಾಡಿದ್ದ ಕೆಎಸ್ ಭರತ್ ಕೇವಲ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮಾತ್ರ ನಿವೃತ್ತಿ ಘೋಷಿಸಿದ್ದು, ಮುಂದಿನ ದಿನಗಳಲ್ಲಿ ಐಪಿಎಲ್‌ನಲ್ಲಿ ಅವಕಾಶ ಪಡೆದು ಮತ್ತೆ ಅಬ್ಬರಿಸುತ್ತಾರಾ ಎಂಬುದನ್ನು ಕಾದು ನೋಡಬೇಕು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular