ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಡೆಸಿದ ಪಶುವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದು, ಈ ವೇಳೆ ಹಲವು ಸ್ಫೋಟಕ ಮಾಹಿತಿಗಳು ಬಯಲಾಗಿವೆ.
ಸಿಐಡಿ ಅಧಿಕಾರಿಗಳಿಂದ ಬಂಧಿಸಲ್ಪಟ್ಟಿರುವ ಪ್ರಮುಖ ಆರೋಪಿ ಬಸವರಾಜ್ ಕನ್ನಾಳೆ, ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ತಾನು ಅಕ್ರಮ ನಡೆಸಿರುವುದು ನಿಜ ಎಂದು ತನಿಖಾಧಿಕಾರಿಗಳ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ಅಲ್ಲದೇ ಹತ್ತು ಅಭ್ಯರ್ಥಿಗಳಿಂದ ಹಣ ಪಡೆದು ನೇಮಕಾತಿ ಮಾಡಿಸಿದ್ದಾಗಿ ಬಾಯ್ಬಿಟ್ಟಿದ್ದಾನೆ. ಅಲ್ಲದೇ ವಿಚಾರಣೆ ವೇಳೆ ಕೆಲ ಅಭ್ಯರ್ಥಿಗಳು ಒಂದು ಹುದ್ದೆಗೆ 40 ಲಕ್ಷ ಡೀಲ್ ಮಾಡಲಾಗುತ್ತಿತ್ತು. ಹಾಗೂ ಪರೀಕ್ಷೆಗೂ ಮುನ್ನವೇ ಪ್ರಶ್ನೆ ಪತ್ರಿಕೆ ಅಭ್ಯರ್ಥಿಗಳ ಕೈಸೇರುತ್ತಿದ್ದ ಬಗ್ಗೆ, ಕನ್ನಾಳೆ ಮನೆಯಲ್ಲಿಯೇ ತರಬೇತಿಯನ್ನೂ ನೀಡಿದ್ದಾಗಿ ತಿಳಿಸಿದ್ದಾರೆ.
ಹಗರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ಪಶುವೈದ್ಯಾಧಿಕಾರಿಗಳಾಗಿ ಆಯ್ಕೆಯಾದ ಟಾಪರ್ಸ್ ಪಟ್ಟಿಯನ್ನು ನೋಡಿ ಶಾಕ್ ಆಗಿದ್ದಾರೆ. ಪರೀಕ್ಷೆಯು ಅತ್ಯಂತ ಕಠಿಣವಾಗಿತ್ತು. ಆದಾಗ್ಯೂ, ಪದವಿ ಪರೀಕ್ಷೆ ಡಿಗ್ರಿಯಲ್ಲಿ ಕಳಪೆ ಅಂಕಗಳನ್ನು ಗಳಿಸಿ ಐದು ಬಾರಿ ಫೇಲ್ ಆಗಿದ್ದವರೂ ಕೆಪಿಎಸ್ ಸಿ ಪರೀಕ್ಷೆಯಲ್ಲಿ ಟಾಪರ್ ಆಗಿರುವುದನ್ನು ಕಂಡು ದಂಗಾಗಿದ್ದಾರೆ.
ಡಿಗ್ರಿಯಲ್ಲಿ ಹಲವು ಬಾರಿ ಪಾಸಾಗಲು ಪ್ರಯತ್ನಿಸಿ ಕೊನೆಗೆ ಪಾಸಾಗಿದ್ದವರು ಪಶುವೈದ್ಯಾಧಿಕಾರಿಗಳ ನೇಮಕಾತಿ ಪಟ್ಟಿಯಲ್ಲಿ ಟಾಪರ್ಸ್ ಪಟ್ಟಿಯಲ್ಲಿರುವುದು ಕಂಡುಬಂದಿದೆ. ಓಎಂಆರ್ ಶೀಟ್‌ಗಳಲ್ಲಿ ತಿದ್ದುಪಡಿ, ನಕಲಿ ಜಾತಿ ಪ್ರಮಾಣಪತ್ರಗಳ ಸೃಷ್ಟಿ ಮತ್ತು ಹಣದ ವಿನಿಮಯದ ಮೂಲಕ ಅಕ್ರಮ ನೇಮಕಾತಿ ನಡೆದಿರುವುದನ್ನು ಸಿಐಡಿ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಪ್ರತಿ ಹುದ್ದೆಗೆ 80 ಲಕ್ಷದಿಂದ 1 ಕೋಟಿ ರೂಪಾಯಿ ವರೆಗೂ ಹಣದ ವ್ಯವಹಾರ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಬಿಎಸ್ ಸಿ ವೆಟನರಿ ಸೈನ್ಸ್ ಮತ್ತು ಅನಿಮಲ್ ಹಸ್ಬೆಂಡರಿ ಪದವಿ ಪರೀಕ್ಷೆಯಲ್ಲಿಯೇ ಕೆಲವರು ಮೊದಲ ಬಾರಿ ಪಾಸಾಗಿಲ್ಲ. ಕೆಲವರು ಎರಡು ಬಾರಿ ಪರೀಕ್ಷೆ ಬರೆದು ಪಾಸಾಗಿದ್ದರೆ, ಓರ್ವ ಅಭ್ಯರ್ಥಿ ಐದು ಬಾರಿ ಪರೀಕ್ಷೆ ಬರೆದು ಐದನೇ ಬಾರಿ ಪಾಸ್ ಆಗಿದ್ದಾನೆ. ಇವರೆಲ್ಲರೂ ಕೆಪಿಎಸ್‌ಸಿಯಲ್ಲಿ ಟಾಪರ್ ಆಗಿರುವುದು ಅಚ್ಚರಿಗೆ ಕಾರಣವಾಗಿದೆ.
ಈ ಹಗರಣದಲ್ಲಿ ಕೆಪಿಎಸ್‌ಸಿ ಅಧಿಕಾರಿಗಳು, ಅಧ್ಯಕ್ಷರು, ಸದಸ್ಯರು ಹಾಗೂ ಪರೀಕ್ಷಾ ಕಸ್ಟೋಡಿಯನ್‌ಗಳು ಭಾಗಿಯಾಗಿರುವುದು ತನಿಖೆಯಿಂದ ತಿಳಿದುಬಂದಿದೆ. ಬಸವರಾಜ್ ಕನ್ನಾಳೆಯ ಮನೆಯಲ್ಲಿ ದೊರೆತ ಡೈರಿಯು ಈ ಅಕ್ರಮಗಳ ಬಗ್ಗೆ ಮತ್ತಷ್ಟು ಸುಳಿವುಗಳನ್ನು ನೀಡಿದೆ. ಈ ಹಗರಣದಲ್ಲಿ ಭಾಗಿಯಾದ 29 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಮತ್ತೊಂದೆಡೆ, ಅರ್ಹ ಅಭ್ಯರ್ಥಿಗಳಿಗೆ ಆಗಿರುವ ಅನ್ಯಾಯದ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ.
ಪದವಿ ಪರೀಕ್ಷೆ ಪಾಸಾಗಲು ಪರದಾಡಿದವರು ಕೆಪಿಎಸ್‌ಸಿಯಲ್ಲಿ ಟಾಪರ್ ಎಂದು ನಕಲಿ ದಾಖಲೆ ಸೃಷ್ಟಿಸಿ ಆಯ್ಕೆಯಾಗಿರುವ ಅಭ್ಯರ್ಥಿಗಳು ಪಶುವೈದ್ಯಾಧಿಕಾರಿಗಳಾಗಿ ಕಾರ್ಯನಿರ್ವಹಿಸಲು ಹೇಗೆ ಸಾಧ್ಯ? ಇಂತವರು ಪಶುವೈದ್ಯಾಧಿಕಾರಿಗಳಾದರೆ ಪಶುಳಿಗೆ ಏನು ಔಷಧಿಗಳನ್ನು ನೀಡುತ್ತಾರೆ? ಅಂತಹ ಹುದ್ದೆಯನ್ನ್ ಹೇಗೆ ನಿರ್ವಹಿಸುತ್ತಾರೆ ಎಂಬುದು ಅಚ್ಚರಿ. ಅರ್ಹತೆ ಇಲ್ಲದವರು ಟಾಪರ್ ಗಳಾಗಿ ಆಯ್ಕೆಯಾಗಿರುವುದನ್ನು ನೋಡಿದರೆ ಸ್ವತಃ ಕೆಪಿಎಸ್‌ಸಿ ಅಧಿಕಾರಿಗಳೇ ಭಾಗಿಯಾಗಿರುವ ಅನುಮಾನ ವ್ಯಕ್ತವಾಗಿದೆ.

