HomeKarnatakaನನ್ನನ್ನು ನಾಡಿನ ದೊರೆ ಎನ್ನಬೇಡಿ, ಪ್ರಜಾಸೇವಕ ಎನ್ನಿ; ಅದಕ್ಕಿಂತ ದೊಡ್ಡ ಸಂತೋಷ ಬೇರೆ ಇಲ್ಲ ಎಂದ...

ನನ್ನನ್ನು ನಾಡಿನ ದೊರೆ ಎನ್ನಬೇಡಿ, ಪ್ರಜಾಸೇವಕ ಎನ್ನಿ; ಅದಕ್ಕಿಂತ ದೊಡ್ಡ ಸಂತೋಷ ಬೇರೆ ಇಲ್ಲ ಎಂದ ಸಿಎಂ ಡಿ.ಕೆ.ಶಿವಕುಮಾರ್

ಕೂಡ್ಲಗಿ: ಸರ್ಕಾರದ ಯಶಸ್ಸು ಜಾಹಿರಾತಿನಲ್ಲಿ ಇರುವುದಿಲ್ಲ. ಜನರ ಮುಖದಲ್ಲಿ ನಗು ಮೂಡಿದೆ ಎಂಬುದೇ ಯಶಸ್ಸಿನ ಮಾನದಂಡ ಎಂದು ಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ವಿಜಯನಗರ ಜಿಲ್ಲೆಯ ಕೂಡ್ಲಗಿಯಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಪ್ರಜಾಸೇವೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಜನ ಸೇವೆಯೇ ಜನಾರ್ಧನ ಸೇವೆ ಎಂದು ಭಾವಿಸಿದ್ದೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿಮ್ಮ ಸೇವೆ ಮಾಡಲು 136 ಸೀಟು ನೀಡಿ ರಾಜ್ಯವನ್ನು ಹೊಸ ದಿಕ್ಕಿನಲ್ಲಿ ಮುನ್ನಡೆಸಲು ಅವಕಾಶ ಕೊಟ್ಟಿದ್ದೀರಿ. ಇದು ಕೇವಲ ಸರ್ಕಾರ ಕಾರ್ಯಕ್ರಮ ಅಲ್ಲ. ಜನ ಸರ್ಕಾರದ ಬಳಿ ಹೋಗುವ ಕಾಲ ಹೋಗಿ, ಸರ್ಕಾರ ಜನರ ಬಳಿಗೆ ಹೋಗುವ ಕಾಲ ಬಂದಿದೆ. ಜನರ ಮನೆ ಬಾಗಿಲಿಗೆ ಆಡಳಿತ ತಲುಪಿಸಲು ಈ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿಧಾನಸೌಧ, ಜಿಲ್ಲಾ ಹಾಗೂ ತಾಲೂಕು, ಸರ್ಕಾರಿ ಕಚೇರಿಯಲ್ಲಿ ಕೂತು ಅಧಿಕಾರಿಗಳು ಕೆಲಸ ಮಾಡುವುದಲ್ಲ. ಜನರ ಕಷ್ಟ ಕೇಳಿ, ಅವರ ಸಮಸ್ಯೆ ಬಗೆಹರಿಸಲು ಹೊಸ ಇಲಾಖೆ ಆರಂಭೀಸಿದ್ದೇವೆ ಎಂದರು.

ನನ್ನನ್ನು ಪ್ರಜಾಸೇವಕ ಎಂದು ಕರೆಯಿರಿ

ಸಂಸದ ಜಿ ಸಿ ಚಂದ್ರಶೇಖರ ಅವರು ನನ್ನನ್ನು ನಾಡಿನ ದೊರೆ ಎಂದು ಸಂಬೋಧನೆ ಮಾಡಿದರು. ಆದರೆ, ನಾನು ನಾಡಿನ ದೊರೆ ಅಲ್ಲ, ಪ್ರಜಾಸೇವಕ ಎಂದು ಕರೆಯಬೇಕು. ನನಗೆ ಅದಕ್ಕಿಂತ ದೊಡ್ಡ ಸಂತೋಷ ಬೇರೆ ಇಲ್ಲ ಎಂದು ಮನವಿ ಮಾಡಿದರು.

ದೊರೆಗಳ ಕಾಲ ಹೋಗಿ ಪ್ರಜಾಪ್ರಭುತ್ವ ಬಂದಿದೆ. ಪ್ರಜೆಗಳ ಬದುಕಿನಲ್ಲಿ ಬದಲಾವನೆ ತರಲು ಇಲಾಖೆ ತರಲಾಗಿದೆ. ಇದು ಕೇವಲ ಇಲಾಖೆ ಮಾತ್ರವಲ್ಲ. ಜನರ ಸಮಸ್ಯೆ ಆಲಿಸಿ, ಸ್ಪಂದಿಸಿ ಪರಿಹಾರ ನೀಡಲು ಈ ತೀರ್ಮಾನ ಮಾಡಿದ್ದೇವೆ. ಎಲ್ಲರೂ ಡಿಸಿ ಕಚೇರಿ, ಮಂತ್ರಿ ಕಚೇರಿ, ವಿಧಾನಸೌಧಕ್ಕೆ ಬರಲು ಆಗುವುದಿಲ್ಲ. ನಮ್ಮ ಅವಧಿಯಲ್ಲಿ ಈ ಪರಿಸ್ಥಿತಿ ಬದಲಾಗಿ, ಅಧಿಕಾರಿಗಳು ಜನರನ್ನು ಹುಡುಕಿಕೊಂಡು ಹೋಗಬೇಕು ಎಂದು ಕರೆ ನೀಡಿದರು.

ಕೂಡ್ಲಿಗಿಯಲ್ಲಿರುವ ಮಹಾತ್ಮ ಗಾಂಧೀಜಿ ಅವರ ಚಿತಾಭಸ್ಮ ಇರುವ ಜಾಗಕ್ಕೆ ನಾವು ಹೋಗಿ ನಮಿಸಿದ್ದೇವೆ. ಅವರ ಚಿಂತನೆಯ ಹಾದಿಯಲ್ಲಿ ಮುನ್ನಡೆಯಲು ಶಕ್ತಿ ನೀಡುವಂತೆ ಮಹಾತ್ಮನಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇವೆ. ಆಡಳಿತ ಸಮಾಜದ ಕೊನೆ ವ್ಯಕ್ತಿಯನ್ನು ತಲುಪಬೇಕು ಎಂಬುದು ಗಾಂಧೀಜಿ ಅವರ ಸಂದೇಶ. ನಾವು ಬಸವಣ್ಣನ ನಾಡಿನಲ್ಲಿ ಕೆಲಸ ಮಾಡುತ್ತಿದ್ದು, ನಿನ್ನೆ ಅವರ ಐಕ್ಯ ಸ್ಥಳಕ್ಕೆ ಹೋಗಿ ಪೂಜೆ ಸಲ್ಲಿಸಿ, ಬರ ಪ್ರದೇಶದ ರೈತರ ಸಮಸ್ಯೆ ನೋಡಿ ಇಲ್ಲಿಗೆ ಬದಿರುವೆ ಎಂದು ತಿಳಿಸಿದರು.

ನಾನು ಕೇವಲ ಹೆಲಿಕಾಪ್ಟರ್ ನಲ್ಲಿ ಮಾತ್ರ ಬರ ವೀಕ್ಷಣೆ ಮಾಡಿಲ್ಲ. ಪ್ರಯಾಣ ಮಾಡುವಾಗ ಈ ಭಾಗದ ಜಮೀನುಗಳನ್ನು ನೋಡಿದೆ. ಆದರೆ ವಿರೋಧ ಪಕ್ಷದವರು ಅದನ್ನು ಟೀಕಿಸುತ್ತಾರೆ. ಟೀಕೆಗಳು ಸಾಯುತ್ತವೆ ಕೆಲಸಗಳು ಉಳಿಯುತ್ತವೆ ಎಂಬುದು ನಮ್ಮ ನಂಬಿಕೆ ಎಂದು ತಿರುಗೇಟು ನೀಡಿದರು.

ಪ್ರತಿ ಜಿಲ್ಲಾ ಮಂತ್ರಿ ತಮ್ಮ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಪ್ರತಿ ತಿಂಗಳ ಮೊದಲ ಹಾಗೂ ಮೂರನೇ ಶನಿವಾರ ಭೇಟಿ ನೀಡಬೇಕು. ಜನರ ಸಮಸ್ಯೆ ಆಲಿಸಬೇಕು ಎಂದು ಸೂಚಿಸಿದ್ದೇನೆ. ನಂತರ ಎರಡನೇ ಹಂತದಲ್ಲಿ ಹೋಬಳಿ ಮಟ್ಟದಲ್ಲಿ ಮಾಡಬೇಕು. ಶಾಸಕರು ಪಂಚಾಯ್ತಿ ಮಟ್ಟದಲ್ಲಿ ಹೋಗಬೇಕು. ಶಾಸಕರು ಹೋಗದಿದ್ದರೆ ಅಧಿಕಾರಿಗಳು ಜನರ ಬಳಿ ಹೋಗಬೇಕು, ಅಧಿಕಾರಿಗಳು ಜನರ ಮಧ್ಯೆ ಇರಬೇಕು. ಜನರ ಕಷ್ಟಕ್ಕೆ ಸ್ಪಂದಿಸಬೇಕು ಎಂದು ಸೂಚನೆ ನೀಡಿದರು.

ಎಲ್ಲಾ ಸಮಸ್ಯೆ ಬಗೆಹರಿಸಲು ಆಗದೇ ಇದ್ದರೂ ಕಾನೂನು ಚೌಕಟ್ಟಿನಲ್ಲಿ ಆದಷ್ಟು ಪರಿಹಾರ ನೀಡಲಾಗುವುದು. ಪಿಂಚಣಿ, ಭೂಮಿ ಗ್ಯಾರಂಟಿ, ಖಾತೆ ಸಮಸ್ಯೆ, ನಿವೇಶನ ಹಾಗೂ ಮನೆ ರಹಿತರು, ಸರ್ಕಾರಿ ಯೋಜನೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಈ ಇಲಾಖೆ ಮೂಲಕ ಬಗೆಹರಿಸಲಾಗುವುದು ಎಂದರು.

ಸಮಸ್ಯೆ ಬಗೆಹರಿಸಲು ಕಾನೂನು ಹೋರಾಟಕ್ಕೆ ವಕೀಲರ ಸೇವೆ ಅವಕಾಶ:

ನಿಮ್ಮ ಪಂಚಾಯಿತಿಗಳಲ್ಲಿ ನಿಮಗೆ ಅರ್ಜಿ ನೀಡುತ್ತಾರೆ. ನೀವು ಅವುಗಳ ಮೂಲಕ ನಿಮ್ಮ ಮನವಿ ಸಲ್ಲಿಸಬೇಕು. ಸುಮಾರು 50 ಸಾವಿರ ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನೀವು ಅರ್ಜಿ ಕೊಟ್ಟ ನಂತರ ನಾವು ಅದನ್ನು ಮರೆಯುವುದಿಲ್ಲ. ಅದಕ್ಕೆ ಪರಿಹಾರ ಸಿಗುವವರೆಗೆ ಸರ್ಕಾರ ಕೆಲಸ ಮಾಡಲಿದೆ. ಪರಿಹಾರ ಸಿಗದಿದ್ದರೆ ಯಾವ ಕಾರಣಕ್ಕೆ ಆಗುವುದಿಲ್ಲ ಎಂದು ವಿವರಣೆ ನೀಡಲಾಗುವುದು. ಕಾನೂನು ಮೂಲಕ ಬಗೆಹರಿಸಬೇಕಾದ ಸಂದರ್ಭದಲ್ಲಿ ಕೋರ್ಟ್ ನಲ್ಲಿ ನಿಮ್ಮ ಪರ ವಾದ ಮಂಡಿಸಲು ವಕೀಲರ ಸೇವೆ ಒದಗಿಸಲಾಗುವುದು. ಬಡವರಿಗೆ ವಕೀಲರ ಸೇವೆ ನೀಡಲು ಅವಕಾಶವಿದೆ. ಅದನ್ನು ಬಳಸಿಕೊಳ್ಳಿ ಎಂದು ಕರೆ ನೀಡಿದರು.

ಇಡೀ ರಾಜ್ಯಕ್ಕೆ ವಿಜಯ ಸಿಗಬೇಕು ಎಂದು ಈ ಕಾರ್ಯಕ್ರಮವನ್ನು ಪವಿತ್ರವಾದ ಕೃಷ್ಣದೇವರಾಯನ ಭೂಮಿ ವಿಜಯನಗರ ಆಯ್ಕೆ ಮಾಡಿರುವೆ. ಇಲ್ಲಿ ಎಷ್ಟು ಜನ ಬಂದಿದ್ದಾರೆ, ಎಷ್ಟು ಸಮಸ್ಯೆ ಅರ್ಜಿ ಕೊಟ್ಟಿದ್ದಾರೆ ಎಂಬುದಕ್ಕಿಂತ, ಎಷ್ಟು ಜನರ ಸಮಸ್ಯೆ ಬಗೆಹರಿದಿದೆ ಎಂಬುದು ಈ ಕಾರ್ಯಕ್ರಮದ ಯಶಸ್ಸನ್ನು ತಿಳಿಸುತ್ತದೆ ಎಂದರು.

ಅಂಬೇಡ್ಕರ್ ಅವರ ಸಮಾನತೆಯನ್ನು ಪ್ರತಿ ಹೆಜ್ಜೆಯಲ್ಲಿ ಪಾಲಿಸುತ್ತಿದ್ದೇವೆ. ಚಳುವಳಿ ರೂಪದಲ್ಲಿ ನಿಮ್ಮ ಸೇವೆ ಮಾಡುತ್ತಿದ್ದೇವೆ. ನಿಮ್ಮ ಸೇವಕರಾಗಿ ಕೆಲಸ ಮಾಡಿ ನಿಮಗೆ ಅಧಿಕಾರದ ಮಾಲೀಕತ್ವ ನೀಡಲು ನಾವು ಮುಂದಾಗಿದ್ದೇವೆ ಎಂದರು.

ಪ್ರಧಾನಿಗಳಿಂದ ಹಿಡಿದು ಇಡೀ ದೇಶ ನಮ್ಮ ಗ್ಯಾರಂಟಿ ಟೀಕೆ ಮಾಡಿದವು. ಇದನ್ನು ಸಾಧ್ಯವಾಗಿಸಿದ್ದು ಕಾಂಗ್ರೆಸ್ ಸರ್ಕಾರ. ಈಗ ಆ ಟೀಕೆಗಳು ಏನಾದವು? ಗ್ಯಾರಂಟಿ ಯೋಜನೆಗಳಂತೆ ಈ ಪ್ರಜಾಸೇವೆ ಕೂಡ ಕರ್ನಾಟಕ ಮಾದರಿಯಾಗಿ ಹೊರಹೊಮ್ಮಲಿದೆ. ಬಾಗಿಲಿಗೆ ಬಂದಿದೆ ಸರ್ಕಾರ, ಸೇವೆಗೆ ಇರಲಿ ಸಹಕಾರ ಎಂಬ ಘೋಷ ವಾಕ್ಯದೊಂದಿಗೆ ಈ ಅಭಿಯಾನ ಆರಂಭವಾಗಿದೆ ಎಂದು ತಿಳಿಸಿದರು.

ಜನರ ಬದುಕಿನಲ್ಲಿ ಬದಲಾವಣೆ ತರುವ ಕೆಲಸ ಮಾಡಿ. ಇಲ್ಲಿ ಪಕ್ಷ, ಜಾತಿ ಧರ್ಮದ ಭೇದವಿಲ್ಲ. ಜನ ಸೇವೆಯೇ ಇಲ್ಲಿ ಪ್ರಮುಖ ಧ್ಯೇಯ. ಸರ್ಕಾರದ ಸೇವೆ ನಿಮ್ಮ ಹಕ್ಕು. ಅದನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸುವುದು ನಮ್ಮ ಆಲೋಚನೆ ಎಂದು ಭರವಸೆ ನೀಡಿದರು.

ಭೂಮಿ ಗ್ಯಾರಂಟಿ ನಮ್ಮ ಆರನೇ ಗ್ಯಾರಂಟಿ. ಪ್ರತಿಯೊಬ್ಬರ ಆಸ್ತಿ ಇ ಖಾತೆ ಮಾಡಿ, ಅವರ ಮನೆಗೆ ತಲುಪಿಸಬೇಕು. ಕಂದಾಯ ಇಲಾಖೆ ಮೂಲಕ ವಿಜಯನಗರದಲ್ಲಿ ಈ ತಾಲ್ಲೂಕಿನಲ್ಲಿ 25,276 ಜನರಿಗೆ ಹಕ್ಕುಪತ್ರ ನೀಡಿದ್ದೇವೆ. ಇತರರ ಜಮೀನು ಅಳತೆ ಮಾಡಿ, ಅವರ ಆಸ್ತಿ ಹಾಗೂ ಮಾಲೀಕರ ಫೋಟೋ ಜೊತೆಗೆ ಪೋಡಿ ಮಾಡಲು ಸರ್ಕಾರ ಮುಂದಾಗಿದೆ. ಆ ಮೂಲಕ ಜನರ ಆಸ್ತಿಗೆ ಗ್ಯಾರಂಟಿ ನೀಡಬೇಕು ಎಂದು ತಿಳಿಸಿದರು.

ಗ್ರಾಮಗಳ ಪ್ರತಿಭೆಗಳಿಗೆ ಉತ್ತೇಜನ ನೀಡಲು ಪ್ರತಿ ಪಂಚಾಯಿತಿ ಮಟ್ಟದಲ್ಲಿ ಭಾರತದ ಜೋಡೋ ಸಂಘ ರಚಿಸಲಾಗುತ್ತಿದೆ. ಹಳ್ಳಿಯಲ್ಲಿ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗೆ ಉತ್ತೇಜನ ನೀಡಲು, ಹೊಸ ನಾಯಕರನ್ನು ಬೆಳೆಸಲು ಸರ್ಕಾರ ತೀರ್ಮಾನಿಸಿದೆ ಎಂದರು.

ಇದರ ಜೊತೆಗೆ ಪಂಚಾಯ್ತಿ ಮಟ್ಟದ ಗ್ಯಾರಂಟಿ ಸಮಿತಿ ರಚನೆಗೆ ಮಾಡಲಾಗುತ್ತಿದೆ. ಆ ಮೂಲಕ ಸರ್ಕಾರದ ಯೋಜನೆ ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಮಾಡಲು, ಯೋಜನೆ ದುರುಪಯೋಗ ತಡೆಯಲು ಈ ತೀರ್ಮಾನ ಮಾಡಲಾಗಿದೆ ಎಂದು ಹೇಳಿದರು.

ಈಗಾಗಲೇ 102 ತಾಲೂಕುಗಳನ್ನು ಬರ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದ್ದೇವೆ. ನೀವು ಚಿಂತೆ ಮಾಡುವುದು ಬೇಡ, ಕೆಲವೇ ದಿನಗಳಲ್ಲಿ ಎರಡನೇ ಪಟ್ಟಿ ಮೂಲಕ 50 ಕ್ಕೂ ಹೆಚ್ಚು ತಾಲೂಕುಗಳನ್ನು ಬರ ಪ್ರದೇಶ ಎಂದು ಘೋಷಣೆ ಮಾಡಲಾಗುವುದು. ನಾವು ಕೇಂದ್ರದ ಮಾರ್ಗಸೂಚಿ ಅನುಸಾರ ಬರ ಘೋಷಣೆ ಮಾಡಬೇಕು. ತಾಳ್ಮೆಯಿಂದ ಇರಿ, ಈ ತಿಂಗಳ ಒಳಗಾಗಿ ಬರ ಪೀಡಿತ ಎಲ್ಲಾ ತಾಲೂಕು ಘೋಷಣೆ ಮಾಡಿ, ನಿಮಗೆ ಶಕ್ತಿ ತುಂಬುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular