ಕೊಪ್ಪಳ: ಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಾಗಿದ್ದು, ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಕಾಂಗ್ರೆಸ್ ಶಾಸಕರು ಸಿಡಿದೆದ್ದಿದ್ದಾರೆ. ಸಚಿವಾಕಾಂಕ್ಷಿಗಳ ಬೆಂಬಲಿಗರಿಂದ ಜಿಲ್ಲೆ ಜಿಲ್ಲೆಗಳಲ್ಲಿ ಪ್ರತಿಭಟನೆ, ತಾಲೂಕು ಬಂದ್ ಹೋರಾಟ ಮುಂದುವರೆದಿದೆ. ಒಂದೆಡೆ ಶಾಸಕರ ರಾಜೀನಾಮೆ ನಡುವೆ ಜಿಲ್ಲಾಧ್ಯಕ್ಷರೂ ರಾಜೀನಾಮೆ ನೀಡುತ್ತಿದ್ದಾರೆ.
ಈ ನಡುವೆ ಶಾಸಕ ರಾಘವೇಂದ್ರ ಹಿಟ್ನಾಳ್ ಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ಅಸಮಾಧಾನ ಗೊಂಡಿರುವ ಕೊಪ್ಪಳ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಗೊಂಡಬಾಳ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಕೊಪ್ಪಳ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಗೊಂಡಬಾಳ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಘವೇಂದ್ರ ಹಿಟ್ನಾಳ್ ಅವರ ಬೆಂಬಲಿತರಾದ ಜ್ಯೋತಿ ಗೊಂಡಬಾಳ್, ತಮ್ಮ ರಾಜೀನಾಮೆ ಪತ್ರವನ್ನು ಕೊಪ್ಪಳ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಅಮರೇಗೌಡ ಬಯ್ಯಪುರಾ ಅವರಿಗೆ ಸಲ್ಲಿಸಿದ್ದಾರೆ.
ಕಳೆದ 75 ವರ್ಷಗಳಿಂದಲೂ ಕೊಪ್ಪಳ ಜಿಲ್ಲಾ ಕೇಂದ್ರಕ್ಕೆ ಸಚಿವ ಸ್ಥಾನವೇ ಸಿಕ್ಕಿಲ್ಲ ಎಂಬ ಆಕ್ರೋಶವನ್ನು ಅವರು ವ್ಯಕ್ತಪಡಿಸಿದ್ದಾರೆ. ಮೂರು ಬಾರಿ ಗೆಲುವು ಸಾಧಿಸಿರುವ ರಾಘವೇಂದ್ರ ಹಿಟ್ನಾಳ್ ಅವರಿಗೆ ಸಚಿವ ಸ್ಥಾನ ನೀಡದಿರುವುದು ತೀವ್ರ ಬೇಸರ ತಂದಿದೆ ಎಂದು ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಒಟ್ಟಾರೆ ಸಚಿವ ಸ್ಥಾನ ಸಿಗದಿದ್ದಕ್ಕೆ ನಿರಾಸೆಗೊಂಡಿರುವ ಶಾಸಕರ ಅಸಮಾಧಾನ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಜಿಲ್ಲೆ ಜಿಲ್ಲೆಗಳಲ್ಲಿಯೂ ಬೆಂಬಲಿಗರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇದು ಎಲ್ಲಿಗೆ ಹೋಗಿ ನಿಲ್ಲಲಿದೆ ಎಂಬುದನ್ನು ಕಾದುನೋಡಬೇಕು.

