HomeAgricultureಕೇಂದ್ರ ಬರ ಅಧ್ಯಯನ ತಂಡದ ಮುಂದೆ ರೈತರ ಅಳಲು

ಕೇಂದ್ರ ಬರ ಅಧ್ಯಯನ ತಂಡದ ಮುಂದೆ ರೈತರ ಅಳಲು

ಕೊಪ್ಪಳ: ರಾಜ್ಯದಲ್ಲಿ ತಲೆದೋರಿರುವ ತೀವ್ರ ಖಾರಿಫ್ ಬರ ಪರಿಸ್ಥಿತಿಯ ಅಧ್ಯಯನಕ್ಕಾಗಿ ಕೇಂದ್ರ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳ ತಂಡ(ಐಎಂಸಿಟಿ) ಅಕ್ಟೋಬರ್ 5 ರಂದು ಕೊಪ್ಪಳ ಜಿಲ್ಲೆಗೆ ಭೇಟಿ ನೀಡಿ, ಬೆಳೆ ಹಾನಿಯನ್ನು ವಿಸ್ತೃತವಾಗಿ ಪರಿಶೀಲಿಸಿತು.

ಬರ ಪರಿಸ್ಥಿತಿಯ ನೈಜ ಸ್ಥಿತಿಗತಿ ಪರಿಶೀಲನೆಗೆ ಆಗಮಿಸಿದ್ದ ಕೇಂದ್ರ ಬರ ಅಧ್ಯಯನ ತಂಡದ ಮುಂದೆ ರೈತರು ತಮ್ಮ ಸಂಕಷ್ಟಗಳನ್ನು ತೋಡಿಕೊಂಡರು. ಮಳೆಯಿಲ್ಲದೆ ಬೆಳೆಗಳು ಸಂಪೂರ್ಣ ನಾಶವಾಗಿದ್ದು, ತೀವ್ರ ಆರ್ಥಿಕ ಸಂಕಷ್ಟ ಎದುರಾಗಿದೆ ಎಂದು ಅಧಿಕಾರಿಗಳ ಎದುರು ರೈತರು ತಮ್ಮ ಅಳಲು ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದ ನಿರ್ದೇಶಕ ಡಾ. ಮನ್ ಸಿಂಗ್ ಅವರ ನೇತೃತ್ವದ, ಅಧೀನ ಕಾರ್ಯದರ್ಶಿ ಪಾರ್ಥ ಪಾಲ್ ಹಾಗೂ ರಾಕೇಶ್ ಕುಮಾರ್ ಅವರನ್ನೊಳಗೊಂಡ ಅಧಿಕಾರಿಗಳ ತಂಡವು ಜಿಲ್ಲೆಯ ವಿವಿಧ ಬರಪೀಡಿತ ಪ್ರದೇಶಗಳಿಗೆ ತೆರಳಿ ಪರಿಶೀಲನೆ ನಡೆಸಿತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಂಡವು ಜಿಲ್ಲೆಯ ಕನಕಗಿರಿ ತಾಲೂಕಿನ ಹುಲಿಹೈದರ್ ಹೋಬಳಿಯ ಹನುಮನಾಳ ಗ್ರಾಮಕ್ಕೆ ಭೇಟಿ ನೀಡಿ, ಮಳೆಯಿಲ್ಲದೆ ಹಾನಿಗೊಳಗಾದ ಬೆಳೆಗಳನ್ನು ಖುದ್ದು ವೀಕ್ಷಿಸಿತು. ಹನುಮನಾಳ ಗ್ರಾಮದ ಬಸವರಾಜ ತಂದೆ ಲಿಂಗನಗೌಡ ಅವರ ಹೊಲದಲ್ಲಿ ಹಾನಿಗೊಳಗಾದ ತೊಗರಿ ಬೆಳೆ ಮತ್ತು ರೈತ ಮೂಖಪ್ಪ ತಂದೆ ಕರಿಯಪ್ಪ ಅವರ ಜಮೀನಿನಲ್ಲಿ ನಷ್ಟವಾದ ಸಜ್ಜೆ ಬೆಳೆಯನ್ನು ಪರಿಶೀಲಿಸಿದ ಕೇಂದ್ರ ಬರ ಅಧ್ಯಯನ ತಂಡದ ಅಧಿಕಾರಿಗಳು, ಮಳೆ ಕೊರತೆ ಮತ್ತು ಇಳುವರಿ ಕುಸಿತದ ಬಗ್ಗೆ ರೈತರಿಂದ ನೇರವಾಗಿ ಮಾಹಿತಿ ಪಡೆದುಕೊಂಡರು.

ಇದೇ ವೇಳೆ ಕೊಪ್ಪಳ ಜಿಲ್ಲಾಧಿಕಾರಿ ಡಾ. ಸುರೇಶ್ ಬಿ. ಇಟ್ನಾಳ ಅವರು ಮಾತನಾಡಿ, ರೈತರು ಹೇಳಿದ ಪ್ರತಿಯೊಂದು ಸಮಸ್ಯೆ ಮತ್ತು ಬೇಡಿಕೆಗಳನ್ನು ಕನ್ನಡದಿಂದ ಇಂಗ್ಲಿಷ್ ಭಾಷೆಗೆ ಅನುವಾದಿಸಿ, ಕೇಂದ್ರ ಬರ ಅಧ್ಯಯನ ತಂಡಕ್ಕೆ ತಿಳಿಸಿಕೊಟ್ಟರು.

ಸಂಬಂಧಪಟ್ಟ ಅಧಿಕಾರಿಗಳು ಮಳೆ ಕೊರತೆ, ಬೆಳೆ ಹಾನಿಯ ಪ್ರಮಾಣ ಮತ್ತು ರೈತರು ಎದುರಿಸುತ್ತಿರುವ ಸಂಕಷ್ಟಗಳ ಕುರಿತು ಕೇಂದ್ರ ಬರ ಅಧ್ಯಯನ ತಂಡಕ್ಕೆ ವಾಸ್ತವ ಸ್ಥಿತಿ ಮನವರಿಕೆ ಮಾಡಿದರು.

ಬರ ಪರಿಸ್ಥಿತಿಯ ನೈಜ ಸ್ಥಿತಿಗತಿ ಪರಿಶೀಲನೆಗೆ ಆಗಮಿಸಿದ್ದ ಕೇಂದ್ರ ಬರ ಅಧ್ಯಯನ ತಂಡದ ಮುಂದೆ ರೈತರು ತಮ್ಮ ಸಂಕಷ್ಟಗಳನ್ನು ತೋಡಿಕೊಂಡರು. ಮಳೆಯಿಲ್ಲದೆ ಬೆಳೆಗಳು ಸಂಪೂರ್ಣ ನಾಶವಾಗಿದ್ದು, ತೀವ್ರ ಆರ್ಥಿಕ ಸಂಕಷ್ಟ ಎದುರಾಗಿದೆ ಎಂದು ಅಧಿಕಾರಿಗಳ ಎದುರು ರೈತರು ತಮ್ಮ ಅಳಲು ವ್ಯಕ್ತಪಡಿಸಿದರು. ಕಳೆದ ಹಲವು ತಿಂಗಳುಗಳಿಂದ ಮಳೆಯಿಲ್ಲದೆ ತೊಗರಿ, ಹತ್ತಿ, ಭತ್ತ, ಜೋಳ ಮುಂತಾದ ಬೆಳೆಗಳು ಒಣಗಿ ಹೋಗಿವೆ. ಒಂದು ಎಕರೆಗೆ ಕನಿಷ್ಟ 40 ರಿಂದ 50 ಸಾವಿರ ರೂ.ಗಳು ಖರ್ಚು ಆಗಿವೆ. ಬೋರ್‌ ವೆಲ್‌ ಗಳಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಕುಸಿದಿದ್ದು, ಕೃಷಿಗೆ ಮಾತ್ರವಲ್ಲದೆ ಕುಡಿಯುವ ನೀರಿಗೂ ಸಮಸ್ಯೆ ಎದುರಾಗುತ್ತಿದೆ. ಜಾನುವಾರುಗಳಿಗೆ ಮೇವು ಮತ್ತು ನೀರಿನ ಕೊರತೆ ಉಂಟಾಗುತ್ತಿರುವುದರಿಂದ ತಕ್ಷಣವೇ ಗ್ರಾಮಗಳಲ್ಲಿ ಗೋಶಾಲೆಗಳನ್ನು ತೆರೆಯಬೇಕು ಮತ್ತು ಮೇವು ಬ್ಯಾಂಕ್ ಸ್ಥಾಪನೆ ಮಾಡಬೇಕು ಎಂದು ರೈತರು ಮನವಿ ಮಾಡಿದರು.

ಸಂಕಷ್ಟದಲ್ಲಿರುವ ಅನ್ನದಾತರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರವು ತ್ವರಿತವಾಗಿ ಸ್ಪಂದಿಸಬೇಕು. ಪ್ರತಿ ಎಕರೆಗೆ ಕನಿಷ್ಠ ರೂ. 50,000 ಪರಿಹಾರ ಒದಗಿಸಬೇಕು ಹಾಗೂ ರೈತರ ಎಲ್ಲಾ ಕೃಷಿ ಸಾಲಗಳನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು ಎಂದು ರೈತರು ಒತ್ತಾಯಿಸಿದರು.

ಬೆಳೆ ನಷ್ಟದಿಂದ ರೈತರು ಕಂಗಾಲಾಗಿದ್ದು, ಕೆಲವೆಡೆ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಬ್ಯಾಂಕುಗಳು ಮತ್ತು ಖಾಸಗಿ ಲೇವಾದೇವಿದಾರರು ಸಾಲ ವಸೂಲಾತಿಗೆ ಕಿರುಕುಳ ನೀಡಬಾರದು ಎಂದು ಅನ್ನದಾತರು ವಿನಂತಿಸಿದರು.

ವಿಬಿ ಜಿ ರಾಮ್ ಜಿ ಯೋಜನೆಯಡಿ ಕೆಲಸ ಮಾಡಿದ ಕೂಲಿ ಹಣವನ್ನು ಸಕಾಲಕ್ಕೆ ಪಾವತಿ ಮಾಡಬೇಕು ಎಂದು ರೈತರು ಕೇಂದ್ರ ಬರ ಅಧ್ಯಯನ ತಂಡದ ಮುಂದೆ ತಮ್ಮ ಬೇಡಿಕೆಗಳನ್ನು ಸಲ್ಲಿಸಿದರು.

ರೈತರ ಅಹವಾಲುಗಳನ್ನು ಆಲಿಸಿದ ಕೇಂದ್ರ ತಂಡದ ಅಧಿಕಾರಿಗಳು, ಪರಿಸ್ಥಿತಿಯ ಸಮಗ್ರ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿ ಅಗತ್ಯ ನೆರವು ದೊರಕಿಸಿಕೊಡಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

ಇದೇ ವೇಳೆ ಕೊಪ್ಪಳ ಜಿಲ್ಲಾಧಿಕಾರಿ ಡಾ. ಸುರೇಶ್ ಬಿ. ಇಟ್ನಾಳ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಜಿಲ್ಲೆಯ 7 ತಾಲೂಕುಗಳಲ್ಲಿ ಮಳೆಯ ಕೊರತೆಯಿಂದ ಉಂಟಾಗಿರುವ ಬರ ಪರಿಸ್ಥಿತಿ, ಬೆಳೆ ಹಾನಿ, ಕುಡಿಯುವ ನೀರು, ಉದ್ಯೋಗ ಹಾಗೂ ಕಾಮಗಾರಿಗಳ ಸ್ಥಿತಿಗತಿಗಳ ಬಗ್ಗೆ ಕೇಂದ್ರ ಬರ ಅಧ್ಯಯನ ತಂಡಕ್ಕೆ ಸಮಗ್ರವಾಗಿ ವಿವರಿಸಲಾಗಿದೆ. ಜಿಲ್ಲೆಯಲ್ಲಿ ಸುಮಾರು 3,02,000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಎನ್‌ಡಿಆರ್‌ಎಫ್ ನಿಯಮಾವಳಿಗಳ ಅನ್ವಯ ಜಿಲ್ಲೆಗೆ ಇನ್‌ಪುಟ್ ಸಬ್ಸಿಡಿ (ಬೆಳೆ ನಷ್ಟ ಪರಿಹಾರ) ರೂಪದಲ್ಲಿ ಅಗತ್ಯವಿರುವ ಅನುದಾನ ಮಾಹಿತಿ ನೀಡಲಾಗಿದೆ. ಕೇಂದ್ರ ತಂಡವು ಇನ್ನೂ ಕೆಲವು ಗ್ರಾಮಗಳನ್ನು ವೀಕ್ಷಿಸಿದ ನಂತರ, ರಾಜ್ಯ ಮಟ್ಟದಲ್ಲಿ ಚರ್ಚೆ ನಡೆಸಿ ಅಂತಿಮವಾಗಿ ಕೇಂದ್ರ ಸರ್ಕಾರಕ್ಕೆ ತನ್ನ ಸಮಗ್ರ ವರದಿಯನ್ನು ಸಲ್ಲಿಸಲಿದೆ ಎಂದರು.

ಜಾನುವಾರುಗಳಿಗೆ ಮೇವಿನ ನಿರ್ವಹಣೆ: ಜಿಲ್ಲೆಯಲ್ಲಿ ಸುಮಾರು 12.70 ಲಕ್ಷ ಕುರಿ-ಮೇಕೆಗಳು ಹಾಗೂ 2.39 ಲಕ್ಷ ದನಕರುಗಳಿದ್ದು, ಸದ್ಯಕ್ಕೆ ಲಭ್ಯವಿರುವ ಮೇವಿನ ಪ್ರಮಾಣವನ್ನು ವಿವರಿಸಲಾಗಿದೆ. ಮುನ್ನೆಚ್ಚರಿಕೆಯಾಗಿ ಗೋಶಾಲೆ ತೆರೆಯುವುದು, ಮೇವಿನ ಬ್ಯಾಂಕ್ ಸ್ಥಾಪಿಸುವುದು ಹಾಗೂ ಮೇವಿನ ಮಿನಿ ಕಿಟ್‌ಗಳ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ 15,838 ಮೇವಿನ ಮಿನಿ ಕಿಟ್‌ಗಳು ಮಂಜೂರಾಗಿದ್ದು, ಅವುಗಳ ಪೂರೈಕೆ ಆರಂಭವಾಗಿದೆ. ಇದರಿಂದ ರೈತರಿಗೆ ಮೇವಿನ ಕೊರತೆ ಎದುರಾಗದಂತೆ ಕ್ರಮವಹಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಹನುಮನಾಳದಿಂದ ಮುಂದೆ ಸಾಗಿದ ತಂಡವು, ಕನಕಗಿರಿ ಹೋಬಳಿಯ ತಿಪ್ಪನಾಳ ಗ್ರಾಮಕ್ಕೆ ಭೇಟಿ ನೀಡಿ ರೈತ ಯಮನೂರಪ್ಪ ಅವರ ಕೃಷಿ ಭೂಮಿಯಲ್ಲಿ ಒಣಗುತ್ತಿರುವ ತೊಗರಿ ಬೆಳೆಯನ್ನು ಖುದ್ದು ಪರಿಶೀಲಿಸಿತು. ಬಳಿಕ ಸುಳೇಕಲ್ ಗ್ರಾಮದ ರೈತರೋರ್ವರ ಹೊಲದಲ್ಲಿನ ಕೃಷಿ ಹೊಂಡಕ್ಕೆ ಭೇಟಿ ಕೊಟ್ಟರು. ರೈತ ಸಂಗಪ್ಪ ತಂದೆ ನೂತನ ಶೆಟ್ಟಿ ಅವರ ಹೊಲದಲ್ಲಿ ಮಳೆಯ ಕೊರತೆಯಿಂದ ಹಾನಿಗೊಳಗಾದ ಸೂರ್ಯಕಾಂತಿ ಬೆಳೆ ಮತ್ತು ರೈತ ಸಣ್ಣ ಕಾಶಿಂಸಾಬ ತಂದೆ ಮರ್ದಾನಸಾಬ ಅವರ ಜಮೀನಲ್ಲಿ ನಷ್ಟವಾದ ಮೆಕ್ಕೆಜೋಳ ಮತ್ತು ಅಕ್ಕಪಕ್ಕದ ಇತರೆ ಬೆಳೆಯನ್ನು ಸಹ ವೀಕ್ಷಣೆ ನಡೆಸಿತು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಸಾಹಿಲ್ ಬಾಗ್ಲಾ, ಅಪರ ಜಿಲ್ಲಾಧಿಕಾರಿಗಳಾದ ಸಿದ್ದರಾಮೇಶ್ವರ್, ಜಂಟಿ ಕೃಷಿ ನಿರ್ದೇಶಕರಾದ ಜಿ.ಡಿ. ಕೃಷ್ಣಮೂರ್ತಿ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕರಾದ ಕೃಷ್ಣ ಉಕ್ಕುಂದ್, ಪಶುಪಾಲನಾ ಇಲಾಖೆಯ ಉಪನಿರ್ದೇಶಕರಾದ ಡಾ. ಪಿ.ಎಂ. ಮಲ್ಲಯ್ಯ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ತಹಶೀಲ್ದಾರರು ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಉಪಸ್ಥಿತರಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular