ಕೋಲಾರ: ಇತ್ತೀಚಿನ ದಿನಗಳಲ್ಲಿ ಕಳ್ಳತನ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕಳ್ಳ-ಖದೀಮರಿಗೆ ಪೊಲೀಸರೆಂದರೆ ಕಿಮ್ಚಿತ್ತೂ ಭಯ ಎಂಬುದು ಇಲ್ಲ. ಪೊಲೀಸ್ ಠಾಣೆಯ ಮುಂದೆ ನಿಲ್ಲಿಸಿದ್ದ ಬೈಕ್ ಬಾಕ್ಸ್ ನಲ್ಲಿದ್ದ ಲಕ್ಷಾಂತರ ರೂಪಾಯಿ ಹಣವನ್ನು ಕಳ್ಳರು ದೋಚಿ ಪರಾರಿಯಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ.
ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಬೇತಮಂಗಲದಲ್ಲಿ ಕಳ್ಳರು ಕೈಚಳಕ ತೋರಿಸಿದ್ದು, ಬೈಕ್ ಬಾಕ್ಸ್ನಲ್ಲಿದ್ದ ಒಂದು ಲಕ್ಷ ರೂಪಾಯಿ ಹಣವನ್ನು ದೋಚಿ ಪರಾರಿಯಾಗಿದ್ದಾರೆ.
ಬೇತಮಂಗಲ ನ್ಯೂಟೌನ್ ನಿವಾಸಿ ರಮೇಶ್ ಎಂಬುವವರು ಕೆನರಾ ಬ್ಯಾಂಕ್ನಿಂದ ಹಣ ಡ್ರಾ ಮಾಡಿ ಬೈಕ್ ಬಾಕ್ಸ್ನಲ್ಲಿ ಇರಿಸಿದ್ದರು. ಬೈಕ್ ನಿಲ್ಲಿಸಿ ರಮೇಶ್ ಅಂಗಡಿಯೊಂದಕ್ಕೆ ಹೋದ ಸಂದರ್ಭದಲ್ಲಿ ಹೊಂಚು ಹಾಕಿದ್ದ ಕಳ್ಳರು ಹಣವನ್ನು ದೋಚಿದ್ದಾರೆ. ಈ ಕೃತ್ಯ ಬೇತಮಂಗಲ ಪೊಲೀಸ್ ಠಾಣೆಯ ಸಮೀಪವೇ ನಡೆದಿದೆ.
ಕಳ್ಳರು ಹಣದೊಂದಿಗೆ ಪರಾರಿಯಾಗುತ್ತಿದ್ದಂತೆ ರಮೇಶ್ ಅವರ ಮಗ ಜೋರಾಗಿ ಕೂಗಿಕೊಂಡಿದ್ದಾರೆ. ತಕ್ಷಣ ಎಚ್ಚೆತ್ತ ಸ್ಥಳೀಯರು ಕಳ್ಳರನ್ನು ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಕಳ್ಳತನದ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ.

