ಕೋಲಾರ: ರಾಸಾಯನಿಕ ವಸ್ತುಗಳನ್ನು ಬಳಸಿ ಹಾಲು ತಯಾರಿಸುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಿಢೀರ್ ದಾಳಿ ನಡೆಸಿ ಐವರು ಆರೋಪಿಗಳನ್ನು ಬಂಧಿಸಿರುವ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ವ್ಯಾಪ್ತಿಯಲ್ಲಿ ನಡೆದಿದೆ.
ಖದೀಮರು ನಕಲಿ ಹಾಲು ಉತ್ಪಾದನೆ ಮಾಡುತ್ತಿದ್ದರು. ರಾಅಸಾಯನಿಕಗಳನ್ನು ಬಳಸಿ ಹಾಲು ಉತ್ಪಾದಿಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಕೆಜಿಎಫ್ ಪೊಲೀಸರು ಘಟಕದ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಐವರನ್ನು ಬಂಧಿಸಿದ್ದಾರೆ. ಬಂಧಿತರು ಆಂಧ್ರಪ್ರದೇಶ ಮೂಲದ ದಿಲೀಪ್, ಬಾಲರಾಜ್, ವೆಂಕಟೇಶಪ್ಪ, ಬಾಲಾಜಿ ಹಾಗೂ ಮನೋಹರ್ ಎಂದು ಗುರುತಿಸಲಾಗಿದೆ.
ಬಳ್ಳಗೆರೆ ಗ್ರಾಮದಲ್ಲಿ ಅಕ್ರಮವಾಗಿ ಕಲಬೆರೆಕೆ ಹಾಲು ತಯಾರಿಸುತ್ತಿದ್ದರು. ಬಂಧಿತರಿಂದ ಸುಮಾರು 22 ಲಕ್ಷ ಮೌಲ್ಯದ ಉಪಕರಣ ಹಾಗೂ ಕಲಬೆರೆಕೆಗೆ ಬಳಸುತ್ತಿದ್ದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಪಾಮಾಯಲ್, ಮಿಲ್ಕ್ ಪೌಡರ್, ಪುಷ್ಟಿ ಪೌಡರ್, ಲಡ್ಡು, ಹಾಲಿನ ಕ್ಯಾನ್, ಎರಡು ಲಗೇಜ್ ಆಟೋ ಗಳನ್ನು ವಶಕ್ಕೆ ಪಡೆಯಲಾಗಿದೆ.

