ಮೇ 22ರಂದು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಲೀಗ್ ಹಂತದ 67ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ 55 ರನ್‌ಗಳ ಭರ್ಜರಿ ಗೆಲುವನ್ನು ದಾಖಲಿಸಿತು.
ಈ ಪಂದ್ಯ ಉಭಯ ತಂಡಗಳ ಪ್ಲೇಆಫ್ ಸುತ್ತಿನ ಕ್ವಾಲಿಫಯರ್ ಪಂದ್ಯವನ್ನು ನಿರ್ಣಯಿಸುತ್ತಿದ್ದ ಕಾರಣದಿಂದಾಗಿ ಮಹತ್ವ ಪಡೆದುಕೊಂಡಿತ್ತು. 256 ರನ್‌ಗಳ ಗುರಿ ನೀಡಿದ್ದ ಸನ್ ರೈಸರ್ಸ್ ಬೆಂಗಳೂರನ್ನು 166 ರನ್ ಒಳಗೆ ಕಟ್ಟಿಹಾಕಿದರೆ ಎರಡನೇ ಸ್ಥಾನಕ್ಕೇರಿ ಕ್ವಾಲಿಫಯರ್ ಒಂದನ್ನು ಆಡುವ ಅವಕಾಶವಿತ್ತು. ಆದರೆ ಬೆಂಗಳೂರು 200 ರನ್ ಗಳಿಸಿದ ಕಾರಣ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲೇ ಮುಂದುವರಿಯಿತು ಹಾಗೂ ಗುಜರಾತ್ ಟೈಟನ್ಸ್ ಎರಡನೇ ಸ್ಥಾನದಲ್ಲಿ ಮುಂದುವರಿಯಿತು ಹಾಗೂ ಹೈದರಾಬಾದ್ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಇನ್ನು ಈ ಪಂದ್ಯದ ವೇಳೆ ಹೆಡ್ ಹಾಗೂ ಕೊಹ್ಲಿ ನಡುವೆ ಕಿರಿಕ್ ಸಂಭವಿಸಿತು. ಕೊಹ್ಲಿ ಬ್ಯಾಟಿಂಗ್ ವೇಳೆ ಕಮಿನ್ಸ್‌ಗೆ ಬೌಂಡರಿ ಬಾರಿಸಿದಾಗ ಡೆಲಿವರಿ ಚೇಂಜ್ ಮಾಡುವಂತೆ ಹೆಡ್ ಕಮಿನ್ಸ್‌ಗೆ ಸಲಹೆ ನೀಡಿದರು. ಇದಕ್ಕೆ ಮೂಗು ತೂರಿಸಿದ ಕೊಹ್ಲಿ ನೀನೇ ಬಂದು ಬೌಲಿಂಗ್ ಮಾಡು ಎಂದು ಹೆಡ್ ಕೆಣಕಿದರು. ಸುಮ್ಮನಿರದ ಹೆಡ್ ನಾನು ಬರುವಷ್ಟರಲ್ಲಿ ನೀನು ಔಟ್ ಆಗಿರುತ್ತೀಯ ಎಂದು ಕೌಂಟರ್ ಕೊಟ್ಟರು.
ಕೆಣಕಿ ಕೌಂಟರ್ ಪಡೆದುಕೊಡ ಕೊಹ್ಲಿ ಅದ್ಯಾಕೋ ಅಂದು ಸಣ್ಣತನ ಮೆರೆದರು. ಪಂದ್ಯ ಮುಗಿದ ಬಳಿಕ ಹೆಡ್‌ಗೆ ಹಸ್ತಲಾಘವ ನೀಡದೇ ನಡೆದರು. ಸ್ವತಃ ಹೆಡ್ ಕೈಕುಲುಕಲು ಮುಂದಾದರೂ ಸ್ಪಂದಿಸದ ಕೊಹ್ಲಿ ಅವರ ಮುಖ ತಿರುಗಿಸಿ ನಡೆದುಹೋದರು.
ಕೊಹ್ಲಿಯ ಈ ನಡೆ ನಿಜಕ್ಕೂ ಈತ ಲೆಜೆಂಡರಿ ಕ್ರಿಕೆಟಿಗನಾ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿಬಿಟ್ಟಿತು. ಎಲ್ಲೆಡೆ ಕೊಹ್ಲಿ ವಿರುದ್ಧ ಟೀಕೆಗಳು ಹರಿದುಬಂದವು. ಆಟದಲ್ಲಿ ಸಾವಿರ ಮನಸ್ತಾಪವಿರಲಿ, ಆಟದ ಬಳಿಕವೂ ಅದನ್ನು ಮುಂದುವರಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಸ್ವತಃ ಹಲವು ಕೊಹ್ಲಿ ಅಭಿಮಾನಿಗಳೇ ಇದನ್ನು ವಿರೋಧಿಸಿದರು.
ಆದರೆ ಕೆಲ ತಲೆಕೆಟ್ಟ ಕೊಹ್ಲಿ ಅಭಿಮಾನಿಗಳು ಎಂದಿನಂತೆ ತಮ್ಮ ವರಸೆ ಶುರುವಿಟ್ಟುಕೊಂಡರು. ಹೆಡ್ ಹಾಗೂ ಆತನ ಪತ್ನಿ ಜೆಸ್ಸಿಕಾ ಸಾಮಾಜಿಕ ಜಾಲತಾಣದ ಖಾತೆಗಳಿಗೆ ನುಗ್ಗಿ ಕೆಟ್ಟ ಕಾಮೆಂಟ್‌ಗಳನ್ನು ಹರಿಬಿಟ್ಟರು.
ಹೆಡ್ ಪತ್ನಿಗೆ ನಿನ್ನ ರೇಟ್ ಎಷ್ಟು ಎಂದೆಲ್ಲ ನೀಚ ಕಾಮೆಂಟ್ ಮಾಡಿದರು, ಅಲ್ಲದೇ ಅತ್ಯಾಚಾರದ ಬೆದರಿಕೆಗಳೂ ಸಹ ಇದ್ದವು. ಇದರ ಕುರಿತು ಸದ್ಯ ಹೆಡ್ ಪತ್ನಿ ಜೆಸ್ಸಿಕಾ ದಿ ಅಡ್ವಟೈಸರ್ ಎಂಬ ಸ್ಪೋರ್ಟ್ಸ್ ನ್ಯೂಸ್ ಜತೆ ಮಾತನಾಡಿದ್ದು, ತನಗೆ ಮಾತ್ರವಲ್ಲದೇ ತನ್ನ ಕುಟುಂಬದ ಸದಸ್ಯರು ಹಾಗೂ ಸ್ನೇಹಿತರಿಗೂ ಕೆಟ್ಟ ಮೆಸೇಜ್‌ಗಳು ಬರತೊಡಗಿವೆ, ಏಕದಿನ ವಿಶ್ವಕಪ್‌ನಲ್ಲಿ ಬಂದ ಹಾಗೆ ಈ ಬಾರಿಯೂ ಹಲವಾರು ಕೆಟ್ಟ ಮೆಸೇಜ್‌ಗಳು ಬಂದಿವೆ ಎಂದು ಜೆಸ್ಸಿಕಾ ತಿಳಿಸಿದ್ದಾರೆ.

