ಕೊಡಗು: ತಡಿಯಂಡಮೊಳ್ ಬೆಟ್ಟಕ್ಕೆ ಚಾರಣಕ್ಕೆ ಹೋಗಿದ್ದ ಯುವತಿಯೊಬ್ಬಳು ನಾಪತ್ತೆಯಾಗಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.
ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಕಕ್ಕೆಬ್ಬೆ ಗ್ರಾಮದ ತಡಿಯಂಡಮೊಳ್ ಬೆಟ್ಟದಲ್ಲಿ ಈ ಘಟನೆ ನಡೆದಿದೆ. ಕೇರಳ ಮೂಲದ ಶರಣ್ಯ ಜಿ.ಎಸ್ ನಾಪತ್ತೆಯಾಗಿರುವ ಯುವತಿ. ಖಾಸಗಿ ಹೋಂ ಸ್ಟೇನಲ್ಲಿ ಶರಣ್ಯ ಅತಂಗಿದ್ದರು.
ನಿನ್ನೆ ಒಬ್ಬಳೇ ಚಾರಣಕ್ಕೆ ತೆರಳಲು ಮುಂದಾಗಿದ್ದರು. ಕಾಡಾನೆ ಕಾಟ ಇರುವುದರಿಂದ ಬೇರೆಯವರ ಜೊತೆ ಅರಣ್ಯ ಇಲಾಖೆ ಸಿಬ್ಬಂದಿ ಕಳುಹಿಸಿದ್ದರು. ಆದರೆ ಶರಣ್ಯ ಸಂಜೆಯಾದರೂ ವಾಪಸ್ ಆಗಿಲ್ಲ. ಇದರಿಂದ ಶರಣ್ಯಳಿಗಾಗಿ ಹುಡುಕಾಟ ನಡೆಸಲಾಗಿದೆ. ಆದಾಗ್ಯೂ ಅವರ ಸುಳಿವು ಸಿಕ್ಕಿಲ್ಲ.
ಶರಣ್ಯಳಿಗಾಗಿ ಇಂದು ಕೂಡ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ತೀವ್ರ ಶೋಧ ನಡೆಸುತ್ತಿದ್ದಾರೆ.
ತಡಿಯಂಡಮೋಳ್ ಬೆಟ್ಟವು ಕೊಡಗು ಜಿಲ್ಲೆಯ ಅತಿ ಎತ್ತರದ (ಸುಮಾರು 1,748 ಮೀಟರ್) ಮತ್ತು ಕರ್ನಾಟಕದ 3ನೇ ಎತ್ತರದ ಶಿಖರವಾಗಿದೆ. ಪಶ್ಚಿಮ ಘಟ್ಟಗಳ ಶೋಲಾ ಕಾಡುಗಳು ಮತ್ತು ಹುಲ್ಲುಗಾವಲುಗಳಿಂದ ಆವೃತವಾದ ಈ ತಾಣವು ಟ್ರೆಕ್ಕಿಂಗ್ ಪ್ರಿಯರಿಗೆ ನೆಚ್ಚಿನ ಸ್ಥಳವಾಗಿದೆ. ವಿರಾಜಪೇಟೆಯಿಂದ ಸುಮಾರು 30 ಕಿ.ಮೀ ದೂರದಲ್ಲಿರುವ ಈ ಬೆಟ್ಟದ ಹತ್ತಿರ ಐತಿಹಾಸಿಕ ನಾಲ್ಕನಾಡ್ ಅರಮನೆ ಇದೆ. ಚಾರಣವು ಸಾಮಾನ್ಯವಾಗಿ ಈ ಐತಿಹಾಸಿಕ ಸ್ಥಳದಿಂದ ಆರಂಭವಾಗುತ್ತದೆ.

