ಮಡಿಕೇರಿ: ಕಾಅಡಾನೆ ದಾಳಿಗೆ ಗ್ರಾಮ ಪಂಚಾಯತ್ ಮಾಜಿ ಸದಸ್ಯೆಯೊಬ್ಬರು ಸಾವನ್ನಪ್ಪಿರುವ ದಾರುಣ ಘಟನೆ ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ನಡೆದಿದೆ.
ಕುಶಾಲನಗರ ತಾಲೂಕಿನ ವಾಲ್ನೂರಿನಲ್ಲಿ ಕಾಡಾನೆ ದಾಳಿಗೆ ಮಹಿಳೆ ಬಲಿಯಾಗಿದ್ದಾರೆ. ನಂಜರಾಯಪಟ್ಟಣ ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಜಲಜಾಕ್ಷಿ(53) ಮೃತ ದುರ್ದೈವಿ.
ನಡೆದುಕೊಂಡು ಹೋಗುತ್ತಿದ್ದ ಜಲಜಾಕ್ಷಿ ಅವರ ಮೇಲೆ ಕಾಡಾನೆ ಏಕಾಏಕಿ ದಾಳಿ ನಡೆಸಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಎಸಿಎಫ್ ಗೋಪಾಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಮಡಿಕೇರಿ ತಾಲೂಕಿನ ಗುಡ್ಡಗಾಡು ಗ್ರಾಮ ಬೆಟ್ಟತ್ತೂರಿನಲ್ಲಿ ಕಾಡಾನೆ ದಾಳಿಗೆ ಪಿಯುಸಿ ವಿದ್ಯಾರ್ಥಿನಿ ಪೂಜ್ಯ ಎಂಬಾಕೆ ಬಲಿಯಾಗಿದ್ದಳು. ತನ್ನ ತಂದೆ-ತಾಯಿ ಜೊತೆ ಬೈಕ್ನಲ್ಲಿ ಬಂದ ಪೂಜ್ಯ, ಬೈಕ್ನಿಂದ ಇಳಿದ ಕೆಲವೇ ಸೆಕೆಂಡುಗಳಲ್ಲಿ ಕತ್ತಲಿನಲ್ಲಿ ಹಿಂಬದಿಯಿಂದ ಬಂದ ಆನೆ ಭೀಕರ ದಾಳಿ ನಡೆಸಿತ್ತು. ಈ ವೇಳೆ ಆಕೆಯ ಕಿರುಚಾಟ ಕೇಳಿ ತಾಯಿ ಬೊಬ್ಬೆಹೊಡೆದರೂ ಸಲಗದ ಕಾಲಡಿ ಸಿಲುಕಿದ್ದ ಪೂಜ್ಯ ಪ್ರಾಣ ಬಿಟ್ಟಿದ್ದಳು. ಆ ಘಟನೆ ಮಾಸುವ ಮುನ್ನವೇ ಈಗ ಮತ್ತೊಂದು ಸಾವು ಸಂಭವಿಸಿದೆ.
ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಡಾನೆ ಸೆರೆ ಹಿಡಿಯುವಂತೆ ಒತ್ತಾಯಿಸಿದ್ದಾರೆ.

