ಕೊಡಗು: ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಚರ್ಚ್ ನಿರ್ಮಿಸಿ ಮತಾಂತರಕ್ಕೆ ಯತ್ನ ನಡೆಸಿದ್ದಲ್ಲದೇ ಚರ್ಚ್ ಉದ್ಘಾಟನೆಗೆ ತಮಿಳುನಾಡಿನಿಂದ ಜನರು ಆಗಮಿಸಿದ್ದು, ವಿಷಯ ತಿಳಿಯುತ್ತಿದ್ದಂತೆ ಚರ್ ಮೇಲೆ ಪೊಲೀಸರು ದಾಳಿ ನಡೆಸಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.
ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೇರೂರಿನ ಗಿರಿಜನ ಪ್ರದೇಶದಲ್ಲಿ ಅಕ್ರಮವಾಗಿ ಚರ್ಚ್ ನಿರ್ಮಿಸಿದ್ದು, ಈ ಚರ್ಚ್ ಉದ್ಘಾಟನೆಗೆ ತಮಿಳುನಾಡಿನಿಂದ 40ಕ್ಕೂ ಹೆಚ್ಚು ಜನರು ಆಗಮಿಸಿದ್ದರು. ಪೊಲೀಸ್ ದಾಳಿ ವೇಳೆ 40 ಜನರನ್ನು ವಶಕ್ಕೆ ಪಡೆಯಲಾಗಿದೆ.
ಈ ಹಿನ್ನೆಲೆ ಕುಶಾಲನಗರ ವೃತ್ತ ನಿರೀಕ್ಷಕ ಪ್ರದೀಪ್, ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿಗಳಾದ ಮೋಹನ್ರಾಜ್ ನೇತೃತ್ವದಲ್ಲಿ ದಾಳಿ ನಡೆದಿದೆ. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮೂಲಕ ಯಾವುದೇ ಅನುಮತಿ ಪಡೆಯದೇ ಚರ್ಚ್ ಕಟ್ಟಡ ನಿರ್ಮಿಸಿರುವುದು ಬೆಳಕಿಗೆ ಬಂದಿದೆ.
ಅಕ್ರಮ ಚರ್ಚ್ ನಿರ್ಮಾಅಣ ಸಂಬಂಧ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಈ ವೇಳೆ ಸ್ಥಳೀಯರು ಹಾಗೂ ಹಾಡಿ ನಿವಾಸಿಗಳ ನಡುವೆ ವಾಗ್ವಾದ ನಡೆದಿದ್ದು, ತಮ್ಮಿಷ್ಟದಂತೆ ತಾವು ಪ್ರಾರ್ಥನೆಯಲ್ಲಿ ತೊಡಗಿರುವುದಾಗಿ ಹಾಡಿ ನಿವಾಸಿಗಳು ವಾದಿಸಿದ್ದಾರೆ. ಬಳಿಕ ಪೊಲೀಸರು ತಮಿಳುನಾಡು ಮೂಲದ 40ಕ್ಕೂ ಹೆಚ್ಚು ಜನರನ್ನು ವಾಹನ ಸಮೇತವಾಗಿ ವಶಕ್ಕೆ ಪಡೆದು ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.
ಈ ವೇಳೆ ಮಾತನಾಡಿರುವ ಬಿಜೆಪಿ ಮುಖಂಡ ಹೇರೂರು ಚಂದ್ರಶೇಖರ್, ಹೇರೂರು ಗಿರಿಜನ ಹಾಡಿಯಲ್ಲಿ ಮತಾಂತರ ಚಟುವಟಿಕೆ ನಡೆಸುತ್ತಿದ್ದಾರೆ. ಮತಾಂತರಗೊಂಡ ಆದಿವಾಸಿಗಳು ಸಮಾಜ ಕಲ್ಯಾಣ ಇಲಾಖೆ ಜಾಗದಲ್ಲಿ ಅನಧಿಕೃತವಾಗಿ ಚರ್ಚ್ ನಿರ್ಮಿಸಿ ಪ್ರಾರ್ಥನೆಗೆ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇದರ ಉದ್ಘಾಟನೆಗೆ ತಮಿಳುನಾಡಿನಿಂದ ಜನ ಬಂದಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಹಾಗಾಗಿ ಅಕ್ರಮ ಮತಾಂತರ ಪ್ರಕ್ರಿಯೆಗಳಿಗೆ ಕಡಿವಾಣ ಹಾಕಬೇಕಿದೆ ಎಂದು ಒತ್ತಾಯಿಸಿದ್ದಾರೆ.

