HomeKarnatakaಕೊರ್ದಬ್ಬು ದೈವಸ್ಥಾನದಲ್ಲಿ ಕಳ್ಳರ ಕೈಚಳಕ: 14.95 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಕಳ್ಳತನ

ಕೊರ್ದಬ್ಬು ದೈವಸ್ಥಾನದಲ್ಲಿ ಕಳ್ಳರ ಕೈಚಳಕ: 14.95 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಕಳ್ಳತನ

ಮಂಗಳೂರು: ಕಿಲ್ಪಾಡಿಯ ಕೊರ್ದಬ್ಬು ದೈವಸ್ಥಾನದಲ್ಲಿ ಕಳ್ಳರು ಅಪಾರಪ್ರಮಾಣದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ಮುಲ್ಕಿ ಪೊಲೀಸ್​​ ಠಾಣಾ ವ್ಯಾಪ್ತಿಯ ಕಿಲ್ಪಾಡಿಯ ಕೊರ್ದಬ್ಬು ದೈವಸ್ಥಾನದಲ್ಲಿ ಕೈಚಳಕ ತೋರಿದ್ದು, ದೈವದ ಬೆಳ್ಳಿಯ ಮುಖವಾಡ, ಬೆಳ್ಳಿಯ ಕವಚವಿರುವ ಖಡ್ಗ ಹಾಗೂ ಚಿನ್ನಾಭರಣಗಳು ಸೇರಿದಂತೆ ಸುಮಾರು 14,95,000 ಮೌಲ್ಯದ ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಿಲ್ಪಾಡಿ ಕೊರ್ದಬ್ಬು ದೈವಸ್ಥಾನದಲ್ಲಿ ಅರ್ಚಕರಾಗಿರುವ ಕಿಶೋರ್​ ಅವರು ಸೆಪ್ಟೆಂಬರ್ 1ರಂದು ಸಂಜೆ 6 ಗಂಟೆಗೆ ದೈವಕ್ಕೆ ನಿತ್ಯ ಪೂಜೆ ನೆರವೇರಿಸಿದ್ದರು. ಆ ವೇಳೆ ದೈವದ ಎಲ್ಲಾ ಆಭರಣಗಳು ಸ್ಥಳದಲ್ಲೇ ಇದ್ದವು. ಪೂಜೆ ಮುಗಿಸಿ ಸಂಜೆ 7 ಗಂಟೆಗೆ ದೈವಸ್ಥಾನದ ಬಾಗಿಲಿಗೆ ಬೀಗ ಹಾಕಿ ಮನೆಗೆ ತೆರಳಿದ್ದರು. ಮರುದಿನ, ಅಂದರೆ ಸೆಪ್ಟೆಂಬರ್ 2ರಂದು ಬೆಳಗ್ಗೆ 7 ಗಂಟೆಗೆ ಪೂಜೆಗಾಗಿ ದೈವಸ್ಥಾನಕ್ಕೆ ಬಂದಾಗ ಮುಖ್ಯ ದ್ವಾರದ ಬೀಗ ತುಂಡರಿಸಿ ಕೆಳಗೆ ಬಿದ್ದಿರುವುದು ಹಾಗೂ ಚಿಲಕ ಹಾಕಿದ ಸ್ಥಿತಿಯಲ್ಲಿದ್ದದ್ದು ಕಂಡುಬಂದಿದೆ.

ಒಳಗೆ ಹೋಗಿ ಪರಿಶೀಲಿಸಿದಾಗ ಗರ್ಭಗುಡಿಯಲ್ಲಿದ್ದ ಕೊರ್ದಬ್ಬು ದೈವದ ಮೂರ್ತಿಯ ಆಭರಣಗಳು ಕಳವಾಗಿರುವುದು ಬೆಳಕಿಗೆ ಬಂದಿದೆ. ದುಷ್ಕರ್ಮಿಗಳು ಯಾವುದೋ ಸಾಧನದಿಂದ ಬೀಗ ಮುರಿದು ಒಳನುಗ್ಗಿ ದೇವರ ಚಿನ್ನಾಭರಣ, ಹಲವು ಸೊತ್ತುಗಳನ್ನು ದೋಚಿದ್ದಾರೆ.

ಬೆಳ್ಳಿಯ ಮೊಗ (ಮುಖವಾಡ): ಸುಮಾರು 6 ಕೆ.ಜಿ. ತೂಕದ ಬೆಳ್ಳಿಯ ಮುಖವಾಡ. ಇದರಲ್ಲಿ ಬಂಗಾರದ ತಗಡಿನ ನಾಲಿಗೆ ಮತ್ತು ಮೀಸೆ, ಹಣೆಯಲ್ಲಿ ಸೂರ್ಯ-ಚಂದ್ರ ಆಕೃತಿಯ ಬಂಗಾರದ ಪದಕ, ಬಂಗಾರದ ದೃಷ್ಟಿ ಹಾಗೂ ಕಣ್ಣುಹುಬ್ಬು, ಕೆಂಪು ಕಲ್ಲಿನ ಹಣೆಯ ಬೊಟ್ಟು, ನೀಲಿ ಕಲ್ಲಿನ ದೃಷ್ಟಿ ಹಾಗೂ ತಲೆಯ ಮೇಲ್ಭಾಗ ಪ್ರಭಾವಳಿ ಮಾದರಿಯ ಕಿರೀಟವಿದೆ.

ಬೆಳ್ಳಿಯ ಖಡ್ಗ (ಖಡ್ಸಲೆ): ಸುಮಾರು 1 ಕೆ.ಜಿ. ಬೆಳ್ಳಿಯ ಕವಚ ಹೊಂದಿದ್ದು, ತುದಿಯಲ್ಲಿ ಬಂಗಾರದ ಕವಚವಿದೆ.

ಬೆಳ್ಳಿಯ ಸೊಂಟಪಟ್ಟಿಗಳು: ಒಟ್ಟು 4 ಕೆ.ಜಿ. ತೂಕದ 2 ಬೆಳ್ಳಿಯ ಸೊಂಟಪಟ್ಟಿಗಳು.

ಒಟ್ಟಾರೆಯಾಗಿ ಸುಮಾರು 11 ಕೆ.ಜಿ. ಬೆಳ್ಳಿ ಹಾಗೂ 5 ಪವನ್ ಬಂಗಾರದ ಆಭರಣಗಳು ಕಳವಾಗಿದ್ದು, ಇವುಗಳ ಒಟ್ಟು ಅಂದಾಜು ಮೌಲ್ಯ ರೂ 14,95,000 ಎಂದು ಅಂದಾಜಿಸಲಾಗಿದೆ.

ಅರ್ಚಕ ಕಿಶೋರ್ ಅವರು ನೀಡಿದ ದೂರಿನ ಮೇರೆಗೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular