HomeInternational‘ಗುಪ್ತಾಂಗ ಕಳವು’ ವದಂತಿಗೆ ಆಫ್ರಿಕಾದಲ್ಲಿ ನೆತ್ತರ ಕೋಡಿ ; ಸೋಶಿಯಲ್ ಮೀಡಿಯಾ ಹುಚ್ಚಾಟಕ್ಕೆ ಬಲಿಯಾದ್ರು 80ಕ್ಕೂ...

‘ಗುಪ್ತಾಂಗ ಕಳವು’ ವದಂತಿಗೆ ಆಫ್ರಿಕಾದಲ್ಲಿ ನೆತ್ತರ ಕೋಡಿ ; ಸೋಶಿಯಲ್ ಮೀಡಿಯಾ ಹುಚ್ಚಾಟಕ್ಕೆ ಬಲಿಯಾದ್ರು 80ಕ್ಕೂ ಅಧಿಕ ಮಂದಿ !

ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಕಪೋಲಕಲ್ಪಿತ ವದಂತಿಗಳು ಮತ್ತು ಮೂಢನಂಬಿಕೆಗಳು ಎಷ್ಟು ಭೀಕರ ದುರಂತಕ್ಕೆ ಕಾರಣವಾಗಬಲ್ಲವು ಎಂಬುದಕ್ಕೆ ಆಫ್ರಿಕಾ ಖಂಡದಲ್ಲಿ ನಡೆಯುತ್ತಿರುವ ಸರಣಿ ಹತ್ಯಾಕಾಂಡಗಳೇ ನಿದರ್ಶನವಾಗಿವೆ. ಅಪರಿಚಿತರನ್ನು ಮುಟ್ಟಿದರೆ ಪುರುಷರ ಗುಪ್ತಾಂಗಗಳು (ಜನನಾಂಗ) ಮಾಯವಾಗುತ್ತವೆ ಅಥವಾ ಕಳುವಾಗುತ್ತವೆ ಎಂಬ ವಿಚಿತ್ರ ವದಂತಿಯೊಂದು ಟಿಕ್‌ಟಾಕ್ ಮತ್ತು ಫೇಸ್‌ಬುಕ್‌ನಲ್ಲಿ ಕಾಳ್ಗಿಚ್ಚಿನಂತೆ ಹರಡಿದ್ದು, ಕಳೆದ ಒಂದು ವರ್ಷದಲ್ಲಿ ಬರೋಬ್ಬರಿ 80ಕ್ಕೂ ಹೆಚ್ಚು ಅಮಾಯಕರು ಗುಂಪು ಹಲ್ಲೆಗೆ (Mob Lynching) ಬಲಿಯಾಗಿದ್ದಾರೆ.

ಬಿಬಿಸಿ ಸಂಸ್ಥೆಯ ಜಾಗತಿಕ ತಪ್ಪು ಮಾಹಿತಿ ಪರಿಶೀಲನಾ ಘಟಕ (Global Disinformation Unit) ನಡೆಸಿರುವ ತನಿಖೆಯಿಂದ ಈ ಆಘಾತಕಾರಿ ಸತ್ಯ ಬಯಲಾಗಿದ್ದು, ಆಫ್ರಿಕಾದ ಎಂಟು ಪ್ರಮುಖ ದೇಶಗಳಲ್ಲಿ ಈ ರಕ್ತಸಿಕ್ತ ಹಿಂಸಾಚಾರ ಮುಂದುವರಿದಿದೆ.

ಎಲ್ಲಿಂದ ಶುರುವಾಯ್ತು ಈ ವಿಚಿತ್ರ ವದಂತಿ ?

ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಕಳೆದ ವರ್ಷ ಆರಂಭವಾದ ಈ ಕಟ್ಟುಕಥೆ, ಕ್ರಮೇಣ ಬುರುಂಡಿ, ಜಾಂಬಿಯಾ, ತಾಂಜಾನಿಯಾ, ಮೊಜಾಂಬಿಕ್, ಅಂಗೋಲಾ, ಮಲಾವಿ ಮತ್ತು ಕೀನ್ಯಾ ಸೇರಿದಂತೆ ಒಟ್ಟು ಎಂಟು ದೇಶಗಳಿಗೆ ಹಬ್ಬಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸ್ಥಳೀಯವಾಗಿ ಬೇರೂರಿರುವ ಮಾಟ-ಮಂತ್ರದಂತಹ ಹಳೆಯ ಮೂಢನಂಬಿಕೆಗಳಿಗೆ ಕೆಲ ಕಿಡಿಗೇಡಿಗಳು ಸೋಶಿಯಲ್ ಮೀಡಿಯಾದ ರೀಲ್ಸ್ ಹಾಗೂ ಕಿರು ವಿಡಿಯೋಗಳ ಮೂಲಕ ಕಿಚ್ಚು ಹಚ್ಚಿದ್ದಾರೆ. ಅಪರಿಚಿತ ವ್ಯಕ್ತಿಯೊಬ್ಬರು ಮೈ ಮುಟ್ಟಿದ ತಕ್ಷಣವೇ ಪುರುಷರ ಜನನಾಂಗ ಮಾಯವಾಗುತ್ತದೆ ಅಥವಾ ಕುಗ್ಗಿಹೋಗುತ್ತದೆ ಎಂದು ನಂಬಿಸಲಾಗುತ್ತಿದೆ. ಇದನ್ನು ಸತ್ಯವೆಂದು ನಂಬುವ ಜನರು, ರಸ್ತೆಯಲ್ಲಿ ಹೋಗುವ ಅಮಾಯಕರನ್ನು ಸುತ್ತುವರಿದು, “ಕದ್ದಿರುವ ಗುಪ್ತಾಂಗವನ್ನು ವಾಪಸ್ ಕೊಡು” ಎಂದು ಒತ್ತಾಯಿಸಿ ಕಲ್ಲುಗಳಿಂದ ಹೊಡೆದು, ಬೆಂಕಿ ಹಚ್ಚಿ ಬರ್ಬರವಾಗಿ ಕೊಲ್ಲುತ್ತಿದ್ದಾರೆ.

ಕಣ್ಣೆದುರೇ ನರಕ ಕಂಡ ತಾಂಜಾನಿಯಾದ ಮೆಕ್ಯಾನಿಕ್:

ತಾಂಜಾನಿಯಾದ ತುಂಡುಮಾದಲ್ಲಿ ಕಾರು ಮಾರಾಟದ ಮಾತುಕತೆಗಾಗಿ ಹೋಟೆಲ್‌ಗೆ ಊಟಕ್ಕೆ ಹೋಗಿದ್ದ ಬೋನಿಫೇಸ್ ಮ್ಗಾಲಾ ಎಂಬ ಮೆಕ್ಯಾನಿಕ್ ಹಾಗೂ ಆತನ ಸ್ನೇಹಿತನ ಮೇಲೆ ಏಕಾಏಕಿ ನುಗ್ಗಿದ ಉದ್ರಿಕ್ತ ಗುಂಪು ಮಾರಣಾಂತಿಕ ಹಲ್ಲೆ ನಡೆಸಿತ್ತು. “ನೀವು ಜನರ ಗುಪ್ತಾಂಗಗಳನ್ನು ಕದ್ದಿದ್ದೀರಿ ಎಂದು ಅವರು ಕಿರುಚುತ್ತಿದ್ದರು. ನೂರಾರು ಜನರಿದ್ದ ಕಾರಣ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಕೈಮುಗಿದು ಬೇಡಿಕೊಂಡರೂ ಬಿಡದೆ ರಸ್ತೆಯಲ್ಲಿ ಎಳೆದೊಯ್ದರು” ಎಂದು ಅವರು ತಮ್ಮ ಮೇಲೆ ನಡೆದ ದೌರ್ಜನ್ಯವನ್ನು ನೆನೆದು ಕಣ್ಣೀರಿಟ್ಟಿದ್ದಾರೆ.

ಮೊಜಾಂಬಿಕ್‌ನಲ್ಲಿ 6 ವಾರದಲ್ಲಿ 55 ಜನರ ಹತ್ಯೆ!

ಈ ವದಂತಿಯಿಂದ ಅತ್ಯಂತ ಭೀಕರವಾಗಿ ತತ್ತರಿಸಿದ್ದು ಮೊಜಾಂಬಿಕ್ ದೇಶ. ಅಲ್ಲಿ ಕೇವಲ ಆರೇ ವಾರಗಳಲ್ಲಿ ಬರೋಬ್ಬರಿ 55 ಅಮಾಯಕರು ಹತ್ಯೆಯಾಗಿದ್ದಾರೆ. ಮೃತರ ಪೈಕಿ ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿ, ಆರೋಗ್ಯ ಕಾರ್ಯಕರ್ತರು ಹಾಗೂ ಸರ್ಕಾರಿ ನೌಕರರೂ ಸೇರಿದ್ದಾರೆ!

ಪರಿಸ್ಥಿತಿ ಕೈಮೀರುತ್ತಿದ್ದಂತೆ ದೇಶವನ್ನುದ್ದೇಶಿಸಿ ಮಾತನಾಡಿದ ಮೊಜಾಂಬಿಕ್ ಅಧ್ಯಕ್ಷ ಡೇನಿಯಲ್ ಚಾಪೋ, ಈ ಹತ್ಯೆಗಳನ್ನು ತೀವ್ರವಾಗಿ ಖಂಡಿಸಿದ್ದಾರೆ. “ಇದು ಸಂಪೂರ್ಣ ಸುಳ್ಳು. ವೈದ್ಯಕೀಯ ಪರೀಕ್ಷೆಗಳಲ್ಲಿ ಯಾರೊಬ್ಬರ ದೇಹದ ಅಂಗವೂ ಕಳುವಾಗಿರುವುದು ಅಥವಾ ಮಾಯವಾಗಿರುವುದು ಕಂಡುಬಂದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಅಸಲಿ ವೈದ್ಯಕೀಯ ಸತ್ಯ: ಏನಿದು ‘ಕೋರೋ ಸಿಂಡ್ರೋಮ್’ ?

ಆರೋಗ್ಯ ತಜ್ಞರ ಪ್ರಕಾರ, ಇದು ಯಾವುದೇ ಮಾಟ-ಮಂತ್ರವಲ್ಲ. ವೈದ್ಯಕೀಯ ಲೋಕದಲ್ಲಿ ಇದನ್ನು ‘ಕೋರೋ ಸಿಂಡ್ರೋಮ್’ (Koro syndrome ಅಥವಾ Genital retraction hysteria) ಎಂದು ಕರೆಯಲಾಗುತ್ತದೆ. ಇದೊಂದು ಮಾನಸಿಕ ಕಾಯಿಲೆಯಾಗಿದ್ದು, ತೀವ್ರ ಆತಂಕ ಅಥವಾ ಭ್ರಮೆಯಿಂದಾಗಿ ವ್ಯಕ್ತಿಗೆ ತನ್ನ ಜನನಾಂಗ ಕುಗ್ಗುತ್ತಿದೆ ಅಥವಾ ಮಾಯವಾಗುತ್ತಿದೆ ಎಂಬ ಮಾನಸಿಕ ಭ್ರಮೆ ಉಂಟಾಗುತ್ತದೆ. ಈ ವೈಜ್ಞಾನಿಕ ಅರಿವಿಲ್ಲದ ಜನರು ಇದನ್ನು ಕಳವು ಎಂದು ಭಾವಿಸಿ ಹಿಂಸೆಗೆ ಇಳಿಯುತ್ತಿದ್ದಾರೆ.

ವೀವ್ಸ್ ಮತ್ತು ಲೈಕ್ಸ್‌ಗಾಗಿ ಕಿಡಿಗೇಡಿಗಳ ಹುನ್ನಾರ:

ಕೀನ್ಯಾದ ಕರಾವಳಿ ಭಾಗಗಳಾದ ಕ್ವಾಲೆ ಮತ್ತು ಮೊಂಬಾಸಾದಲ್ಲೂ ಐದು ಜನರನ್ನು ಹೊಡೆದು ಸಾಯಿಸಲಾಗಿದೆ. ಮೊಂಬಾಸಾ ಕೌಂಟಿ ಕಮಿಷನರ್ ಮೊಹಮ್ಮದ್ ನೂರ್ ಮಾತನಾಡಿ, “ಕೇವಲ ವೀವ್ಸ್, ಲೈಕ್ಸ್ ಮತ್ತು ಆನ್‌ಲೈನ್ ಗಮನ ಸೆಳೆಯಲು ಕೆಲವು ಕಂಟೆಂಟ್ ಕ್ರಿಯೇಟರ್‌ಗಳು ಇಂತಹ ಸುಳ್ಳು ಕಥೆಗಳನ್ನು ವಿಡಿಯೋಗಳ ಮೂಲಕ ಹರಡುತ್ತಿದ್ದಾರೆ. ಇದು ಮುಗ್ಧ ಜನರ ಪ್ರಾಣಕ್ಕೆ ಸಂಚಕಾರ ತರುತ್ತಿದೆ” ಎಂದು ಆಕ್ರೋಶ ಹೊರಹಾಕಿದ್ದಾರೆ. ಈ ಸಂಬಂಧ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿದ್ದ ತಂದೆ-ಮಗನಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದ್ದು, ಸೋಷಿಯಲ್ ಮೀಡಿಯಾದ ಸುಳ್ಳು ವದಂತಿಗಳನ್ನು ನಂಬದಂತೆ ಸರ್ಕಾರ ಜನರಲ್ಲಿ ಮನವಿ ಮಾಡಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular