ಇತ್ತೀಚಿನ ದಿನಗಳಲ್ಲಿ ದೇಹಕ್ಕೆ ಅಗತ್ಯವಿರುವಷ್ಟು ನೀರು ಕುಡಿಯದಿರುವುದು, ಹೆಚ್ಚು ಉಪ್ಪು ಹಾಗೂ ಸಂಸ್ಕರಿಸಿದ ಫಾಸ್ಟ್ ಫುಡ್ ಸೇವನೆಯಿಂದಾಗಿ ಕಿಡ್ನಿ ಸ್ಟೋನ್ (ಮೂತ್ರಪಿಂಡದ ಕಲ್ಲು) ಸಮಸ್ಯೆ ವಿಪರೀತವಾಗಿ ಹೆಚ್ಚಾಗುತ್ತಿದೆ. ಹಿಂದೆಲ್ಲಾ ಕೇವಲ ವಯಸ್ಕರಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಈ ಸಮಸ್ಯೆ, ಇಂದು ಆಹಾರ ಸಂಸ್ಕೃತಿ ಮತ್ತು ಜೀವನಶೈಲಿಯ ಬದಲಾವಣೆಯಿಂದಾಗಿ ಮಕ್ಕಳು ಹಾಗೂ ಯುವಕರಲ್ಲೂ ಹೆಚ್ಚಾಗಿ ಕಂಡುಬರುತ್ತಿರುವುದು ಆರೋಗ್ಯ ತಜ್ಞರನ್ನು ಚಿಂತೆಗೀಡುಮಾಡಿದೆ.
ಕಿಡ್ನಿ ಸ್ಟೋನ್ ಬರುವುದಕ್ಕೆ ಮುಖ್ಯ ಕಾರಣಗಳೇನು?
ನಿತ್ಯ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯದಿರುವುದು
ಅತಿಯಾದ ಉಪ್ಪು ಹಾಗೂ ಜಂಕ್ ಫುಡ್/ಪ್ಯಾಕೆಟ್ ಆಹಾರಗಳ ಸೇವನೆ
ವ್ಯಾಯಾಮದ ಕೊರತೆ ಹಾಗೂ ಒಂದೇ ಕಡೆ ದೀರ್ಘಕಾಲ ಕುಳಿತು ಕೆಲಸ ಮಾಡುವುದು
ಬಿರುಬಿಸಿಲಿನಲ್ಲಿ ದೀರ್ಘಕಾಲ ಶ್ರಮವಹಿಸಿ ಕೆಲಸ ಮಾಡುವುದರಿಂದ ದೇಹದಲ್ಲಿ ನೀರಿನ ಅಂಶ (Dehydration) ಕಡಿಮೆಯಾಗುವುದು
ಕಿಡ್ನಿ ಸ್ಟೋನ್‌ನಲ್ಲಿವೆ 4 ಪ್ರಮುಖ ವಿಧಗಳು
ಕಿಡ್ನಿಯಲ್ಲಿ ಉತ್ಪತ್ತಿಯಾಗುವ ಕಲ್ಲುಗಳಲ್ಲಿ ನಾಲ್ಕು ಮುಖ್ಯ ವಿಧಗಳಿವೆ:
ಕ್ಯಾಲ್ಸಿಯಂ ಸ್ಟೋನ್ಸ್ : ಇದು ಅತ್ಯಂತ ಸಾಮಾನ್ಯವಾದ ಕಿಡ್ನಿ ಸ್ಟೋನ್. ಶೇ. 70 ರಿಂದ 80 ರಷ್ಟು ರೋಗಿಗಳಲ್ಲಿ ಇದೇ ಮಾದರಿಯ ಕಲ್ಲುಗಳು ಕಂಡುಬರುತ್ತವೆ. ಪಾಲಕ್ ಸೊಪ್ಪು, ಬೀಟ್ರೂಟ್, ಚಾಕೊಲೇಟ್, ಬೀಜಗಳಂತಹ ಆಹಾರಗಳ ಅತಿಯಾದ ಸೇವನೆ ಹಾಗೂ ನೀರಿನ ಅಭಾವದಿಂದ ಕ್ಯಾಲ್ಸಿಯಂ ಆಕ್ಸಲೇಟ್ ಕಲ್ಲುಗಳು ಉಂಟಾಗುತ್ತವೆ.
ಯೂರಿಕ್ ಆಸಿಡ್ ಸ್ಟೋನ್ಸ್ : ಅತಿಯಾದ ಪ್ರೋಟೀನ್ ಸರಿಹೊಂದದ ಆಹಾರ ಪದ್ಧತಿ ಹಾಗೂ ಗೌಟ್ (Gout) ಕಾಯಿಲೆಯಿಂದ ಬಳಲುವವರಲ್ಲಿ ಈ ಕಲ್ಲುಗಳು ಕಂಡುಬರುತ್ತವೆ.
ಸ್ಟ್ರುವೈಟ್ ಸ್ಟೋನ್ಸ್ : ಮೂತ್ರನಾಳದ ಸೋಂಕಿನಿಂದ (UTI) ಈ ಮಾದರಿಯ ಕಲ್ಲುಗಳು ಸೃಷ್ಟಿಯಾಗುತ್ತವೆ.
ಸಿಸ್ಟೈನ್ ಸ್ಟೋನ್ಸ್ : ಇದು ಜನ್ಮಜಾತ ಅಥವಾ ಅನುವಂಶಿಕ ಆರೋಗ್ಯ ಸಮಸ್ಯೆಗಳಿಂದಾಗಿ ಅಪರೂಪವಾಗಿ ಬರುತ್ತದೆ.
ಕಡೆಗಣಿಸಬಾರದ ಪ್ರಮುಖ ಲಕ್ಷಣಗಳು:
ಆರಂಭಿಕ ಹಂತದಲ್ಲಿ ಕಿಡ್ನಿಯಲ್ಲಿ ಕಲ್ಲುಗಳಿದ್ದರೆ ಯಾವುದೇ ರೋಗಲಕ್ಷಣಗಳು ಗೋಚರಿಸುವುದಿಲ್ಲ. ಆದರೆ ಕಲ್ಲು ತನ್ನ ಜಾಗದಿಂದ ಸರಿದು ಮೂತ್ರನಾಳದಲ್ಲಿ ಸಿಕ್ಕಿಬಿದ್ದಾಗ ತೀವ್ರ ತೊಂದರೆ ಶುರುವಾಗುತ್ತದೆ.
ತೀವ್ರವಾದ ನೋವು: ಬೆನ್ನಿನ ಹಿಂಭಾಗದಲ್ಲಿ ಅಥವಾ ಪಕ್ಕದ ಎಲುಬುಗಳ ಕೆಳಗೆ ತೀವ್ರವಾದ ಚುಚ್ಚುವಂತಹ ನೋವು ಕಾಣಿಸಿಕೊಳ್ಳುತ್ತದೆ.
ನೋವು ಹರಡುವುದು: ಈ ನೋವು ಅಲೆಅಲೆಯಾಗಿ ಕೆಳಹೊಟ್ಟೆ ಹಾಗೂ ತೊಡೆಯ ಭಾಗಕ್ಕೆ ವ್ಯಾಪಿಸುತ್ತದೆ. ಕೆಲವೊಮ್ಮೆ ನೋವಿನ ತೀವ್ರತೆ ಹೆಚ್ಚಾಗಿ, ಮತ್ತೆ ಕಡಿಮೆಯಾಗುತ್ತಿರುತ್ತದೆ.
ಕಿಡ್ನಿ ಸ್ಟೋನ್ ಉಂಟಾಗುವ ಪ್ರಕ್ರಿಯೆ ಹೇಗೆ?
ನಮ್ಮ ಮೂತ್ರಪಿಂಡಗಳು (Kidneys) ರಕ್ತದಲ್ಲಿರುವ ತ್ಯಾಜ್ಯ ವಸ್ತುಗಳನ್ನು ಶೋಧಿಸಿ ಮೂತ್ರದ ಮೂಲಕ ಹೊರಹಾಕುತ್ತವೆ. ಆದರೆ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾದಾಗ, ಮೂತ್ರದಲ್ಲಿರುವ ಕ್ಯಾಲ್ಸಿಯಂ, ಆಕ್ಸಲೇಟ್, ಯೂರಿಕ್ ಆಸಿಡ್‌ನಂತಹ ಸ್ಪಟಿಕಗಳು (Crystals) ಒಂದಕ್ಕೊಂದು ಅಂಟಿಕೊಳ್ಳಲು ಪ್ರಾರಂಭಿಸುತ್ತವೆ. ಕಾಲಕ್ರಮೇಣ ಇವು ಗಟ್ಟಿಯಾಗಿ ಕಲ್ಲಿನ ರೂಪ ಪಡೆಯುತ್ತವೆ.
ಕಿಡ್ನಿ ಸ್ಟೋನ್‌ನ ಇತರೆ ಪ್ರಮುಖ ಲಕ್ಷಣಗಳು:
ಮೂತ್ರ ವಿಸರ್ಜನೆಯಲ್ಲಿ ವ್ಯತ್ಯಾಸ: ಮೂತ್ರ ವಿಸರ್ಜಿಸುವಾಗ ಉರಿ ಅಥವಾ ತೀವ್ರ ನೋವು ಕಾಣಿಸಿಕೊಳ್ಳುವುದು.
ಮೂತ್ರದ ಬಣ್ಣ ಬದಲಾವಣೆ: ಮೂತ್ರವು ಕೆಂಪು, ಗುಲಾಬಿ ಅಥವಾ ಕಂದು ಬಣ್ಣಕ್ಕೆ ತಿರುಗುವುದು (ರಕ್ತದ ಅಂಶವಿರುವುದರಿಂದ).
ದುರ್ವಾಸನೆ ಮತ್ತು ಮಸುಕಾದ ಮೂತ್ರ: ಮೂತ್ರದಲ್ಲಿ ಸೋಂಕು (Infection) ಉಂಟಾಗಿದ್ದರೆ ಮಸುಕಾದ ಬಣ್ಣ ಹಾಗೂ ದುರ್ವಾಸನೆ ಬರುತ್ತದೆ.
ವಾಂತಿ ಮತ್ತು ವಾಕರಿಕೆ: ತೀವ್ರ ನೋವಿನ ಕಾರಣದಿಂದಾಗಿ ವಾಕರಿಕೆ ಅಥವಾ ವಾಂತಿ ಉಂಟಾಗುವುದು.
ಆಗ್ಗಾಗ್ಗೆ ಮೂತ್ರ ಬರುವುದು: ಸಣ್ಣ ಪ್ರಮಾಣದಲ್ಲಿ ಪದೇ ಪದೇ ಮೂತ್ರ ವಿಸರ್ಜನೆಗೆ ಹೋಗಬೇಕೆನಿಸುವುದು.
ಜ್ವರ ಮತ್ತು ಚಳಿ: ಮೂತ್ರನಾಳದ ಸೋಂಕು ತೀವ್ರವಾಗಿದ್ದರೆ ಜ್ವರ ಹಾಗೂ ಚಳಿ ಕಾಣಿಸಿಕೊಳ್ಳಬಹುದು.
ಸೇವಿಸಬಾರದು / ನಿಯಂತ್ರಿಸಬೇಕಾದ ಆಹಾರಗಳು:
ಆಕ್ಸಲೇಟ್ ಹೆಚ್ಚಿರುವ ಆಹಾರಗಳು: ಪಾಲಕ್ ಸೊಪ್ಪು, ಟೊಮೆಟೊ (ಹೆಚ್ಚಿನ ಪ್ರಮಾಣದಲ್ಲಿ), ಬೀಟ್ರೂಟ್, ಚಾಕೊಲೇಟ್, ಚಹಾ ಮತ್ತು ಗೋಡಂಬಿ/ಬಾದಾಮಿ.
ಅತಿಯಾದ ಉಪ್ಪು (ಸೋಡಿಯಂ): ಉಪ್ಪಿನಕಾಯಿ, ಚಿಪ್ಸ್, ಬೇಕರಿ ತಿಂಡಿಗಳು ಹಾಗೂ ಪ್ಯಾಕ್ ಮಾಡಿದ ಆಹಾರಗಳಲ್ಲಿ ಸೋಡಿಯಂ ಹೆಚ್ಚಿರುತ್ತದೆ. ಇದು ಮೂತ್ರದಲ್ಲಿ ಕ್ಯಾಲ್ಸಿಯಂ ಪ್ರಮಾಣವನ್ನು ಹೆಚ್ಚಿಸುತ್ತದೆ.
ಅತಿಯಾದ ಪ್ರೋಟೀನ್: ಕೆಂಪು ಮಾಂಸ (Red Meat), ಕೋಳಿ ಮಾಂಸ ಮತ್ತು ಮೊಟ್ಟೆಯ ಅತಿಯಾದ ಸೇವನೆಯು ಯೂರಿಕ್ ಆಸಿಡ್ ಪ್ರಮಾಣವನ್ನು ಹೆಚ್ಚಿಸುತ್ತದೆ.
ಕೃತಕ ಸಕ್ಕರೆ ಹಾಗೂ ತಂಪಾದ ಪಾನೀಯಗಳು: ಕಾರ್ಬೋನೇಟೆಡ್ ಸಾಫ್ಟ್ ಡ್ರಿಂಕ್ಸ್ ಮತ್ತು ಸಕ್ಕರೆ ಅಂಶ ಹೆಚ್ಚಿರುವ ಜ್ಯೂಸ್‌ಗಳು.
ಕಿಡ್ನಿ ಸ್ಟೋನ್ ತಡೆಗಟ್ಟಲು ಏನು ಮಾಡಬೇಕು?
ಸಾಕಷ್ಟು ನೀರು ಕುಡಿಯಿರಿ: ದಿನಕ್ಕೆ ಕನಿಷ್ಠ 3 ರಿಂದ 4 ಲೀಟರ್ (10-12 ಲೋಟ) ನೀರು ಕುಡಿಯುವುದು ಅತ್ಯಂತ ಮುಖ್ಯ.
ಲಿಂಬೆ ಹಣ್ಣಿನ ರಸ (Citrate): ನಿಂಬೆಹಣ್ಣಿನ ರಸದಲ್ಲಿ ಸಿಟ್ರೇಟ್ ಅಂಶವಿದ್ದು, ಇದು ಕಲ್ಲುಗಳು ಗಟ್ಟಿಯಾಗುವುದನ್ನು ಮತ್ತು ಬೆಳೆಯುವುದನ್ನು ತಡೆಯುತ್ತದೆ.
ಎಳನೀರು ಮತ್ತು ಮಜ್ಜಿಗೆ: ದೇಹವನ್ನು ತಂಪಾಗಿರಿಸಲು ಹಾಗೂ ದ್ರವ ನೀಡಲು ಎಳನೀರು ಮತ್ತು ಉಪ್ಪು ಕಡಿಮೆಯಿರುವ ಮಜ್ಜಿಗೆ ಸೂಕ್ತ.
ಸಾಕಷ್ಟು ಪ್ರಮಾಣದ ನೈಸರ್ಗಿಕ ಕ್ಯಾಲ್ಸಿಯಂ: ಆಹಾರದ ಮೂಲಕ ಕ್ಯಾಲ್ಸಿಯಂ (ಹಾಲು, ಮೊಸರು) ಸೇವಿಸುವುದರಿಂದ ಆಕ್ಸಲೇಟ್ ದೇಹಕ್ಕೆ ಹೀರಿಕೊಳ್ಳುವುದು ಕಡಿಮೆಯಾಗುತ್ತದೆ. (ಆದರೆ ವೈದ್ಯರ ಸಲಹೆ ಇಲ್ಲದೆ ಕ್ಯಾಲ್ಸಿಯಂ ಮಾತ್ರೆಗಳನ್ನು ತೆಗೆದುಕೊಳ್ಳಬಾರದು).
ಚಿಕಿತ್ಸಾ ವಿಧಾನಗಳು
ಸಣ್ಣ ಕಲ್ಲುಗಳು (5mm ಗಿಂತ ಕಡಿಮೆ): ಸಾಕಷ್ಟು ನೀರು, ನೋವು ನಿವಾರಕಗಳು ಹಾಗೂ ಮೂತ್ರನಾಳವನ್ನು ಅಗಲಗೊಳಿಸುವ ಗಿಡಮೂಲಿಕೆ/ಔಷಧಿಗಳ ಮೂಲಕ ನೈಸರ್ಗಿಕವಾಗಿಯೇ ಮೂತ್ರದಲ್ಲಿ ಹೊರಹೋಗುತ್ತವೆ.
ದೊಡ್ಡ ಕಲ್ಲುಗಳು (5mm ಗಿಂತ ಹೆಚ್ಚು):
ESWL : ಶಬ್ದ ತರಂಗಗಳ ಮೂಲಕ ಕಲ್ಲನ್ನು ಸಣ್ಣ ತುಂಡುಗಳಾಗಿ ಒಡೆದು ಹೊರಹಾಕುವುದು.
Laser URS: ಲೇಸರ್ ತಂತ್ರಜ್ಞಾನದ ಮೂಲಕ ಮೂತ್ರನಾಳದ ಒಳಗಿನ ಕಲ್ಲನ್ನು ಪುಡಿ ಮಾಡುವುದು.
PCNL ಶಸ್ತ್ರಚಿಕಿ: ಬೆನ್ನಿನ ಭಾಗದಲ್ಲಿ ಸಣ್ಣ ರಂಧ್ರ ಮಾಡಿ ದೊಡ್ಡ ಕಲ್ಲುಗಳನ್ನು ತೆಗೆಯುವುದು.

