ಕಾಸರಗೋಡು: ಕೇರಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ಆರಂಭವಾಗುತ್ತಿದ್ದಂತೆಯೇ ಪಕ್ಕದ ರಾಜ್ಯದಲ್ಲಿ ದೊಡ್ಡ ಸಂಚಲನ ಮೂಡಿದೆ. ಇದುವರೆಗೆ ಎಡರಂಗ ಮತ್ತು ಬಲರಂಗದ ನಡುವೆ ಸೀಮಿತವಾಗಿದ್ದ ಕೇರಳ ರಾಜಕಾರಣದಲ್ಲಿ ಈ ಬಾರಿ ಬಿಜೆಪಿ ಹೊಸ ಇತಿಹಾಸ ಸೃಷ್ಟಿಸುವ ಮುನ್ಸೂಚನೆ ನೀಡಿದೆ. ಆರಂಭಿಕ ಟ್ರೆಂಡ್‌ಗಳ ಪ್ರಕಾರ, ಕೇರಳದ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ.
ಎಲ್ಲಿ? ಯಾರಿಗೆ ಮುನ್ನಡೆ?
ಮಂಜೇಶ್ವರ: ಬಿಜೆಪಿಯ ಪ್ರಭಾವಿ ನಾಯಕ ಕೆ. ಸುರೇಂದ್ರನ್ ಅವರು ಆರಂಭಿಕ ಹಂತದ ಮತ ಎಣಿಕೆಯಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಕಳೆದ ಚುನಾವಣೆಯಲ್ಲಿ ಕೂದಲೆಳೆ ಅಂತರದಲ್ಲಿ ಸೋತಿದ್ದ ಸುರೇಂದ್ರನ್, ಈ ಬಾರಿ ಆರಂಭದಲ್ಲೇ ಮುನ್ನಡೆ ಸಾಧಿಸಿರುವುದು ಕುತೂಹಲ ಮೂಡಿಸಿದೆ.
ಕಾಸರಗೋಡು: ಕಾಸರಗೋಡು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅಶ್ವಿನಿ ಅವರು ಮುನ್ನಡೆಯಲ್ಲಿದ್ದಾರೆ. ಇಲ್ಲಿನ ಬಿಗಿ ಪೈಪೋಟಿಯಲ್ಲಿ ಬಿಜೆಪಿ ಅಭ್ಯರ್ಥಿ ಮುಂಚೂಣಿಯಲ್ಲಿರುವುದು ಕೇಸರಿ ಪಡೆಯಲ್ಲಿ ಹೊಸ ಉತ್ಸಾಹ ತುಂಬಿದೆ.
ಇತಿಹಾಸ ಸೃಷ್ಟಿಸುತ್ತಾ ಬಿಜೆಪಿ?
ಕೇರಳದಲ್ಲಿ ಇದುವರೆಗೆ ಬಿಜೆಪಿ ದೊಡ್ಡ ಮಟ್ಟದ ಪ್ರಭಾವ ಬೀರಲು ಹರಸಾಹಸ ಪಡುತ್ತಿತ್ತು. ಆದರೆ, ಈ ಬಾರಿ ಏಕಕಾಲದಲ್ಲಿ ಎರಡು ಕ್ಷೇತ್ರಗಳಲ್ಲಿ ಆರಂಭಿಕ ಮುನ್ನಡೆ ಸಾಧಿಸಿರುವುದು ರಾಜಕೀಯ ವಿಶ್ಲೇಷಕರ ಹುಬ್ಬೇರಿಸಿದೆ. ಗಡಿ ಜಿಲ್ಲೆಗಳಾದ ಕಾಸರಗೋಡು ಮತ್ತು ಮಂಜೇಶ್ವರದಲ್ಲಿ ಬಿಜೆಪಿ ಗೆಲುವಿನ ನಗೆ ಬೀರಿದರೆ, ಅದು ಕೇರಳ ರಾಜಕಾರಣದಲ್ಲಿ ದೊಡ್ಡ ತಿರುವು ನೀಡಲಿದೆ.ಸದ್ಯಕ್ಕೆ ಅಂಚೆ ಮತಗಳು ಮತ್ತು ಮೊದಲ ಸುತ್ತಿನ ಇವಿಎಂ ಮತಗಳ ಎಣಿಕೆ ಪ್ರಕ್ರಿಯೆ ನಡೆಯುತ್ತಿದ್ದು, ಮಧ್ಯಾಹ್ನದ ವೇಳೆಗೆ ಚಿತ್ರಣ ಸ್ಪಷ್ಟವಾಗಲಿದೆ.

