ಕರ್ನಾಟಕದ ಪಕ್ಕದ ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದೆ. ಕೇರಳದಲ್ಲಿ ಏಪ್ರಿಲ್ 9 ಮತ್ತು ತಮಿಳುನಾಡಿನಲ್ಲಿ ಏಪ್ರಿಲ್ 23ರಂದು ಮತದಾನ ನಡೆಯಲಿದೆ. ಕರ್ನಾಟಕದ ಪೊಲೀಸರನ್ನು ಚುನಾವಣಾ ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ.
ತಮಿಳುನಾಡು ಮತ್ತು ಕೇರಳ ಚುನಾವಣೆ ಭದ್ರತೆಗೆ ನಿಯೋಜನೆಗೊಂಡಿರುವ ಪೊಲೀಸರಿಗೆ ಹಲವು ಸೂಚನೆಗಳನ್ನು ನೀಡಲಾಗಿದೆ. ಈ ಕುರಿತು ಎನ್.ಎಸ್.ಪ್ರಕಾಶ್ ನೋಡಲ್ ಅಧಿಕಾರಿ, ಕೇರಳ ಮತ್ತು ತಮಿಳುನಾಡು ರಾಜ್ಯ ವಿಧಾನಸಭಾ ಚುನಾಚಣೆ 2026 ಆದೇಶವನ್ನು ಹೊರಡಿಸಿದ್ದಾರೆ.
ಈ ಆದೇಶ ಕೇರಳ ಮತ್ತು ತಮಿಳುನಾಡು ವಿಧಾನಸಭಾ ಚುನಾವಣೆ 2026ರ ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸುವ ಅಧಿಕಾರಿ/ ಸಿಬ್ಬಂದಿಗಳು, ರೈಲು/ ರಸ್ತೆ ಪ್ರಯಾಣದಲ್ಲಿ ಹಾಗೂ ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಕುರಿತು ಎಂಬ ವಿಷಯವನ್ನು ಒಳಗೊಂಡಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಕೇರಳ ಮತ್ತು ತಮಿಳುನಾಡು ವಿಧಾನಸಭೆ ಚುನಾವಣೆ-2026ರ ಬಂದೋಬಸ್ತ್, ಕರ್ತವ್ಯಕ್ಕೆ ನಿಯೋಜಿಸ್ಪಟ್ಟ ಅಧಿಕಾರಿ/ ಸಿಬ್ಬಂದಿಗಳು ಆಯುಧ ಹಾಗೂ ಮದ್ದು-ಗುಂಡುಗಳ ಸುರಕ್ಷತೆ ದೃಷ್ಟಿಯಿಂದ ಮುಂಜಾಗೃತ ಕ್ರಮವಾಗಿ ಸೂಚನೆಗಳನ್ನು ಚಾಚೂತಪ್ಪದೇ ಪಾಲಿಸಲು ಸೂಚಿಸಲಾಗಿದೆ.
ಪೊಲೀಸರಿಗೆ ಸೂಚನೆಗಳು
* ಕೇರಳ ಮತ್ತು ತಮಿಳುನಾಡು ವಿಧಾನಸಭಾ ಚುನಾವಣೆ-2026ರ ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಕಂಪನಿಗಳು ರೈಲು ಹೊರಡುವ ಒಂದು ಗಂಟೆ ಮುಂಚಿತವಾಗಿ ರೈಲು ನಿಲ್ದಾಣದಲ್ಲಿ ಹಾಜರಿದ್ದು, ತಮ್ಮ ಲಗೇಜು, ಆಯುಧ-ಮದ್ದು ಗುಂಡುಗಳು ಹಾಗೂ ಇತರೇ ಉಪಕರಣಗಳನ್ನು ರೈಲಿನಲ್ಲಿ ವ್ಯವಸ್ಥಿತವಾಗಿ ಜೋಡಿಸಿಕೊಳ್ಳುವುದು, ಸಿಬ್ಬಂದಿಗಳು ರೈಲು ನಿಲ್ದಾಣದಲ್ಲಿ ಕಂಪನಿಗಳನ್ನು ಬಿಟ್ಟು ತೆರಳಬಾರದು ಹಾಗೂ ಶಿಸ್ತಿನಿಂದ ವರ್ತಿಸತಕ್ಕದ್ದು.
* ಅಧಿಕಾರಿ/ ಸಿಬ್ಬಂದಿಗಳು ತಮ್ಮೊಂದಿಗಿರುವ ಶಸ್ತ್ರಾಸ್ತ್ರಗಳನ್ನು ಎಚ್ಚರಿಕೆಯಿಂದ ನೋಡಿಕೊಂಡು, ಯಾವುದೇ ಅವಘಡಗಳಿಗೆ ಆಸ್ಪದ ಕೊಡದಂತೆ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸತಕ್ಕದ್ದು.
* ಮೇಲ್ವಿಚಾರಣಾಧಿಕಾರಿಗಳು ಹಾಗೂ ಕಂಪನಿ ಕಮಾಂಡರ್‌ರವರುಗಳು ಸಿಬ್ಬಂದಿಗಳನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಂಡು, ಸಿಬ್ಬಂದಿಗಳ ಕುಂದುಕೊರತೆಗಳನ್ನು ಪರಿಶೀಲಿಸಿ ಸೂಕ್ತ ಪರಿಹಾರಗಳನ್ನು ಮಾಡಿ ಶಿಸ್ತಿನಿಂದ ಮತ್ತು ದಕ್ಷತೆಯಿಂದ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳುವುದು.
* ಪ್ರಯಾಣದ ವೇಳೆಯಲ್ಲಿ ಕರ್ತವ್ಯ ನಿರ್ವಹಿಸುವ ಸ್ಥಳಗಳಲ್ಲಿ ಹಾಗೂ ತಂಗುದಾಣಗಳಲ್ಲಿ ಕಡ್ಡಾಯವಾಗಿ ಸಿಬ್ಬಂದಿಗಳನ್ನು ನೇಮಿಸಿ ಪಹರೆ ಹಾಕಿಕೊಳ್ಳುವುದು, ಅಧಿಕಾರಿಗಳಾಗಲೀ ಅಥವಾ ಸಿಬ್ಬಂದಿಗಳಾಗಲೀ ತಮ್ಮ ಮೇಲಾಧಿಕಾರಿಗಳ ಅನುಮತಿ ಇಲ್ಲದೇ ತಮ್ಮ ತಂಡವನ್ನು ಬಿಡುವಂತಿಲ್ಲ.
* ಮೇಲ್ವಿಚಾರಣಾಧಿಕಾರಿಗಳು ಹಾಗೂ ಕಂಪನಿ ಕಮಾಂಡರ್‌ರವರುಗಳು ಕೇರಳ ಮತ್ತು ತಮಿಳುನಾಡು ವಿಧಾನಸಭಾ ಚುನಾವಣೆ-2026ರ ಬಂದೋಬಸ್ತ್, ಕರ್ತವ್ಯಕ್ಕೆ ತೆರಳುವ ಸಿಬ್ಬಂದಿಗಳು ಕಡ್ಡಾಯವಾಗಿ ಗುರುತಿನ ಚೀಟಿ ತೆಗೆದುಕೊಳ್ಳುವಂತೆ ನೋಡಿಕೊಳ್ಳುವುದು.
* ಅಧಿಕಾರಿ/ ಸಿಬ್ಬಂದಿಗಳು ತಮ್ಮ ಕಂಪನಿಗಳ ಮೆಸ್‌ನಲ್ಲಿ ಶುಚಿಯಾದ ಮತ್ತು ಆರೋಗ್ಯಕರವಾದ ಆಹಾರಗಳನ್ನು ತಯಾರಿಸಿ ಸೇವಿಸುವುದು, ಹೊರಗಿನ ಆಹಾರಗಳನ್ನು ಸೇವಿಸತಕ್ಕದ್ದಲ್ಲ.
* ರೈಲು ಪ್ರಯಾಣದ ಅವಧಿಯಲ್ಲಿ ರೈಲು ನಿಂತಾಗ ತಿಂಡಿ, ಕಾಫಿ ಅಥವಾ ಊಟದ ಸಮಯದಲ್ಲಿ ಆಯುಧ ಮತ್ತು ಮದ್ದುಗುಂಡುಗಳ ಬಳಿ ಪಹರೆ ಸಿಬ್ಬಂದಿಯ ಜೊತೆ ಇನ್ನೊಬ್ಬ ಸಿಬ್ಬಂದಿ ಕಡ್ಡಾಯವಾಗಿ ಇರುವಂತೆ ನೋಡಿಕೊಳ್ಳುವುದು.
* ಪ್ರಯಾಣದ ಸಂದರ್ಭದಲ್ಲಿ ಆಯುಧ ಮತ್ತು ಮದ್ದು-ಗುಂಡುಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವುದು.
* ಪ್ರಯಾಣದ ವೇಳೆ ಅಧಿಕಾರಿ/ ಸಿಬ್ಬಂದಿಗಳು ತೆಗೆದುಕೊಂಡು ಹೋಗುತ್ತಿರುವ ಆಯುಧ ಮತ್ತು ಮದ್ದು ಗುಂಡುಗಳ ಬಗ್ಗೆ ಸಾರ್ವಜನಿಕವಾಗಿ ಚರ್ಚೆ ಮಾಡದಂತೆ ನೋಡಿಕೊಳ್ಳುವುದು.
* ಪ್ರಯಾಣದ ವೇಳೆ ತುರ್ತು ಸಂದರ್ಭದಲ್ಲಿ ರೈಲ್ವೆ ಪೊಲೀಸರ ರಕ್ಷಣೆಯನ್ನು ಪಡೆದುಕೊಳ್ಳುವುದು.
* ರೈಲಿನಲ್ಲಿ ಗ್ಯಾಸ್ ತುಂಬಿದ ಅಡಿಗೆ ಸಿಲಿಂಡರ್‌ಗಳನ್ನು ಸಾಗಿಸಬಾರದು, ಸಿಲಿಂಡರ್‌ಗಳಲ್ಲಿ ಗ್ಯಾಸ್ ಖಾಲಿಯಾಗಿರುವುದನ್ನು ಖಚಿತಪಡಿಸಿಕೊಂಡು, ಪ್ರತಿ ತುಕಡಿಗೆ 2 ಖಾಲಿ ಸಿಲಿಂಡರ್‌ಗಳನ್ನು ತೆಗೆದುಕೊಂಡು ಹೋಗತಕ್ಕದ್ದು.
* ಮೇಲ್ವಿಚಾರಣಾಧಿಕಾರಿಗಳು ಹಾಗೂ ಕಂಪನಿ ಕಮಾಂಡರವರುಗಳು ತಮ್ಮ ತಮ್ಮ ಕಂಪನಿಗಳ ಅಧಿಕಾರಿ/ ಸಿಬ್ಬಂದಿಗಳಿಗೆ ಹೊರ ರಾಜ್ಯ ಬಂದೋಬಸ್ತ್ ಕರ್ತವ್ಯ ನಿರ್ವಹಣೆ ಕುರಿತು ಸೂಕ್ತ ಸಲಹೆ ಸೂಚನೆಗಳು ಹಾಗೂ ಶಿಸ್ತಿನಿಂದ ಕರ್ತವ್ಯ ನಿರ್ವಹಿಸುವಂತೆ ಸೂಚನೆಗಳನ್ನು ನೀಡುವುದು.
* ಪ್ರತಿ ತುಕಡಿಗಳಲ್ಲಿ ಪಥಮ ಚಿಕಿತ್ಸಾ ಪೆಟ್ಟಿಗೆಯನ್ನು ಔಷದಿ ಮತ್ತು ಸಲಕರಣೆಗಳೊಂದಿಗೆ ಹಾಗೂ ಸಿಬ್ಬಂದಿಗಳು ತಮಗೆ ಬೇಕಾದ ಔಷದಿಗಳನ್ನು ತೆಗೆದುಕೊಳ್ಳುವುದು.
* ಪ್ರತಿ ಕಂಪನಿಯ ಅಧಿಕಾರಿ/ ಸಿಬ್ಬಂದಿಗಳನ್ನು ಸಾಧ್ಯವಾದಷ್ಟು ಒಂದೇ ಕಡೆ ಬೋಗಿಗಳಲ್ಲಿ ಕೂರಿಸುವ ವ್ಯವಸ್ಥೆಯನ್ನು ಮಾಡತಕ್ಕದ್ದು, ಇದರಿಂದ ಒಂದೇ ಪಡೆಯ ಅಧಿಕಾರಿ/ ಸಿಬ್ಬಂದಿಗಳು ಒಂದೇ ಕಡೆ ಕೂರುವಂತಾಗಿ ಉಟ/ ತಿಂಡಿ ಸರಬರಾಜಿಗೆ ಅನಕೂಲವಾಗುತ್ತದೆ. ಹಾಗೂ ಹಾಜರಾತಿ ತೆಗೆದುಕೊಳ್ಳಲು ಸಹಾಯವಾಗುತ್ತದೆ.
* ರೈಲ್ವೆ ನಿಲ್ದಾಣದಿಂದ ಆಯುಧಗಳು, ಮದ್ದು-ಗುಂಡುಗಳು, ರೇಷನ್ ಹಾಗೂ ಇತರೇ ವಸ್ತುಗಳನ್ನು ವಾಹನಗಳಿಗೆ ಸಾಗಿಸುವಾಗ ಹಾಗೂ ವಾಹನದಿಂದ ಕೊಠಡಿಗಳಿಗೆ ಸಾಗಿಸುವಾಗ ಸಂಬಂಧಿಸಿದ ತುಕಡಿ ನಾಯಕರುಗಳು ನಿಂತು ಗಮನಿಸುವುದು.
* ಗೌರವಧನ ಪಾವತಿಗೆ ಸಂಬಂಧಿಸಿದಂತೆ ಮೇಲ್ವಿಚಾರಣಾಧಿಕಾರಿಗಳು ಹಾಗೂ ಕಂಪನಿ ಕಮಾಂಡರ್‌ರವರುಗಳು ಸಂಬಂಧ ಪಟ್ಟ ಜಿಲ್ಲೆಯ ಅಧಿಕಾರಿಗಳು ಹಾಗೂ ನಿರ್ವಾಹಕರನ್ನು ಸಂಪರ್ಕಿಸಿ, ಸದರಿಯವರುಗಳ ದೂರವಾಣಿ ಸಂಖ್ಯೆ ಪಡೆದು ಆಗಾಗಾ Follow up ಮಾಡಲು ಸೂಚಿಸಲಾಗಿದೆ.
* ರೈಲು ಹತ್ತಿದ ನಂತರ ಸಿಬ್ಬಂದಿಗಳನ್ನು ಪಹರೆ ಕರ್ತವ್ಯಕ್ಕೆ ಗಂಟೆಗೊಬ್ಬರಂತೆ ನೇಮಿಸುವುದು ಹಾಗೂ ಈ ಸಮಯದಲ್ಲಿ ಮೊಬೈಲ್ ಬಳಸದಂತೆ ನೋಡಿಕೊಳ್ಳುವುದು.
* ಮೇಲ್ವಿಚಾರಣಾಧಿಕಾರಿಗಳು ಹಾಗೂ ಕಂಪನಿ ಕಮಾಂಡರ್‌ರವರುಗಳು ತಮ್ಮ ತಮ್ಮ ಕಂಪನಿಗಳಿಗೆ ಕಡ್ಡಾಯವಾಗಿ ಬ್ರೀಫಿಂಗ್ ಮತ್ತು ಡಿ-ಬ್ರೀಫಿಂಗ್ ಮಾಡುವುದು.
* ರಸ್ತೆ ಮಾರ್ಗವಾಗಿ ತೆರಳುವ ಕಂಪನಿಗಳು ಶಿಸ್ತುಬದ್ಧವಾಗಿ ಬಸ್‌ಗಳಲ್ಲಿ ತೆರಳುವುದು, ರಸ್ತೆ ಮಧ್ಯದಲ್ಲಿ ವಾಹನಗಳು ಶಿಷ್ಟಾಚಾರ ನಿಯಮ ಅನುಸರಿಸುವುದು. ಒಂದು ವೇಳೆ ವಾಹನದ ದುರಸ್ಥಿ ಸಮಯದಲ್ಲಿ ಸ್ಥಳೀಯ ಪೊಲೀಸ್ ಮೆಕಾನಿಕ್ ಸೌಲಭ್ಯ ಪಡೆಯುವುದು ಮತ್ತು ನೋಡಲ್ ಅಧಿಕಾರಿಯವರ ಗಮನಕ್ಕೆ ತರುವುದು.

