ಕೇಂದ್ರೀಯ ವಿದ್ಯಾಲಯ ಸಂಘಟನೆ (KVS), 2026-27ರ ಶೈಕ್ಷಣಿಕ ಸಾಲಿಗೆ ಸಂಬಂಧಿಸಿದಂತೆ ‘ಬಾಲವಾಟಿಕಾ’ ಪ್ರವೇಶಾತಿ ಫಲಿತಾಂಶಗಳನ್ನು ಬುಧವಾರ (ಏಪ್ರಿಲ್ 8) ಬಿಡುಗಡೆ ಮಾಡಿದೆ. ಕೇಂದ್ರೀಯ ವಿದ್ಯಾಲಯಗಳಲ್ಲಿ ಬಾಲವಾಟಿಕಾ ಪ್ರವೇಶದ ಲಾಟರಿ ಫಲಿತಾಂಶಗಳನ್ನು ಈ ಮೂಲಕ ಅಧಿಕೃತವಾಗಿ ಪ್ರಕಟಿಸಲಾಗಿದೆ. ಹಾಗೆಯೇ 1, 2 ಮತ್ತು 3ನೇ ತರಗತಿಗಳ ಪ್ರವೇಶಕ್ಕೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳ ಫಲಿತಾಂಶಗಳನ್ನು ಸಹ ಕೆವಿಎಸ್ ನಾಳೆ ಬಿಡುಗಡೆ ಮಾಡಲಿದೆ. ಫಲಿತಾಂಶಗಳನ್ನು ಅಧಿಕೃತ KVS ಪೋರ್ಟಲ್ಗಳಲ್ಲಿ ಪರಿಶೀಲಿಸಬಹುದು.
ಕೆವಿಎಸ್ ಬಿಡುಗಡೆ ಮಾಡಿರುವ ವೇಳಾಪಟ್ಟಿಯ ಪ್ರಕಾರ, ದೇಶದ ಎಲ್ಲಾ ಕೇಂದ್ರೀಯ ವಿದ್ಯಾಲಯಗಳಲ್ಲಿ ಪ್ರಿ-ಪ್ರೈಮರಿ ತರಗತಿಗಳ ಪ್ರವೇಶ ಪ್ರಕ್ರಿಯೆಗೆ ಸಂಬಂಧಿಸಿದ ಮೊದಲ ಹಂತದ ಫಲಿತಾಂಶಗಳನ್ನು ಪ್ರಕಟಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಪ್ರವೇಶ ಪ್ರಕ್ರಿಯೆಯೂ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ತಾತ್ಕಾಲಿಕ ಆಯ್ಕೆ ಪಟ್ಟಿಗಳು ಆನ್ಲೈನ್ನಲ್ಲಿ ಲಭ್ಯವಿದ್ದು, ಅಭ್ಯರ್ಥಿಗಳು ತಮ್ಮ ಪ್ರವೇಶದ ಸ್ಥಿತಿಯನ್ನು ಈ ಕೆಳಗಿನ ವಿಧಾನದ ಮೂಲಕ ಪರಿಶೀಲಿಸಬಹುದು.
ಕೇಂದ್ರೀಯ ವಿದ್ಯಾಲಯಗಳ ಪ್ರವೇಶ 2026 ರ ಫಲಿತಾಂಶಗಳನ್ನು ಪರಿಶೀಲಿಸುವುದುಹೇಗೆ?
- ಮೊದಲಿಗೆ ಪೋಷಕರು KVS ಅಧಿಕೃತ ವೆಬ್ಸೈಟ್ ಓಪನ್ ಮಾಡಬೇಕು.
- ಹೋಮ್ಪೇಜ್ನಲ್ಲಿರುವ ‘Admissions 2026-27’ ಟ್ಯಾಬ್ ಮೇಲೆ ಕ್ಲಿಕ್ ಮಾಡಬೇಕು.
- ‘Balvatika Provisional Selection List 2026’ ಅಥವಾ ‘Lottery Result 2026’ ಎಂಬ ಲಿಂಕ್ ಅನ್ನು ಆಯ್ಕೆ ಮಾಡಬೇಕು.
- ಡ್ರಾಪ್ಡೌನ್ ಮೆನುವಿನಲ್ಲಿ ನಿಮ್ಮ ರಾಜ್ಯ, ಕೆವಿ (KV) ವಲಯ ಮತ್ತು ಶಾಲೆಯ ಹೆಸರನ್ನು ಆಯ್ಕೆ ಮಾಡಬೇಕು.
- ನಂತರ ಪರದೆಯ ಮೇಲೆ ಫಲಿತಾಂಶದ PDF ಫೈಲ್ ತೆರೆಯುತ್ತದೆ. ಇದರಲ್ಲಿ ನಿಮ್ಮ ಮಗುವಿನ ನೋಂದಣಿ ಸಂಖ್ಯೆಯನ್ನು ಹುಡುಕಲು ಸರ್ಚ್ ಫಂಕ್ಷನ್ (Ctrl+F) ಬಳಸಬಹುದು.
ಕೆವಿಎಸ್ ಒಂದನೇ, ಎರಡನೇ ಮತ್ತು ಮೂರನೇ ತರಗತಿಗೆ ಸಂಬಂಧಿಸಿದ ಮೊದಲ ತಾತ್ಕಾಲಿಕ ಪಟ್ಟಿಯನ್ನು ಗುರುವಾರ (ಏಪ್ರಿಲ್ 9, 2026 ರಂದು) ಬಿಡುಗಡೆ ಮಾಡಲಿದೆ. ಆದರೆ ಪ್ರಸ್ತುತ ಮತದಾನ ನಡೆಯಲಿರುವ ರಾಜ್ಯಗಳಲ್ಲಿ ಮಾತ್ರ ಒಂದನೇ ತರಗತಿಯ ಫಲಿತಾಂಶಗಳನ್ನು ಏಪ್ರಿಲ್ 10 ರಂದು ಬಿಡುಗಡೆ ಮಾಡಲಾಗುವುದು ಎಂದು ಕೆವಿಎಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮೊದಲ ಪಟ್ಟಿಯಲ್ಲಿ ತಮ್ಮ ಮಗುವಿನ ಹೆಸರು ಕಾಣಿಸದ ಪೋಷಕರು ನಿರಾಶರಾಗುವ ಅಗತ್ಯವಿಲ್ಲ. ಮೊದಲ ಹಂತದ ಪ್ರಮಾಣಪತ್ರಗಳ ಪರಿಶೀಲನೆಯ ನಂತರ ಖಾಲಿ ಉಳಿದಿರುವ ಸೀಟುಗಳನ್ನು ಭರ್ತಿ ಮಾಡಲು ಕೆವಿಎಸ್ ಎರಡನೇ ಮತ್ತು ಮೂರನೇ ಆಯ್ಕೆ ಪಟ್ಟಿಗಳನ್ನು ಬಿಡುಗಡೆ ಮಾಡುತ್ತದೆ. ಎರಡನೇ ಪಟ್ಟಿ ಏಪ್ರಿಲ್ 16 ಮತ್ತು ಮೂರನೇ ಪಟ್ಟಿ ಏಪ್ರಿಲ್ 21 ರಂದು ಬಿಡುಗಡೆಯಾಗಲಿದೆ. RTE, ಸೇವಾ ಆದ್ಯತೆ (ರಕ್ಷಣೆ/ಕೇಂದ್ರ ಸರ್ಕಾರ) ಮತ್ತು ಮೀಸಲಾತಿ ಕೋಟಾಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಬಾಲವಾಟಿಕಾ ಆಯ್ಕೆ ಪಟ್ಟಿಯಲ್ಲಿ ಹೆಸರಿರುವ ವಿದ್ಯಾರ್ಥಿಗಳ ಪೋಷಕರು ಏಪ್ರಿಲ್ 15 ರಿಂದ ಏಪ್ರಿಲ್ 20, 2026 ರ ನಡುವೆ ಅಸಲಿ ಪ್ರಮಾಣಪತ್ರಗಳೊಂದಿಗೆ ಪರಿಶೀಲನೆಗೆ ಹಾಜರಾಗಬೇಕಾಗುತ್ತದೆ. ನಿಗದಿತ ಅವಧಿಯೊಳಗೆ ಹಾಜರಾಗದಿದ್ದರೆ ಅವರಿಗೆ ಹಂಚಿಕೆಯಾದ ಸೀಟನ್ನು ರದ್ದುಗೊಳಿಸಿ, ವೇಟಿಂಗ್ ಲಿಸ್ಟ್ನಲ್ಲಿರುವ ಮುಂದಿನ ವಿದ್ಯಾರ್ಥಿಗೆ ನೀಡಲಾಗುವುದು.
ದಾಖಲಾತಿ ಪರಿಶೀಲನೆಗೆ ಅಗತ್ಯವಿರುವ ಪತ್ರಗಳು
- ಜನನ ಪ್ರಮಾಣ ಪತ್ರ (Birth Certificate)
- ನಿವಾಸದ ಪುರಾವೆ (ಆಧಾರ್/ವೋಟರ್ ಐಡಿ/ರೇಷನ್ ಕಾರ್ಡ್)
- ಜಾತಿ ಪ್ರಮಾಣ ಪತ್ರ (Caste Certificate)
- ಸೇವಾ ಆದ್ಯತೆಯ ಪ್ರಮಾಣ ಪತ್ರ (Service Priority Certificate)
- ಆದಾಯ ಪ್ರಮಾಣ ಪತ್ರ (RTE ಕೋಟಾದಡಿ)

