ಇಂದು ( ಏಪ್ರಿಲ್ 30 ) ಶುಕ್ರವಾರ ನಟ ಧ್ರುವ ಸರ್ಜಾ ಹಾಗೂ ನಿರ್ದೇಶಕ ಪ್ರೇಮ್ ಕಾಂಬಿನೇಷನ್‌ನ ಮೊದಲ ಚಿತ್ರ ಕೆಡಿ ದಿ ಡೆವಿಲ್ ಬಿಡುಗಡೆಯಾಗಿದೆ. ರಮೇಶ್ ಅರವಿಂದ್, ರವಿಚಂದ್ರನ್, ಶಿಲ್ಪಾಶೆಟ್ಟಿ, ಸಂಜಯ್ ದತ್ ರೀತಿಯ ದೊಡ್ಡ ಕಲಾವಿದರ ದಂಡೇ ಇರುವ ಈ ಚಿತ್ರ ಬಿಡುಗಡೆಗೂ ಮುನ್ನ ಕೆಲ ವಿವಾದಗಳು ಹಾಗೂ ಟೀಕೆಗಳನ್ನು ಎದುರಿಸಿ ಕೊನೆಗೂ ಬೆಳ್ಳಿ ಪರದೆಯ ಮೇಲೆ ಪ್ರದರ್ಶನವನ್ನು ಕಂಡಿದೆ.
ಮೊದಲ ಪ್ರದರ್ಶನ ವೀಕ್ಷಿಸಿ ಹೊರಬಂದ ಸಿನಿ ರಸಿಕರು ಚಿತ್ರ ಚೆನ್ನಾಗಿದೆ, ಧ್ರುವ ಸರ್ಜಾ ಹಾಗೂ ಪ್ರೇಮ್ ಇಬ್ಬರಿಗೂ ಇದು ಕಮ್‌ಬ್ಯಾಕ್ ಸಿನಿಮಾ ಎಂಬ ಮಾತುಗಳನ್ನು ಹೇಳುತ್ತಿದ್ದು, ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಹಿಟ್ ಫಲಿತಾಂಶ ಸಿಗುವ ಲಕ್ಷಣಗಳು ಕಾಣಿಸುತ್ತಿವೆ.
ಇನ್ನು ಪ್ರೇಕ್ಷಕರ ವಿಮರ್ಶೆ ಕುರಿತಾಗಿ ಕೆಡಿ ಚಿತ್ರತಂಡ ಮತ್ತೊಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದು, ನ್ಯಾಯಾಲಯದ ಆದೇಶ ತಂದು ಬುಕ್‌ಮೈಶೋನಲ್ಲಿ ಪ್ರೇಕ್ಷಕರ ವಿಮರ್ಶೆಗೆ ನಿಷೇಧ ಹೇರುವ ಕೆಲಸಕ್ಕೆ ಕೈ ಹಾಕಿಲ್ಲ.
ಹೌದು, ಕಳೆದ ವರ್ಷ ತೆರೆಗೆ ಬಂದ ಬಹುತೇಕ ಎಲ್ಲ ಸ್ಟಾರ್ ನಟರ ಚಿತ್ರಗಳೂ ಸಹ ನ್ಯಾಯಾಲಯದ ಮೊರೆ ಹೋಗಿ ಚಿತ್ರದ ಮೇಲೆ ಪರಿಣಾಮ ಬೀರಬಹುದು ಎಂದು ಪ್ರೇಕ್ಷಕರಿಗೆ ಚಿತ್ರದ ಕುರಿತು ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕನ್ನು ಕಿತ್ತುಕೊಂಡಿದ್ದವು.
ತಾನೇ ಖರ್ಚು ಮಾಡಿ ಟಿಕೆಟ್ ತೆಗೆದುಕೊಂಡು, ಸಮಯ ಹಾಕಿ ಚಿತ್ರ ನೋಡಿದ್ದ ಪ್ರೇಕ್ಷಕನಿಗೆ ಬುಕ್‌ಮೈಶೋನಲ್ಲಿ ಚಿತ್ರ ಹೇಗಿದೆ ಎಂದು ರೇಟಿಂಗ್ ನೀಡುವ ಹಕ್ಕು ಇರಲಿಲ್ಲ. ಇದು ಅನೇಕ ಕನ್ನಡ ಸಿನಿ ರಸಿಕರಿಗೆ ಕಿರಿಕಿರಿ ಉಂಟುಮಾಡಿತ್ತು. ದುಡ್ಡು ಕೊಟ್ಟು ಸಿನಿಮಾ ನೋಡಬೇಕಂತೆ, ಆದರೆ ನಮ್ಮ ವಿಮರ್ಶೆ ಮಾತ್ರ ಬೇಡವಂತೆ ಎಂದು ಬೇಸರ ಹೊರಹಾಕಿ ವಿಮರ್ಶಿಸುವ ಹಕ್ಕಿಲ್ಲ ಎಂದಮೇಲೆ ಅಂತಹ ಚಿತ್ರಗಳನ್ನು ನೋಡುವುದಾದರೂ ಏಕೆ ಎಂದು ಹಿಂದೇಟು ಹಾಕಿದ್ದರು.
ಆದರೆ ಕೆಡಿ ಅಂತಹ ನಿರ್ಧಾರ ಮಾಡದೇ ದುಡ್ಡು ಕೊಟ್ಟು ಸಿನಿಮಾ ನೋಡುವ ಪ್ರೇಕ್ಷಕ ಬುಕ್‌ಮೈಶೋನಲ್ಲಿ ರೇಟಿಂಗ್ ನೀಡಲು ಅನುವುಮಾಡಿಕೊಟ್ಟಿದೆ. ಇದರಿಂದ ಚಿತ್ರ ನೋಡಿದ ಜನ ರೇಟಿಂಗ್ ನೀಡಲಿದ್ದು, ಅದನ್ನು ನೋಡಿಯೂ ಜನರು ಚಿತ್ರಮಂದಿರದತ್ತ ಬರಲಿದ್ದಾರೆ.
ಇನ್ನು ಪ್ರೇಕ್ಷಕರ ವಿಮರ್ಶೆಗೆ ನ್ಯಾಯಾಲಯದಿಂದ ಸ್ಟೇ ತಂದು ನಿಷೇಧ ಹೇರುವುದರಲ್ಲಿ ಅರ್ಥವಿಲ್ಲ ಎಂದೇ ಹೇಳಬಹುದು. ಏಕೆಂದರೆ ಬುಕ್‌ಮೈಶೋನಲ್ಲಿ ಒಂದು ಚಿತ್ರವನ್ನು ರೇಟ್ ಮಾಡಬೇಕೆಂದರೆ ಆ ವ್ಯಕ್ತಿ ಆ ಚಿತ್ರವನ್ನು ಆಪ್‌ನಲ್ಲಿ ಬುಕ್ ಮಾಡಿ ಚಿತ್ರವನ್ನು ವೀಕ್ಷಿಸಿರಬೇಕು. ಯಾರೇ ಬೇಕಾದರೂ ನೇರವಾಗಿ ಹೋಗಿ ಚಿತ್ರಕ್ಕೆ ರೇಟಿಂಗ್ ಕೊಡುವ ಆಯ್ಕೆ ಇಲ್ಲ.
ನಮ್ಮ ವಿರೋಧಿಗಳು ಬೇಕಂತಲೇ ಕೆಟ್ಟ ರೇಟಿಂಗ್ ಕೊಡುತ್ತಾರೆ ಎಂದು ನ್ಯಾಯಾಲಯದ ಮೊರೆ ಹೋಗುವ ಮುನ್ನ ಇದನ್ನು ನೆನಪಿನಲ್ಲಿಡಬೇಕು. ಚಿತ್ರದ ಮೇಲೆ ಪರಿಣಾಮ ಬೀರುವ ಹಾಗೆ ಸಾವಿರಾರು ನೆಗೆಟಿವ್ ರೇಟಿಂಗ್ ನೀಡಬೇಕೆಂದರೆ ಅಷ್ಟು ಮಂದಿ ಚಿತ್ರವನ್ನು ಬುಕ್ ಮಾಡಿ ಚಿತ್ರವನ್ನು ವೀಕ್ಷಿಸಬೇಕು. ಕೆಟ್ಟ ರೇಟಿಂಗ್ ಕೊಡುವ ಉದ್ದೇಶದಿಂದ ಸಾವಿರಾರು ಮಂದಿ ದುಡ್ಡು ಖರ್ಚು ಮಾಡಿ, ಟಿಕೆಟ್ ಬುಕ್ ಮಾಡಿ, ಸಮಯ ಕೊಟ್ಟು ಚಿತ್ರ ನೋಡುತ್ತಾರೆ ಎಂದರೆ ಅದು ಆರೋಪಕ್ಕೆ ದೂರವಾದ ಮಾತು.

