ಏಪ್ರಿಲ್ 30ರಂದು ನಿರ್ದೇಶಕ ಪ್ರೇಮ್ ಹಾಗೂ ನಟ ಧ್ರುವ ಸರ್ಜಾ ಕಾಂಬಿನೇಶನ್‌ನ ಬಹು ನಿರೀಕ್ಷಿತ ಚಿತ್ರ ಕೆಡಿ ದಿ ಡೆವಿಲ್ ಬಿಡುಗಡೆಯಾಯಿತು. ಬಿಡುಗಡೆಗೂ ಮುನ್ನ ಎರಡು ಹಾಡುಗಳು ಹಾಗೂ ವಿವಾದಗಳಿಂದ ಸದ್ದು ಮಾಡಿದ್ದ ಕೆಡಿ ಬಿಡುಗಡೆಯ ನಂತರ ಯಾವ ರೀತಿ ಸುದ್ದಿ ಮಾಡಲಿದೆ ಎಂಬ ಪ್ರಶ್ನೆ ಎದ್ದಿತ್ತು.
ಇನ್ನು ನಟ ಹಾಗೂ ನಿರ್ದೇಶಕ ಇಬ್ಬರ ಕಳೆದ ಕೆಲ ಚಿತ್ರಗಳು ನಿರೀಕ್ಷೆಯನ್ನು ಮುಟ್ಟುವಲ್ಲಿ ವಿಫಲವಾಗಿದ್ದವು. ಈ ಚಿತ್ರ ಆ ಚಿತ್ರಗಳಿಗಿಂತ ಪರವಾಗಿಲ್ಲ ಎಂಬ ಪ್ರತಿಕ್ರಿಯೆಗಳನ್ನು ಪ್ರೇಕ್ಷಕರಿಂದ ಪಡೆದುಕೊಂಡಿದೆ.
ಚಿತ್ರದಲ್ಲಿ ನಾಯಕ ಧ್ರುವ ಸರ್ಜಾ ಸಹೋದರ ರಮೇಶ್ ಅರವಿಂದ್‌ಗೆ ಒಂದು ನಿರ್ದಿಷ್ಟ ಕಾರಣಕ್ಕೆ ಮಾತು ಬಿಡುವ ಮಟ್ಟಕ್ಕೆ ಕಡೆಗಣಿಸ್ಪಟ್ಟಿರುತ್ತಾನೆ. ಅಣ್ಣ ತನ್ನನ್ನು ಯಾವಾಗ ತಮ್ಮನೆಂದು ಪ್ರೀತಿಯಿಂದ ಮಾತನಾಡಿಸುತ್ತಾನೋ ಎಂದು ಕಾತರತೆಯಿಂದ ಕಾಯುವ ನಾಯಕ ಹೇಗೆ ರೌಡಿಸಂಗೆ ಇಳಿಯುತ್ತಾನೆ, ಅದರಿಂದ ಆತನ ಕುಟುಂಬದ ಮೇಲೆ ಬೀಳುವ ಪರಿಣಾಮವೇನು, ಇದರಿಂದ ತನ್ನ ಅಣ್ಣ ಸರಿ ಹೋಗ್ತಾನಾ ಎಂಬುದೇ ಚಿತ್ರದ ಕಥೆ. ಕ್ಲೈಮ್ಯಾಕ್ಸ್‌ನಲ್ಲಿ ಬರುವ ಟ್ವಿಸ್ಟ್ ಪ್ರೇಕ್ಷಕರಿಗೆ ಸಖತ್ ಕಿಕ್ ಕೊಟ್ಟಿದೆ. ಮೊದಲಾರ್ಧದಲ್ಲಿ ನಟಿಯ ಲವ್‌ಟ್ರ್ಯಾಕ್ ಪ್ರೇಕ್ಷಕರ ತಾಳ್ಮೆ ಪರೀಕ್ಷೆ ಮಾಡುವುದನ್ನು ಬಿಟ್ಟರೆ ಉಳಿದ ಅಂಶಗಳು ನೋಡುವ ಹಾಗಿದ್ದು, ದ್ವಿತೀಯಾರ್ಧದಲ್ಲಿ ಅಸಲಿ ಕಥೆಯಿದೆ.
ಒಟ್ಟಿನಲ್ಲಿ ಚಿತ್ರ ಮಿಶ್ರ ಪ್ರತಿಕ್ರಿಯೆಯನ್ನು ಪಡೆದುಕೊಂಡಿದ್ದು, ಬಾಕ್ಸ್ ಆಫೀಸ್‌ನಲ್ಲಿ ಒಳ್ಳೆಯ ಓಪನಿಂಗ್ ಪಡೆದುಕೊಂಡಿದೆ. ಚಿತ್ರದ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ ಚಿತ್ರದ ಗಳಿಕೆ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳದೇ ಇದ್ದು, ಜನಪ್ರಿಯ ಬಾಕ್ಸ್ ಆಫೀಸ್ ಟ್ರ್ಯಾಕಿಂಗ್ ವೆಬ್‌ಸೈಟ್ ಸ್ಯಾಕ್‌ನಿಕ್ ಗಳಿಕೆ ಕುರಿತು ವರದಿಯನ್ನು ಬಿಚ್ಚಿಟ್ಟಿದೆ.
ಇದರ ಪ್ರಕಾರ ಬಿಡುಗಡೆ ದಿನ 4.10 ಕೋಟಿ ಗಳಿಕೆ ಮಾಡಿದ್ದ ಕೆಡಿ ಎರಡನೇ ದಿನ ಕಾರ್ಮಿಕರ ದಿನಾಚರಣೆ ರಜಾ ದಿನವೂ ಸಹ 4.10 ಕೋಟಿ ರೂಪಾಯಿಗಳನ್ನು ಗಳಿಸಿದೆ. ಈ ಮೂಲಕ ಮೊದಲ ಎರಡು ದಿನಗಳಲ್ಲಿ 8.20 ಕೋಟಿ ರೂಪಾಯಿಗಳನ್ನು ಗಳಿಸಿದೆ.

