ಬೆಂಗಳೂರು: ಧ್ರುವ ಸರ್ಜಾ ಅಭಿನಯದ ಪ್ರೇಮ್ ನಿರ್ದೇಶನದ ಕೆಡಿ: ದಿ ಡೆವಿಲ್’ ಸಿನಿಮಾದ ಹಾಡೊಂದು ಇತ್ತೀಚೆಗಷ್ಟೆ ಬಿಡುಗಡೆಯಾಗಿದ್ದು, ಹಾಡಿನ ಸಾಹಿತ್ಯ ಹಾಗೂ ಅಶ್ಲೀಲ ದೃಶ್ಯಗಳು ತೀವ್ರ ವಿವಾಅದಕ್ಕೆ ಕಾರಣವಾಗಿದೆ.
ನೋರಾ ಫತೇಹಿ ನಟಿಸಿರುವ ಹಾಡನ್ನು ಅದ್ಧೂರಿಯಾಗಿ ಚಿತ್ರತಂಡೆ ಬಿಡುಗಡೆ ಮಾಡಿತ್ತು. ಹಾಡು ಕನ್ನಡದಲ್ಲಿ ಮಾತ್ರವೇ ಅಲ್ಲದೆ, ಹಿಂದಿ, ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ಏಕಕಾಲಕ್ಕೆ ಯೂಟ್ಯೂಬ್ನಲ್ಲಿ ರಿಲೀಸ್ ಆಗಿತ್ತು. ಆದರೆ ಈ ಹಾಡು ವಿವಾದಕ್ಕೆ ಕಾರಣವಾಗಿದೆ. ಕನ್ನಡದಲ್ಲಿ ‘ಸರ್ಸೆ ಸೆರಗ ಸರ್ಸೆ’ ಎಂದಿರುವ ಈ ಹಾಡು ಹಿಂದಿಯಲ್ಲಿ ‘ಸರ್ಕೆ ಚುನರ್’ ಎಂದಿದೆ. ಆದರೆ ಈ ಹಾಡಿನ ಸಾಹಿತ್ಯ ತೀವ್ರ ಟೀಕೆಗೆ ಗುರಿ ಆಗಿದ್ದು, ಹಾಡಿನ ವಿರುದ್ಧ ಹಾಗೂ ನಿರ್ದೇಶಕ ಪ್ರೇಮ್ ವಿರುದ್ಧ ದೆಹಲಿ, ಮುಂಬೈನಲ್ಲಿ ದೂರುಗಳು ದಾಖಲಾಗಿವೆ.
ನೋರಾ ಫತೇಹಿ ಮತ್ತು ಸಂಜಯ್ ದತ್ ಅಭಿನಯದ ಈ ಐಟಂ ಸಾಂಗ್ ಬಿಡುಗಡೆಯಾಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಹಾಡಿನಲ್ಲಿರುವ ನೋರಾ ಫತೇಹಿ ಅವರ ನೃತ್ಯದ ಭಂಗಿಗಳು ‘ಅತಿರೇಕದ ಅಶ್ಲೀಲತೆ’ಯಿಂದ ಕೂಡಿವೆ. ಅದರಲ್ಲೂ ಹಾಡಿನ ಸಾಹಿತ್ಯವಂತೂ ತೀರ ಅಶ್ಲೀಲವಾಗಿದೆ ಎನ್ನಲಾಗುತ್ತಿದೆ. ವಿಶೇಷವಾಗಿ ಹಿಂದಿ ಹಾಡಿನ ಸಾಹಿತ್ಯದ ಬಗ್ಗೆ ತೀವ್ರ ಟೀಕೆಗಳು ವ್ಯಕ್ತವಾಗಿದ್ದು, ಇದೀಗ ದೆಹಲಿಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ.
ದೆಹಲಿಯ ವಕೀಲ ವಿನೀತ್ ಜಿಂದಾಲ್ ಎಂಬುವರು ಹಾಡಿನ ವಿರುದ್ಧ ಸಿಬಿಎಫ್ಸಿಗೆ ದೂರು ನೀಡಿದ್ದು, ಈ ಕೂಡಲೇ ಹಾಡನ್ನು ತೆಗೆಸಬೇಕು ಎಂದು ಮನವಿ ಮಾಡಿದ್ದಾರೆ. ವಕೀಲ ವಿನೀತ್ ಅವರು ದೆಹಲಿ ಸೈಬರ್ ಪೊಲೀಸರಿಗೂ ಸಹ ದೂರು ನೀಡಿದ್ದು, ಈ ಹಾಡಿನ ಸಾಹಿತ್ಯ ಬರೆದವರು, ಸಂಗೀತ ನಿರ್ದೇಶಕ, ಸಿನಿಮಾ ನಿರ್ದೇಶಕ ಮತ್ತು ನಿರ್ಮಾಪಕರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 294 (ಮಹಿಳೆಯ ಮಾನಕ್ಕೆ ಧಕ್ಕೆ) ಮತ್ತು ಪೋಕ್ಸೊ ಕಾಯ್ದೆಯ ಅಡಿ ಕೇಸು ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇನ್ನು ಮುಂಬೈನ ವರ್ಲಿ ಪೊಲೀಸ್ ಠಾಣೆಯಲ್ಲಿಯೂ ಸಹ ಈ ಬಗ್ಗೆ ದೂರು ದಾಖಲಾಗಿದೆ. ಕೆಲವು ಗಾಯಕರು ಸಹ ಈ ಹಾಡಿನ ಸಾಹಿತ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿಯೂ ಸಹ ಹಾಡಿನ ಅಶ್ಲೀಲ ಸಾಹಿತ್ಯದ ಬಗ್ಗೆ ವಿರೋಧ ವ್ಯಕ್ತವಾಗಿದೆ. ಇದರ ಗಂಭೀರತೆಯನ್ನು ಪರಿಗಣಿಸಿದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಚಿತ್ರತಂಡಕ್ಕೆ ನೋಟಿಸ್ ಜಾರಿ ಮಾಡಿದೆ. ಮಹಿಳೆಯರ ಘನತೆಗೆ ಧಕ್ಕೆ ತರುವಂತಹ ದೃಶ್ಯಗಳನ್ನು ಪ್ರದರ್ಶಿಸಿರುವುದನ್ನು ಆಯೋಗವು ಆಕ್ಷೇಪಿಸಿದೆ.

