ಹನೂರು: ಕಾವೇರಿ ವನ್ಯಜೀವಿಧಾಮದಲ್ಲಿ ಸ್ವಾತಂತ್ರ್ಯ ದಿನಾಚರಣೆ ದಿನದಂದು ಅರಣ್ಯ ಇಲಾಖೆ ಸಿಬ್ಬಂದಿ ಗುಂಡು ಹಾರಿಸಿ ಮೂವರನ್ನು ಹತ್ಯೆಗೈದಿತ್ತು. ಈ ಪ್ರಕರಣ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿಗಳು ಗುಂಡೇಟಿಗೆ ಬಲಿಯಾದ ಮೂವರು ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದರು ಎಂಬ ಕಾರಣವವನ್ನು ನೀಡಿದರು.
ಅಲ್ಲದೇ ಅವರನ್ನು ಸೆರೆಹಿಡಿಯಲು ಮುಂದಾದಾಗ ನಾಲ್ವರ ಗುಂಪು ತಮ್ಮ ವಿರುದ್ಧ ಗುಂಡಿನ ದಾಳಿ ನಡೆಸಿ ತಪ್ಪಿಸಿಕೊಳ್ಳುವ ಯತ್ನ ನಡೆಸಿತು. ಈ ಸಂದರ್ಭದಲ್ಲಿ ಅತ್ಮ ರಕ್ಷಣೆಗಾಗಿ ತಾವು ಗುಂಡು ಹಾರಿಸಿದ್ದು, ಮೂವರು ಮೃತಪಟ್ಟಿದ್ದು, ಓರ್ವ ಪರಾರಿಯಾದ ಎಂದು ತಿಳಿಸಿದೆ.
ಹೀಗೆ ಅರಣ್ಯ ಇಲಾಖೆ ಸಿಬ್ಬಂದಿಗಳು ತಾವು ನಡೆಸಿದ ಹತ್ಯೆಗೆ ನೀಡಿದ ಕಾರಣವನ್ನು ಕೇಳಿದ ಪ್ರತಿಯೊಬ್ಬರಿಗೂ ಅನುಮಾನ ಶುರುವಾಗಿತ್ತು. ಅದರಲ್ಲೂ ಮೃತರ ಸಂಬಂಧಿಗಳು ಹಾಗೂ ಗ್ರಾಮಸ್ಥರು ಮೊದಲಿಗೆ ಮೃತಪಟ್ಟವರು ಬೇಟೆಗಾರರೇ ಅಲ್ಲ, ಅವರು ಕಾಣೆಯಾದ ಹಸುಗಳನ್ನು ಹುಡುಕಲು ತೆರಳಿದ್ದವರು, ಇದು ಅರಣ್ಯ ಇಲಾಖೆ ಮಾಡಿದ ಕೊಲೆ ಎಂದು ಪ್ರತಿಭಟಿಸಿದರು. ಅಲ್ಲದೇ ಒಂದುವೇಳೆ ಬೇಟೆಯನ್ನೇ ಆಡಿದ್ದರೂ, ದಾಳಿ ನಡೆಸಿದ್ದರೂ ನಿಯಮದ ಪ್ರಕಾರ, ಸಿಬ್ಬಂದಿಗಳಿಗೆ ನೀಡಿದ ತರಬೇತಿ ಪ್ರಕಾರ ಅವರು ಕಾಲಿಗೆ ಗುಂಡು ಹಾರಿಸಬೇಕಿತ್ತೇ ಹೊರತು ಸಾಯುವ ಮಟ್ಟಕ್ಕೆ ಅಲ್ಲ ಎಂದು ವಾದಿಸಿದರು.
ಈ ಮಾತು ಕೇವಲ ಗ್ರಾಮಸ್ಥರ ಬಾಯಿಂದ ಮಾತ್ರವಲ್ಲ, ಪ್ರಕರಣದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡ ಹಲವರದ್ದು. ಹೀಗೆ ತಮ್ಮ ಇಲಾಖೆ ವಿರುದ್ಧ ಅನುಮಾನಗಳು ವ್ಯಕ್ತವಾಗುತ್ತಿದ್ದಂತೆ ಮೃತರ ಬಳಿ ಇದ್ದವು ಎನ್ನಲಾದ ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಫೋಟೊವನ್ನು ಬಿಡುಗಡೆ ಮಾಡಿತು. ಈ ಫೋಟೊದಲ್ಲಿದ್ದ ಬ್ಯಾಗ್, ಚೂರಿ, ಮೊಬೈಲ್, ದುಡ್ಡು ಎಲ್ಲವೂ ನಂಬುವಂತೆ ಇದ್ದವಾದರೂ ಜತೆಗಿದ್ದ ಚಪ್ಪಲಿ ಮಾತ್ರ ಅರಣ್ಯ ಇಲಾಖೆ ಮೇಲೆ ಜನರಲ್ಲಿದ್ದ ಅನುಮಾನ ದುಪ್ಪಟ್ಟಾಗುವಂತೆ ಮಾಡಿದವು. ಕಾರಣ ಅಲ್ಲಿದ್ದದ್ದು ಹೊಚ್ಚ ಹೊಸ ಪ್ಯಾರಗಾನ್ ಚಪ್ಪಲಿ.
ಅರಣ್ಯ ಇಲಾಖೆ ಶೂಟ್‌ಔಟ್ ನಡೆಸಿದ ಸ್ಥಳ ದಟ್ಟ ಅರಣ್ಯದಿಂದ ಕೂಡಿದ ಸ್ಥಳ. ಮೇಕೆದಾಟು ಸಮೀಪವಿರುವ ಈ ಕಾಡಿನಲ್ಲಿ ಹತ್ತು ಮೀಟರ್ ನಡೆದರೂ ಅಪಾರವಾದ ಮಣ್ಣು ಪಾದರಕ್ಷೆಗಳಿಗೆ ಅಂಟಿಕೊಳ್ಳಲಿದೆ. ಅಂಥದ್ದರಲ್ಲಿ ಹೊಸ ಚಪ್ಪಲಿ ಅದೂ ಸಹ ಕೊಳೆಯಾಗದೇ ಇರಲು ಹೇಗೆ ಸಾಧ್ಯ? ಇದು ಅರಣ್ಯ ಇಲಾಖೆಯ ಸೃಷ್ಟಿ ಎಂದು ಹಲವಾರು ಕಾಮೆಂಟ್‌ಗಳು ಹರಿದುಬಂದವು.
ಈ ಕಾಮೆಂಟ್‌ಗಳಿಗೆ ಅರಣ್ಯ ಇಲಾಖೆಯ ಎಸಿಎಫ್ ಮರಿಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ತಮ್ಮ ಸಿಬ್ಬಂದಿ ಈ ಚಪ್ಪಲಿಗಳನ್ನು ತೆಗೆದುಕೊಂಡು ಹೋಗಿ ಇಟ್ಟಿಲ್ಲ, ಘಟನೆ ನಡೆದ ಸ್ಥಳದಲ್ಲಿ ನಾಲ್ಕು ಚಪ್ಪಲಿಗಳು ಸಿಕ್ಕಿದ್ದು, ಒಂದುವೇಳೆ ಮಾರ್ಗದಲ್ಲಿ ಚಪ್ಪಲಿ ಕಿತ್ತುಹೋದರೆ ಬೇಕಾಗಬಹುದು ಎಂದು ಮೃತರು ಹೊಸ ಚಪ್ಪಲಿಯನ್ನು ತಂದಿರಬಹುದು ಎಂದು ತಿಳಿಸಿದ್ದಾರೆ.

