HomeKarnatakaಕಸ್ತೂರಿ ರಂಗನ್ ವರದಿ: ಕೇಂದ್ರ ಸರ್ಕಾರ ಪದೇ ಪದೇ ಕರಡು ಅಧಿಸೂಚನೆ ಹೊರಡಿಸುತ್ತಿರುವುದೇಕೆ? ಮಲೆನಾಡಿನ ಜನರ...

ಕಸ್ತೂರಿ ರಂಗನ್ ವರದಿ: ಕೇಂದ್ರ ಸರ್ಕಾರ ಪದೇ ಪದೇ ಕರಡು ಅಧಿಸೂಚನೆ ಹೊರಡಿಸುತ್ತಿರುವುದೇಕೆ? ಮಲೆನಾಡಿನ ಜನರ ಬದುಕಿಗೆ ಧಕ್ಕೆ ತರುವ ಕ್ರಮಕ್ಕೆ ಅವಕಾಶ ನೀಡಲ್ಲ: ಸಚಿವ ಮಧು ಬಂಗಾರಪ್ಪ

ಶಿವಮೊಗ್ಗ: ಕಸ್ತೂರಿ ರಂಗನ್ ವರದಿ ಜಾರಿ ವಿಚಾರದಲ್ಲಿ ರಾಜ್ಯದ ಬಿಜೆಪಿ ನಾಯಕರು ಇಂದು ದೊಡ್ಡ ದೊಡ್ಡ ಮಾತುಗಳನ್ನು ಆಡುತ್ತಿದ್ದಾರೆ. ಮಲೆನಾಡಿನ ರೈತರ ಪರವಾಗಿ ನಾವಿದ್ದೇವೆ ಎಂದು ಹೇಳುತ್ತಿದ್ದಾರೆ. ಹಾಗಾದರೆ ಕೇಂದ್ರ ಸರ್ಕಾರ ಒಂದರ ನಂತರ ಒಂದರಂತೆ ಈ ವರದಿಯ ಜಾರಿಗೆ ಸಂಬಂಧಿಸಿದ ಕರಡು ಅಧಿಸೂಚನೆ ಹೊರಡಿಸುತ್ತಿರುವುದಾದರೂ ಏಕೆ? ಈ ವಿಷಯದಲ್ಲಿ ಅವರ ಪಕ್ಷವೇ ಕೇಂದ್ರದಲ್ಲಿ ಅಧಿಕಾರದಲ್ಲಿರುವುದರಿಂದ ಕೇಂದ್ರ ಸರ್ಕಾರದ ನಿಲುವೇನು ಎಂದು ಮೊದಲು ಸ್ಪಷ್ಟಪಡಿಸಲಿ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಸವಾಲೊಡ್ಡಿದ್ದಾರೆ.

ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಪಶ್ಚಿಮ ಘಟ್ಟ ನಮ್ಮ ಹೆಮ್ಮೆ. ನಮ್ಮ ಸಂಪತ್ತು. ಅದನ್ನು ರಕ್ಷಿಸಬೇಕೆಂಬುದರಲ್ಲಿ ಎರಡನೇ ಮಾತಿಲ್ಲ. ಆದರೆ ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಪರಿಸರದೊಂದಿಗೆ ಬದುಕುತ್ತಿರುವ ಮಲೆನಾಡಿನ ಜನರನ್ನೇ ಸಂಕಷ್ಟಕ್ಕೆ ಸಿಲುಕಿಸುವ ಯಾವುದೇ ಕ್ರಮವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಬಿಜೆಪಿ ನಾಯಕರು ನಾವು ಮಲೆನಾಡಿನ ರೈತರ ಪರವಾಗಿ ಮಾತನಾಡುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಕಸ್ತೂರಿ ರಂಗನ್‌ ವರದಿ ವಿರೋಧಿಸಿ ಪಾದಯಾತ್ರೆ, ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ ಈ ವರದಿಯ ಜಾರಿಗೆ ನೀವು ಏಕೆ ಕರಡು ಅಧಿಸೂಚನೆ ಹೊರಡಿಸುತ್ತಿದ್ದೀರಿ ಎಂದು ಪಕ್ಷದ ಕೇಂದ್ರ ನಾಯಕರನ್ನು ಪ್ರಶ್ನಿಸುವ ಧೈರ್ಯ ಅವರಿಗಿಲ್ಲ ಎಂದು ಕಿಡಿಕಾರಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

2014ರ ಆಗಸ್ಟ್ 27ರಂದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಸ್ತೂರಿ ರಂಗನ್‌ ವರದಿಯನ್ನು ಜಾರಿಗೆ ತರುತ್ತೇವೆ ಎಂದು ಸುಪ್ರೀಂ ಕೋರ್ಟ್‌ನ ಹಸಿರು ನ್ಯಾಯಾಧಿಕರಣಕ್ಕೆ ಅಫಿಡವಿಟ್ ಸಲ್ಲಿಸಿದ್ದು ಏಕೆ? ಇಂದು ಮಲೆನಾಡಿನ ಜನರ ಮುಂದೆ ಮೊಸಳೆ ಕಣ್ಣೀರು ಹಾಕುವವರು ಅಂದು ಏಕೆ ಮಾತನಾಡಲಿಲ್ಲ ಎಂದು ಪ್ರಶ್ನಿಸಿದ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಶ್ರೀ ಮಧು ಬಂಗಾರಪ್ಪ, ಕಸ್ತೂರಿ ರಂಗನ್ ವರದಿಯ ಕರಡು ಅಧಿಸೂಚನೆಯನ್ನು ನಾವು ಆರು ಬಾರಿಯೂ ಸ್ಪಷ್ಟವಾಗಿ ತಿರಸ್ಕರಿಸಿದ್ದೇವೆ. ರಾಜ್ಯ ವಿಧಾನಸಭೆಯಲ್ಲಿಯೂ ವರದಿಯನ್ನು ತಿರಸ್ಕರಿಸುವ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ. ಹೀಗಿದ್ದರೂ ಕೇಂದ್ರದ ಬಿಜೆಪಿ ಸರ್ಕಾರ ಮತ್ತೆ ಮತ್ತೆ ಕರಡು ಅಧಿಸೂಚನೆಗಳನ್ನು ಹೊರಡಿಸುತ್ತಿದೆ. ಇದೀಗ ಏಳನೇ ಬಾರಿಗೆ ಕರಡು ಅಧಿಸೂಚನೆ ಹೊರಡಿಸಿರುವುದು ಯಾವ ನ್ಯಾಯ ಎಂದು ಕೇಳಿದರು.

ಕೇಂದ್ರ ಸರ್ಕಾರದ ಈ ಕ್ರಮವನ್ನು ರಾಜ್ಯ ಸರ್ಕಾರ ಸ್ಪಷ್ಟವಾಗಿ ವಿರೋಧಿಸಿದೆ. ಈ ಸಂಬಂಧ ಚರ್ಚಿಸಲೆಂದೇ ವಿಶೇಷ ಅಧಿವೇಶನ ಕರೆಯುವ ತೀರ್ಮಾನವನ್ನು ಮಾನ್ಯ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತೆಗೆದುಕೊಂಡಿದ್ದಾರೆ. ಯಾವ ಕಾರಣಕ್ಕೂ ಈ ವರದಿ ಜಾರಿಗೆ ಅವಕಾಶ ನೀಡಬಾರದು, ಬಿಜೆಪಿಯವರು, ಕೇಂದ್ರ ಸರ್ಕಾರದವರು ಏನು ಬೇಕಾದರೂ ಮಾಡಿಕೊಳ್ಳಲಿ, ಇದಕ್ಕೆ ನಾವೇ ಬೇಕಾದರೂ ನ್ಯಾಯಾಲಯಕ್ಕೆ ಹೋಗಿ ಮಲೆನಾಡಿನ ಜನರನ್ನು ರಕ್ಷಿಸೋಣ ಎಂದು ಅವರು ಹೇಳಿದ್ದಾರೆ ಎಂದರು

ಸಂಸದರು ಸಭೆಗೆ ಹೋಗದೇ ಏನು ಮಾಡುತ್ತಿದ್ದರು?

ಕಸ್ತೂರಿ ರಂಗನ್ ವರದಿ ಕುರಿತು 2016ರ ಆಗಸ್ಟ್ 11ರಂದು ಕೇಂದ್ರ ಸರ್ಕಾರ ಕರೆದಿದ್ದ ಮಹತ್ವದ ಸಭೆಗೆ ಶಿವಮೊಗ್ಗದ ಸಂಸದ ಬಿ.ವೈ. ರಾಘವೇಂದ್ರ ಹಾಗೂ ಅಂದಿನ ಉಡುಪಿ-ಚಿಕ್ಕಮಗಳೂರು ಸಂಸದೆಯಾಗಿದ್ದ ಶೋಭಾ ಕರಂದ್ಲಾಜೆ ಅವರು ಭಾಗವಹಿಸದೇ ಇದ್ದಿದ್ದನ್ನು ಮಧು ಬಂಗಾರಪ್ಪ ಪ್ರಶ್ನಿಸಿದರು.

ಮಲೆನಾಡಿನ ಎರಡು ಪ್ರಮುಖ ಜಿಲ್ಲೆಗಳ ಜನರ ಬದುಕಿನ ಮೇಲೆ ಪರಿಣಾಮ ಬೀರುವ ಇಂತಹ ಮಹತ್ವದ ವಿಚಾರದ ಸಭೆಗೆ ಸಂಸದರು ಹಾಜರಾಗದೇ ಇದ್ದರೆ ಹೇಗೆ? ಅವರಿಗೆ ಅಂದು ಬೇರೆ ಮಹತ್ವದ ಕೆಲಸ ಏನಿತ್ತು? ಇವರು ಸಭೆಗೆ ಹೋಗದೆ ಬೇಜವಾಬ್ದಾರಿಯಿಂದ ನಡೆದುಕೊಂಡರೆ, ಮಲೆನಾಡಿನ ಜನರ ಸಮಸ್ಯೆಯನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರುವವರಾದರೂ ಯಾರು ಎಂದು ಕೇಳಿದರು.

ಇಂದು ರೈತರ ಪರವಾಗಿ ಡೋಂಗಿ ಮಾತನಾಡುವವರು ಅಂದು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದ್ದರೇ? ಜನರ ಸಮಸ್ಯೆ ಬಂದಾಗ ಮೌನವಾಗಿದ್ದು, ಚುನಾವಣೆ ಬಂದಾಗ ಮಾತ್ರ ರೈತರ ಪರವಾಗಿ ಮಾತನಾಡುವುದು ಸರಿಯಲ್ಲ ಎಂದು ಟೀಕಿಸಿದರು.

ಮೊದಲ ಆರು ಅಧಿಸೂಚನೆಗಳಲ್ಲಿ ತೀರ್ಥಹಳ್ಳಿ ತಾಲ್ಲೂಕಿನ 139 ಗ್ರಾಮಗಳ ಪಟ್ಟಿಯನ್ನು ಪ್ರಸ್ತಾಪಿಸಲಾಗಿತ್ತು. ಇದನ್ನು ತೀರ್ಥಹಳ್ಳಿಯ ಜನರು ಹಾಗೂ ಕರ್ನಾಟಕ ಸರ್ಕಾರ ವಿರೋಧಿಸಿತ್ತು. ಆದರೆ ಇದೀಗ ಅಂತಿಮ ಅಧಿಸೂಚನೆಯ ಹೆಸರಿನಲ್ಲಿ ತೀರ್ಥಹಳ್ಳಿ ತಾಲ್ಲೂಕಿನ ಗ್ರಾಮಗಳ ಸಂಖ್ಯೆಯನ್ನು 154ಕ್ಕೆ ಹೆಚ್ಚಿಸುವ ಪ್ರಯತ್ನ ನಡೆದಿದೆ. ಈ ಬಗ್ಗೆ ಸ್ಥಳೀಯ ಶಾಸಕ ಆರಗ ಜ್ಞಾನೇಂದ್ರ ಅವರು ಏನು ಹೇಳುತ್ತಾರೆ ಎಂಬ ಕುತೂಹಲವಿದೆ ಎಂದರು.

ನಮ್ಮ ಮಲೆನಾಡಿನ ನೆಲ, ಕೃಷಿ, ಬದುಕು ಮತ್ತು ನಮ್ಮ ಭವಿಷ್ಯವನ್ನು ರಕ್ಷಿಸಿಕೊಳ್ಳುವ ಸಂಕಲ್ಪಮಾಡಿ, ಕಸ್ತೂರಿ ರಂಗನ್‌ ವರದಿ ಜಾರಿಯ ವಿರುದ್ಧ ನಾವು ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದಿದ್ದು, ಈ ಸಂಬಂಧ ಈಗ ತೀರ್ಥಹಳ್ಳಿಯಲ್ಲಿ ಪಾದಯಾತ್ರೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಪಶ್ಚಿಮ ಘಟ್ಟದಲ್ಲಿ ಸಾವಿರಾರು ವರ್ಷಗಳಿಂದ ಜನರು ಬದುಕುತ್ತಿದ್ದಾರೆ. ಅವರು ಕೃಷಿ ಮಾಡುತ್ತಿದ್ದಾರೆ. ಅಡಿಕೆ, ಭತ್ತ, ಕಾಫಿ, ಮೆಣಸು ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಅವರ ಬದುಕು ಮತ್ತು ಪರಿಸರ ಪರಸ್ಪರ ವಿರೋಧಿಗಳಲ್ಲ. ಮಲೆನಾಡಿನ ಜನರು ಪ್ರಕೃತಿಯ ಶತ್ರುಗಳಲ್ಲ; ಅವರೇ ಪ್ರಕೃತಿಯೊಂದಿಗೆ ಬದುಕುತ್ತಿರುವವರು ಎಂದು ಸಚಿವರು ಹೇಳಿದರು.

ಉಪಗ್ರಹ ಆಧಾರಿತ ನೈಸರ್ಗಿಕ ಭೂದೃಶ್ಯ ಹಾಗೂ ಸಾಂಸ್ಕೃತಿಕ ಭೂದೃಶ್ಯದ ಆಧಾರದ ಮೇಲೆ ಪ್ರದೇಶಗಳನ್ನು ಗುರುತಿಸುವಾಗ ಅಲ್ಲಿನ ಜನರ ಬದುಕು, ಕೃಷಿ ಹಾಗೂ ಜೀವನ ವಿಧಾನವನ್ನು ಸಮರ್ಪಕವಾಗಿ ಪರಿಗಣಿಸಲಾಗಿದೆಯೇ ಎಂಬ ಪ್ರಶ್ನೆ ಇದೆ. ಯಾವುದೇ ಸಮಿತಿ ಗ್ರಾಮಗಳಿಗೆ ತೆರಳಿ ಜನರ ಅಭಿಪ್ರಾಯ ಪಡೆದಿರುವ ಮಾಹಿತಿ ಇಲ್ಲ. ಕನಿಷ್ಠ ತಾಲ್ಲೂಕು ಕೇಂದ್ರಗಳಿಗೆ ಭೇಟಿ ನೀಡಿ ಸ್ಥಳೀಯ ವಾಸ್ತವಾಂಶಗಳನ್ನು ಪರಿಶೀಲಿಸಲಾಗಿದೆಯೇ ಎಂಬುದೂ ಸ್ಪಷ್ಟವಾಗಿಲ್ಲ. ಕಚೇರಿಯಲ್ಲಿ ಕುಳಿತು ನಕ್ಷೆ ನೋಡಿ ಮಲೆನಾಡಿನ ಬದುಕನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಹಿಂದೆ ನಮ್ಮ ತಂದೆ ಬಂಗಾರಪ್ಪ ಅವರು ಕಾವೇರಿ ನೀರು ವಿಚಾರವಾಗಿ ವಿಶೇಷ ಅಧಿವೇಶನ ಕರೆದಿದ್ದರು. ಇಂದು ನಾನು ಬಂಗಾರಪ್ಪ ಅವರ ಶಿಷ್ಯ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅವರದ್ದೇ ಹಾದಿಯಲ್ಲಿ ನಡೆದು ಕಸ್ತೂರಿ ರಂಗನ್ ವಿಚಾರವಾಗಿ ವಿಶೇಷ ಅಧಿವೇಶನ ಕರೆದಿದ್ದಾರೆ. ಇದಕ್ಕಾಗಿ ಮುಖ್ಯಮಂತ್ರಿಗಳಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular