HomeKarnatakaಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಭಾರತದ ಮೊದಲ ಸ್ವಾತಂತ್ರ್ಯ ಗ್ರಾಮ ಈಸೂರಿನಿಂದ ಪಾದಯಾತ್ರೆ

ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಭಾರತದ ಮೊದಲ ಸ್ವಾತಂತ್ರ್ಯ ಗ್ರಾಮ ಈಸೂರಿನಿಂದ ಪಾದಯಾತ್ರೆ

ಕಸ್ತೂರಿ ರಂಗನ್ ವರದಿಯ ಜಾರಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಮಲೆನಾಡಿನ ರೈತರು, ಕೃಷಿ, ಪರಿಸರ ಹಾಗೂ ಜನರ ಬದುಕನ್ನು ರಕ್ಷಿಸುವುದು ನಮ್ಮ ಕಾಂಗ್ರೆಸ್ ಸರ್ಕಾರದ ಪ್ರಮುಖ ಗುರಿಯಾಗಿದೆ ಎಂದು ಶಿವಮೊಗ್ಗ ಜಿಲ್ಲೆಯ ಉಸ್ತುವಾರಿ ಸಚಿವರೂ ಆದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

ಕಸ್ತೂರಿ ರಂಗನ್ ವರದಿ ವಿರೋಧಿಸಿ ಸೆಪ್ಟೆಂಬರ್ 11ರಂದು ಶಿಕಾರಿಪುರದಲ್ಲಿ ಹಮ್ಮಿಕೊಂಡಿರುವ ಬೃಹತ್ ಪಾದಯಾತ್ರೆ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿ, ಈ ಪಾದಯಾತ್ರೆಯ ಕುರಿತು ಮಾಹಿತಿ ನೀಡಿದ್ದಾರೆ.

ಈಸೂರಿನಿಂದ ಪಾದಯಾತ್ರೆ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಭಾರತದ ಮೊದಲ ಸ್ವಾತಂತ್ರ್ಯ ಗ್ರಾಮ ಎಂದು ಘೋಷಿಸಲ್ಪಟ್ಟಿರುವ ಈಸೂರಿನಿಂದ ಸೆಪ್ಟೆಂಬರ್ 11ರಂದು ಬೆಳಿಗ್ಗೆ 9 ಗಂಟೆಗೆ ಪಾದಯಾತ್ರೆ ಆರಂಭವಾಗಲಿದ್ದು, ಶಿಕಾರಿಪುರದವರೆಗೆ ಸಾಗಲಿದೆ. ನಾನೂ ಸಹ ಈ ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದೇನೆ. ಕಾಂಗ್ರೆಸ್ ಕಾರ್ಯಕರ್ತರು ಮಾತ್ರವಲ್ಲದೆ, ಕಸ್ತೂರಿ ರಂಗನ್ ವರದಿ ವಿರುದ್ಧ ಹೋರಾಡುವ ಮನಸ್ಥಿತಿ ಹೊಂದಿರುವ ಎಲ್ಲರೂ ಪಕ್ಷಾತೀತವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಬೇಕು ಎಂದು ಸಚಿವರು ಕರೆ ನೀಡಿದ್ದಾರೆ.

ನಮ್ಮ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು 2013ರಿಂದ 2018ರವರೆಗೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸಿದ್ದರು. ಆದರೂ ಕೇಂದ್ರ ಸರ್ಕಾರ ಪದೇ ಪದೇ ಕರಡು ಅಧಿಸೂಚನೆಗಳನ್ನು ಹೊರಡಿಸುತ್ತಿದ್ದು, ಇದೀಗ ಏಳನೇ ಬಾರಿಗೆ ಕರಡು ಅಧಿಸೂಚನೆ ಹೊರಡಿಸಿರುವುದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದರು.

1,576 ಗ್ರಾಮಗಳ ರೈತರ ಬದುಕಿನ ಮೇಲೆ ಪರಿಣಾಮ

ಕಸ್ತೂರಿ ರಂಗನ್ ವರದಿ ಜಾರಿಯಾದರೆ ಪಶ್ಚಿಮ ಘಟ್ಟ ವ್ಯಾಪ್ತಿಯ 1,576 ಗ್ರಾಮಗಳ ರೈತರ ಬದುಕು ಅತಂತ್ರವಾಗಲಿದೆ. ಶಿವಮೊಗ್ಗ ಜಿಲ್ಲೆಯೊಂದರಲ್ಲೇ 484 ಗ್ರಾಮಗಳ ಜನರ ಬದುಕಿನ ಮೇಲೆ ತೀವ್ರ ಪರಿಣಾಮ ಬೀರಲಿದ್ದು, ಕೃಷಿ ಚಟುವಟಿಕೆಗಳ ಮೇಲೂ ದೊಡ್ಡ ಹೊಡೆತ ಬೀಳಲಿದೆ ಎಂದು ಸಚಿವರು ಆತಂಕ ವ್ಯಕ್ತಪಡಿಸಿದರು.

ಮಲೆನಾಡಿನ ರೈತರು ಪರಿಸರದೊಂದಿಗೆ ಬೆರೆತು ಬದುಕುತ್ತಿದ್ದಾರೆ. ತಲೆತಲಾಂತರಗಳಿಂದ ಕೃಷಿ ಮಾಡಿಕೊಂಡು ಬಂದಿದ್ದಾರೆ. ದೆಹಲಿಯಲ್ಲಿ ಕುಳಿತುಕೊಂಡು ಅಡಕೆ ಮರಗಳನ್ನು ಕಾಡು ಎಂದು ಪರಿಗಣಿಸುವವರಿಗೆ ಮಲೆನಾಡಿನ ವಾಸ್ತವ ಪರಿಸ್ಥಿತಿಯ ಅರಿವಿದೆಯೇ? ರೈತರ ಬದುಕಿನ ಬಗ್ಗೆ ಕೇಂದ್ರ ಸರ್ಕಾರ ಮಾನವೀಯತೆಯನ್ನೇ ಮರೆತಿರುವುದು ದುರದೃಷ್ಟಕರ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಬಂಗಾರಪ್ಪ ಅವರ ಹೋರಾಟದ ಪರಂಪರೆಯಲ್ಲಿ ಮಲೆನಾಡಿನ ಜನರ ಪರ ನಿಲ್ಲುತ್ತೇವೆ

ನಮ್ಮ ತಂದೆ ಹಾಗೂ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರು ಕಾವೇರಿ ನೀರಿನ ವಿಚಾರದಲ್ಲಿ ವಿಶೇಷ ಅಧಿವೇಶನ ಕರೆದು ರಾಜ್ಯದ ಹಿತ ಕಾಪಾಡುವ ದೃಢ ನಿರ್ಧಾರ (ಸುಗ್ರೀವಾಜ್ಞೆ) ಕೈಗೊಂಡಿದ್ದರು. ಅದೇ ಹೋರಾಟದ ಪರಂಪರೆಯಲ್ಲಿ ಇಂದು ಮಲೆನಾಡಿನ ಜನರ ಬದುಕು, ರೈತರ ಹಕ್ಕು ಮತ್ತು ಪರಿಸರದ ರಕ್ಷಣೆಗಾಗಿ ನಾವು ಹೋರಾಟ ಮಾಡುತ್ತಿದ್ದೇವೆ ಎಂದು ಮಧು ಬಂಗಾರಪ್ಪ ಹೇಳಿದರು.

ಕಸ್ತೂರಿ ರಂಗನ್ ವರದಿ ಕುರಿತು ಚರ್ಚಿಸಲು ಮೂರು ದಿನಗಳ ವಿಶೇಷ ಅಧಿವೇಶನ ಕರೆದಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ವಿಶೇಷ ಧನ್ಯವಾದಗಳನ್ನು ತಿಳಿಸುತ್ತಾ. ರಾಜ್ಯದ ಹಿತದ ವಿಚಾರದಲ್ಲಿ ಸರ್ಕಾರ ಗಂಭೀರವಾಗಿ ಸ್ಪಂದಿಸುತ್ತಿರುವುದು ಸ್ವಾಗತಾರ್ಹ ಎಂದರು.

ಬಿಜೆಪಿಯ ನಿಲುವು ಏನು?

ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ಬಿಜೆಪಿಯವರು ತಮ್ಮ ನಿಲುವನ್ನು ಮೊದಲು ಸ್ಪಷ್ಟಪಡಿಸಲಿ.  ತಲೆಬುಡವಿಲ್ಲದೆ ಪಾದಯಾತ್ರೆ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಮಲೆನಾಡಿನ ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ರೈತರ ಬದುಕಿನ ಪರವಾಗಿ ನಿಜವಾದ ಕಾಳಜಿ ಇದ್ದರೆ ಕೇಂದ್ರ ಸರ್ಕಾರದ ಮುಂದೆ ತಮ್ಮ ನಿಲುವನ್ನು ಸ್ಪಷ್ಟಪಡಿಸಲಿ ಎಂದು ಸಚಿವರು ಸವಾಲು ಹಾಕಿದರು.

ಕಾಂಗ್ರೆಸ್ ಪಕ್ಷದ ವತಿಯಿಂದ ಹೋರಾಟವನ್ನು ಹಂತ ಹಂತವಾಗಿ ರೂಪಿಸಲಾಗುತ್ತಿದೆ. ಇತ್ತೀಚೆಗೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರ ನೇತೃತ್ವದಲ್ಲಿ ತೀರ್ಥಹಳ್ಳಿಯಲ್ಲಿ ಬೃಹತ್ ಪಾದಯಾತ್ರೆ ಹಾಗೂ ಪ್ರತಿಭಟನೆ ನಡೆಸಲಾಗಿದೆ. ಇದೀಗ ಸೆಪ್ಟೆಂಬರ್ 11ರಂದು ಶಿಕಾರಿಪುರದಲ್ಲಿ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕಾಡು ಉಳಿಯಬೇಕು, ರೈತರೂ ಉಳಿಯಬೇಕು

ಕಾಡು ಉಳಿಯಬೇಕು, ರೈತರು ಉಳಿಯಬೇಕು, ಪರಿಸರವೂ ಉಳಿಯಬೇಕು ಹಾಗೂ ಮಲೆನಾಡಿನ ಜನರ ಬದುಕೂ ಉಳಿಯಬೇಕು. ಇದೇ ನಮ್ಮ ಕಾಂಗ್ರೆಸ್ ಪಕ್ಷದ ಗುರಿ. ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಮಲೆನಾಡಿನ ರೈತರ ಬದುಕನ್ನು ಅತಂತ್ರಗೊಳಿಸಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

ಶಿಕಾರಿಪುರದಲ್ಲಿ ನಡೆಯಲಿರುವ ಹೋರಾಟವನ್ನು ಯಶಸ್ವಿಗೊಳಿಸಲು ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಬೇಕು. ಮಲೆನಾಡಿನ ನೆಲ, ಜಲ, ಕೃಷಿ, ಪರಿಸರ ಮತ್ತು ರೈತರ ಬದುಕಿನ ರಕ್ಷಣೆಗಾಗಿ ಎಲ್ಲರೂ ಒಗ್ಗಟ್ಟಾಗಿ ಧ್ವನಿ ಎತ್ತುವ ಮೂಲಕ ಕೇಂದ್ರ ಸರ್ಕಾರಕ್ಕೆ ಸ್ಪಷ್ಟ ಸಂದೇಶ ನೀಡಬೇಕು ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular