HomeKarnatakaರೈತರ ಸಮಸ್ಯೆಗಳಿಗೆ ಪರಿಹಾರ ನೀಡಲು ಕಾನೂನು ತಿದ್ದುಪಡಿ: ಸಿಎಂ ಡಿ.ಕೆ. ಶಿವಕುಮಾರ್

ರೈತರ ಸಮಸ್ಯೆಗಳಿಗೆ ಪರಿಹಾರ ನೀಡಲು ಕಾನೂನು ತಿದ್ದುಪಡಿ: ಸಿಎಂ ಡಿ.ಕೆ. ಶಿವಕುಮಾರ್

ಪರಿಸರ ಸೂಕ್ಷ್ಮ ವಲಯ ಸೇರಿದಂತೆ ರೈತರ ಸಮಸ್ಯೆಗಳಿಗೆ ಪರಿಹಾರ ನೀಡಲು, ರಾಜ್ಯದ ಹಿತಕ್ಕಾಗಿ ಅಗತ್ಯವಿರುವ ಕಾನೂನು ತಿದ್ದುಪಡಿ ಮಾಡಲು ನಮ್ಮ ಸರ್ಕಾರ ಕೆಲಸ ಮಾಡಲಿದೆ; ಈ ಕುರಿತು ಅಂತಿಮ ತೀರ್ಮಾನಕ್ಕೆ ಬರುವ ಮುನ್ನ ಜನರ ಅಭಿಪ್ರಾಯ ಸಂಗ್ರಹಿಸಲು ಬಂದಿರುವೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನಲ್ಲಿ ನಡೆದ ಕಸ್ತೂರಿ ರಂಗನ್ ವರದಿ ಕುರಿತ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದ ಪ್ರಮುಖ ಅಂಶಗಳು.

ಕಸ್ತೂರಿ ರಂಗನ್ ವರದಿ ಮತ್ತು ಭೌತಿಕ ಸಮೀಕ್ಷೆ ಕುರಿತು:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

•ಕಸ್ತೂರಿ ರಂಗನ್ ಸಮಿತಿಯು ಉಪಗ್ರಹಗಳ ಮೂಲಕ ಜಿಪಿಎಸ್ ಸಮೀಕ್ಷೆ ಮಾಡಿದ್ದು, ಕಾಫಿ, ಅಡಿಕೆ, ರಬ್ಬರ್ ತೋಟವನ್ನು ಕಾಡು ಎಂದು ಪರಿಗಣಿಸಿದೆ; ಈ ವರದಿಯಿಂದ ಜಿಲ್ಲೆಯಲ್ಲಿ 138 ಹಳ್ಳಿಗಳು ಹಾಗೂ ರಾಜ್ಯದಲ್ಲಿ 1,449 ಹಳ್ಳಿಗಳನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಅಧಿಸೂಚನೆ ಮಾಡಿದ್ದು, ರೈತರು ತೀವ್ರ ಆತಂಕದಲ್ಲಿದ್ದಾರೆ.

• ಕೇರಳದಲ್ಲಿ ಉಮರ್ ಸಮಿತಿ ಎಂಬ ಉನ್ನತ ಮಟ್ಟದ ಅಧಿಕಾರಿ ಸಮಿತಿ ಮೂಲಕ ಭೌತಿಕ ಸಮೀಕ್ಷೆ ನಡೆಸಿ, ನಾಡು-ಕಾಡನ್ನು ಬೇರ್ಪಡಿಸಿ 5,000 ಚ.ಕಿ.ಮೀ ಪ್ರದೇಶವನ್ನು ವರದಿಯಿಂದ ಮುಕ್ತಗೊಳಿಸಲಾಗಿದೆ; ಅದೇ ಮಾದರಿಯಲ್ಲಿ ಉನ್ನತ ಮಟ್ಟದ ಸಮಿತಿ ರಚಿಸುವಂತೆ ರೈತ ಮುಖಂಡರು ಸಲಹೆ ನೀಡಿದ್ದಾರೆ.

• 2022ರಲ್ಲಿ ಸಂಜಯ್ ಕುಮಾರ್ ಎಂಬ ಅಧಿಕಾರಿಯಿಂದ ವರದಿ ನೀಡಲು 2027ರವರೆಗೆ ಕಾಲಾವಕಾಶ ನೀಡಿರುವ ವಿಚಾರ ಗಮನಕ್ಕೆ ಬಂದಿದ್ದು, ಈ ಬಗ್ಗೆ ಕೇಂದ್ರ ಸಚಿವರ ಜೊತೆ ಚರ್ಚಿಸಿ ತೀರ್ಮಾನಿಸಲಾಗುವುದು; ಅಗತ್ಯ ಬಿದ್ದರೆ ಕೇಂದ್ರಕ್ಕೆ ಪ್ರತ್ಯೇಕ ನಿಯೋಗ ಕರೆದೊಯ್ಯಲಾಗುವುದು.

• ಈ ವರದಿಗೆ ಸಂಬಂಧಿಸಿದಂತೆ ಈಗ 7ನೇ ಬಾರಿಗೆ ಅಧಿಸೂಚನೆ ಹೊರಡಿಸಿದ್ದು, ಇದು ಸಾಡೇಸಾತಿಯಂತಾಗಿದೆ; ಮಲೆನಾಡು ಹಾಗೂ ಕರಾವಳಿ ಭಾಗವನ್ನು ವಿಶೇಷ ಕೃಷಿ ವಲಯ ಎಂದು ಘೋಷಿಸಬೇಕು ಮತ್ತು ಮೀಸಲು ಜಲ ಪ್ರಮಾಣ ಘೋಷಣೆ ಮಾಡಬೇಕು ಎಂಬ ಬೇಡಿಕೆಗಳಿದ್ದು, ಈ ಸಮಸ್ಯೆಗಳನ್ನು ನಿವಾರಣೆ ಮಾಡುವ ವಿಶ್ವಾಸವಿದೆ.

ಸರ್ಕಾರದ ಮುಂದಿನ ನಡೆ ಹಾಗೂ ಅಧಿವೇಶನದ ತೀರ್ಮಾನ:

• ಪರಿಸರ ಸೂಕ್ಷ್ಮ ವಲಯ ಸೇರಿದಂತೆ ರೈತರ ಸಮಸ್ಯೆಗಳಿಗೆ ಪರಿಹಾರ ನೀಡಲು, ರಾಜ್ಯದ ಹಿತಕ್ಕಾಗಿ ಅಗತ್ಯವಿರುವ ಕಾನೂನು ತಿದ್ದುಪಡಿ ಮಾಡಲು ನಮ್ಮ ಸರ್ಕಾರ ಕೆಲಸ ಮಾಡಲಿದೆ; ಈ ಕುರಿತು ಅಂತಿಮ ತೀರ್ಮಾನಕ್ಕೆ ಬರುವ ಮುನ್ನ ಜನರ ಅಭಿಪ್ರಾಯ ಸಂಗ್ರಹಿಸಲು ಬಂದಿರುವೆ.

• ವಿರೋಧ ಪಕ್ಷದವರು ಅಧಿವೇಶನದಲ್ಲಿ ಚರ್ಚೆಗೆ ಅವಕಾಶ ನೀಡದ ಕಾರಣ ಶಾಸಕರ ಜೊತೆ ಚರ್ಚಿಸಲಾಗಿದ್ದು, ಕಸ್ತೂರಿ ರಂಗನ್ ವರದಿ ಬಗ್ಗೆ ಪ್ರಸ್ತಾಪವಾದ ಹಿನ್ನೆಲೆಯಲ್ಲಿ ಜನರ ಅಭಿಪ್ರಾಯ ಪಡೆದು ರೈತರ ಬದುಕು ಉಳಿಸಲು ವಿಶೇಷ ಅಧಿವೇಶನ ಕರೆಯಲಾಗಿದೆ.

• ರಾಜ್ಯದಲ್ಲಿ 101 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದ್ದು, ಕೇಂದ್ರದ ಮಾರ್ಗಸೂಚಿಯಂತೆ ಉಳಿದ ಕಡೆ ಅಧ್ಯಯನ ನಡೆಯುತ್ತಿದೆ; ಒಂದೆರಡು ದಿನಗಳಲ್ಲಿ ಮತ್ತೊಂದು ಪಟ್ಟಿ ಬಿಡುಗಡೆಯಾಗಲಿದ್ದು, ವಿಶೇಷ ಅಧಿವೇಶನದಲ್ಲಿ ಬರ ಹಾಗೂ ಕಸ್ತೂರಿ ರಂಗನ್ ವರದಿ ಬಗ್ಗೆ ವಿಸ್ತೃತ ಚರ್ಚೆ ಮಾಡಲಾಗುವುದು.

ಅರಣ್ಯವಾಸಿಗಳ ಹಕ್ಕು ಮತ್ತು ಭೂಮಿ ಒದಗಿಸುವಿಕೆ:

• ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು, ರೈತರಿಗೆ ಯಾವುದೇ ರೀತಿ ತೊಂದರೆ ಕೊಡಬಾರದು ಮತ್ತು ರೈತರು ಈಗಾಗಲೇ ಉಳುಮೆ ಮಾಡುತ್ತಿರುವ ಜಮೀನನ್ನು ಕಾಪಾಡಿಕೊಳ್ಳಬೇಕು; ಆದರೆ ಹೊಸದಾಗಿ ಯಾರೂ ಒತ್ತುವರಿ ಮಾಡಬಾರದು, ಮಾಡಿದರೆ ಅವಕಾಶ ನೀಡುವುದಿಲ್ಲ.

• ನಮ್ಮ ಹಿಂದಿನ ಸರ್ಕಾರಗಳು ಉಳುವವನಿಗೆ ಭೂಮಿ, ಬಗರ್ ಹುಕುಂ ಜಾರಿಗೆ ತಂದಿದ್ದು, ಬಾಕಿ ಇರುವ ಅರ್ಜಿ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುವುದು; ಕಾಫಿ ಲೀಸ್, ಫಾರಂ 57 ವಿಚಾರ ಹಾಗೂ ಅರಣ್ಯ ಹಕ್ಕು ಕಾಯ್ದೆಯಲ್ಲಿ ಎಲ್ಲರಿಗೂ 25 ವರ್ಷ ನಿಗದಿ ಮಾಡಲು ಅಧಿವೇಶನದಲ್ಲಿ ನಿರ್ಣಯ ಕೈಗೊಂಡು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.

ಸ್ಥಳೀಯ ಅಭಿವೃದ್ಧಿ ಹಾಗೂ ಸಚಿವ ಸಂಪುಟ ಸಭೆ:

• ನನ್ನ ಕಷ್ಟಕಾಲದಲ್ಲಿ ಬೆನ್ನಿಗೆ ನಿಂತು, ಅಧಿಕಾರ ಕೊಟ್ಟು ಶಕ್ತಿ ನೀಡಿದ್ದೀರಿ; ದೇವರು ಕೊಟ್ಟಿರುವ ಅವಕಾಶದಲ್ಲಿ ನಿಮ್ಮ ಸೇವೆಗೆ ಸಂಕಲ್ಪ ಮಾಡಿದ್ದೇನೆ.

• ಮುಂದಿನ ದಿನಗಳಲ್ಲಿ ಚಿಕ್ಕಮಗಳೂರು ಹಾಗೂ ಶಿವಮೊಗ್ಗದಲ್ಲಿ ಸಚಿವ ಸಂಪುಟ ಸಭೆ ನಡೆಸಲಾಗುವುದು; ಎಲ್ಲಾ ಸಮಸ್ಯೆಗಳು ಬಗೆಹರಿಯದಿದ್ದರೂ, ಪಿಂಚಣಿ ಹಾಗೂ ನಿವೇಶನ ರಹಿತರ ಸಮಸ್ಯೆ ಸೇರಿದಂತೆ ಅನೇಕ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕವಾಗಿ ಮುಂದಾಗುತ್ತೇವೆ ಎಂದು ಸಿಎಂ ತಿಳಿಸಿದ್ದಾರೆ.

ಬಾಳೆಹೊನ್ನೂರಿನಲ್ಲಿ ಸಿಎಂ ‘ಕಸ್ತೂರಿ ರಂಗನ್ ವರದಿ’ ವಿಚಾರವಾಗಿ ಸಾರ್ವಜನಿಕರೊಂದಿಗೆ ನೇರ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ, ಹಲವು ಮಹತ್ವದ ವಿಷಯಗಳ ಕುರಿತು ಚರ್ಚಿಸಿದರು.

ಈ ಸಂವಾದ ಕಾರ್ಯಕ್ರಮದಲ್ಲಿ ಸಚಿವರಾದ ಕೆ. ಜೆ. ಜಾರ್ಜ್‌, ರಾಮಲಿಂಗಾರೆಡ್ಡಿ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಟಿ. ಡಿ. ರಾಜೇಗೌಡ, ಹೆಚ್. ಡಿ. ತಮ್ಮಯ್ಯ, ನಯನಾ ಮೋಟಮ್ಮ, ಪರಿಷತ್ ಸದಸ್ಯರಾದ ಗಾಯತ್ರಿ ಶಾಂತೇಗೌಡ, ಆರತಿ ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular