ನವದೆಹಲಿ: ದೇಶಾದ್ಯಂತ ರಣ ಬಿಸಿಲ ಝಳ ಹೆಚ್ಚುತ್ತಿದೆ. ಕರ್ನಾಟಕದಲ್ಲಿ ಅದರಲ್ಲಿಯೂ ರಾಜ್ಯ ರಾಜಧಾನಿ ಬೆಂಗಳೂರು, ಕರಾವಳಿ ಜಿಲ್ಲೆಗಳು, ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಬಿಸಿಲ ಝಳ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಜನರು ಹೈರಾಣಾಗುತ್ತಿದ್ದಾರೆ. ಈ ನಡುವೆ ಭಾರತೀಯ ಹವಾಮಾನ ಇಲಾಖೆ ಹೀಟ್ ವೇವ್ ಎಚ್ಚರಿಕೆ ನೀಡಿದೆ.
ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ತಾಪಮಾನ ಇನ್ನಷ್ಟು ಹೆಚ್ಚಳವಾಗಲಿದ್ದು, ಉಷ್ಣ ಅಲೆ ಬೀಸಲಿದೆ. ಮುಂಜಾಗೃತಾ ಕ್ರಮವಾಗಿ ಜನರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಒಂದು ವಾರಗಳ ಕಾಲ ದೇಶಾದ್ಯಂತ ಉಷ್ಣ ಅಲೆ ತೀವ್ರಗೊಳ್ಳಲಿದೆ ಎಂದು ಮುನ್ಸೂಚನೆ ನೀಡಿದೆ.
ದೆಹಲಿ, ಛತ್ತೀಸ್ ಗಢ, ಒಡಿಶಾ, ಪೂರ್ವ ಮಧ್ಯಒರದೇಶ ಉಷ್ಣ ಅಲೆ ಬೀಸಲಿದೆ. ಪಶ್ಚಿಮ ಬಂಗಾಳ, ಜಾರ್ಖಂಡ್, ಗುಜರಾತ್, ಸೌರಾಷ್ಟ್ರ, ಕಚ್ ಸೇರಿದಂತೆ ಹಲವೆಡೆ ಬಿಸಿ ಗಾಳಿ ಮುಂದುವರೆಯಲಿದೆ.
ರಾಯಲಸೀಮಾ, ಆಂಧ್ರ ಕರಾವಳಿ ಭಾಗ ಹಾಗೂ ಕರ್ನಾಟಕದ ಕರಾವಳಿ ಭಾಗ, ತಮಿಳುನಾಡು, ಪುದುಚೆರಿ, ಕಾರೈಕಲ್ ಸೇರಿದಂತೆ ದಕ್ಷಿಣ ಭಾರತದ ಕೆಲ ರಾಜ್ಯಗಳಲ್ಲಿ ಉಷ್ಣ ಅಲೆ ಬೀಸಲಿದೆ. ತಾಪಮಾನ ತೀವ್ರವಾಗಿ ಹೆಚ್ಚಳವಾಗಲಿದೆ.
ಏಪ್ರಿಲ್ 17ರವರೆಗೆ ದೆಹಲಿಯಲ್ಲಿ ಗರಿಷ್ಠ ತಾಪಮಾನ 41 ಡಿಗ್ರಿ ಸೆಲ್ಸಿಯಸ್ ತಲುಪಲಿದೆ. ಏಪ್ರಿಲ್ 18ರಂದು ವಾಯುವ್ಯ ಭಾರತದಲ್ಲಿ ಗರಿಷ್ಠ ತಾಪಮಾನ 4-5ಡಿಗ್ರಿ ಮತ್ತಷ್ಟು ಹೆಚ್ಚಳವಾಗಲಿದೆ. ಒಡಿಶಾ, ಗುಜರಾತ್, ಆಂಧ್ರಪ್ರದೇಶ, ಕರ್ನಾಟಕ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಸೇರಿದಂತೆ ದಕ್ಷಿಒಣದ ರಾಜ್ಯಗಳಲ್ಲಿ ಮುಂದಿನ ಏಳುದಿನಗಳ ಕಾಲ ಬಿಸಿ ವಾತಾವರಣ ಇರಲಿದೆ.
ಈಶಾನ್ಯ ಭಾರತದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಅಸ್ಸಾಂ, ಮೇಘಾಲಯದಲ್ಲಿ ಮಿಂಚು, ಗುಡುಗು, ಬಿರುಗಾಳಿ ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

