ಬೆಂಗಳೂರು: ರಾಜ್ಯದಲ್ಲಿ ARAI ಕೇಂದ್ರ ಸ್ಥಾಪನೆ: 100 ಬದಲು 500 ಎಕರೆ ಪ್ರದೇಶದಲ್ಲಿ ಸ್ಥಾಪಿಸುವ ಸಂಬಂಧ ಮಹತ್ವದ ಚರ್ಚೆ ನಡೆಸಲಾಗಿದೆ.
ಕೇಂದ್ರದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ರಾಜ್ಯ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ಅವರನ್ನು ಭೇಟಿಮಾಡಿ ಮಂಡ್ಯದಲ್ಲಿ ದೇಶದ ಮೊಟ್ಟಮೊದಲ ARAI (Automotive Research Association of India) ಕೇಂದ್ರವನ್ನು ಸ್ಥಾಪಿಸುವ ಕುರಿತು ಸಮಾಲೋಚನೆ ನಡೆಸಿದರು.
ಉದ್ದೇಶಿತ ಈ ಮಹತ್ವಾಕಾಂಕ್ಷಿ ಯೋಜನೆಗಾಗಿ ರಾಜ್ಯ ಸರ್ಕಾರವು ಈಗಾಗಲೇ 100 ಎಕರೆ ಭೂಮಿಯನ್ನು ನೀಡಿದ್ದು, ಈ ಸಂಬಂಧ ರಾಜ್ಯ ಸರ್ಕಾರದ ಮತ್ತು ಕೇಂದ್ರದ ARAI ಅಧಿಕಾರಿಗಳ ತಂಡ ಈಗಾಗಲೇ ಸ್ಥಳ ಪರಿಶೀಲನೆ ನಡೆಸಿರುವುದನ್ನು ಕೇಂದ್ರ ಸಚಿವರಿಗೆ ಮನವರಿಕೆ ಮಾಡಿಕೊಡಲಾಯಿತು.
ಮುಂದುವರೆದು ಕೇವಲ ಸಂಶೋಧನಾ ಕೇಂದ್ರದ ಸ್ಥಾಪನೆಯಷ್ಟೇ ಅಲ್ಲದೆ, ಭವಿಷ್ಯದಲ್ಲಿ ಅದರ ಸುತ್ತಮುತ್ತ ಪೂರಕ ಕೈಗಾರಿಕೆಗಳು ಮತ್ತು ಬೃಹತ್ ಆಟೋಮೊಬೈಲ್ ಉದ್ಯಮಗಳು ಬೆಳೆಯಲು ಹೇರಳ ಅವಕಾಶಗಳಿವೆ. ಈ ದೂರದೃಷ್ಟಿಯಿಂದ ಕೇವಲ 100 ಎಕರೆಗೆ ಸೀಮಿತವಾಗದೆ, 500 ಎಕರೆ ಜಮೀನನಲ್ಲಿ ನಿರ್ಮಿಸಿದರೆ ಅಭಿವೃದ್ಧಿಗೆ ದೊಡ್ಡ ಬಲ ಸಿಗಲಿದೆ ಎಂಬ ಅಂಶವನ್ನು ಸಹ ಚರ್ಚಿಸಿದೆವು.
ಇದರಂತೆಯೇ ಸ್ಥಳ ಲಭ್ಯತೆಯ ಬಗ್ಗೆ ತಕ್ಷಣವೇ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವೆ.
ಶಾಸಕ ಹೆಚ್.ಡಿ. ರೇವಣ್ಣ, ಸಂಸದ ಎಂ. ಮಲ್ಲೇಶ್ ಬಾಬು, ಮಾಜಿ ಸಚಿವರಾದ ಡಿ.ಸಿ.ತಮ್ಮಣ್ಣ, ಸಿ.ಎಸ್. ಪುಟ್ಟರಾಜು, ಮಂಡ್ಯ ಶಾಸಕರಾದ ರವಿಕುಮಾರ್, ವಿಧಾನ ಪರಿಷತ್ ಸದಸ್ಯ ಶರವಣ, ARAI ನಿರ್ದೇಶಕ ಡಾ. ರೇಜಿಮಥಾಯಿ, ಹಿರಿಯು ಉಪನಿರ್ದೇಶಕ ಡಾ. ಬಿ.ವಿ. ಶಾಮಸುಂದರ ಹಾಗೂ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

