ಬೆಂಗಳೂರು: ರಾಜ್ಯಾದ್ಯಂತ ಉಷ್ಣ ಅಲೆ ದ್ನದಿಂದ ದಿನಕ್ಕೆ ಹೆಚ್ಚುತ್ತಿದೆ. ಕರಾವಳಿ ಜಿಲ್ಲೆಗಳಲ್ಲಿ ಹೀಟ್ವೇವ್ ಎಚ್ಚರಿಕೆ ನೀಡಲಾಗಿದೆ. ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯದಲ್ಲಿ ಇನ್ನೂ ಇನ್ನೂ 5 ದಿನ ಉಷ್ಣ ಅಲೆ ಮುಂದುವರೆಯಲಿದೆ. ಕರಾವಳಿ ಜಿಲ್ಲೆಗಳು ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ರಣ ಬಿಸಿಲು ಹೆಚ್ಚುತ್ತಿದ್ದು, ಮುಂಬರುವ ದಿನಗಳಲ್ಲಿ ಈ ಭಾಗಗಳ ತಾಪಮಾನ 45 ಡಿಗ್ರಿ ಸೆಲ್ಸಿಯಸ್ಗೆ ಏರುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಅನಗತ್ಯವಾಗಿ ಹೊರಗೆ ಬರಬೇಡಿ, ಹೆಚ್ಚು ನೀರು ಸೇವಿಸಿ ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಇಂದೂ ಉಷ್ಣ ಅಲೆ ಇರಲಿದ್ದು, ಹೀಟ್ ವೇವ್ ಅಲರ್ಟ್ ನೀಡಲಾಗಿದ್ದು, ಜೊತೆಗೆ ಗುಡುಗು ಸಹಿತ ಮಳೆಯೂ ಆಗಬಹುದು. ಉತ್ತರ ಒಳನಾಡಿನ ವಿಜಯಪುರ, ಕಲಬುರ್ಗಿ, ಯಾದಗಿರಿ, ಬೆಳಗಾವಿ ಮತ್ತು ಧಾರವಾಡ ಗುಡುಗು ಸಹಿತ ಮಳೆಯಾಗಲಿದ್ದು, ಉಳಿದೆಡೆ ಒಣ ಹವೆಯಿರಲಿದೆ.
ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲಿಯೂ ಗುಡುಗು, ಸಿಡಿಲು ಸಹಿತ ಮಳೆಯಾಗಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.
ಏಪ್ರಿಲ್ 22 ರವರೆಗೆ ಕರ್ನಾಟಕದ ಉತ್ತರ ಒಳನಾಡಿನ ಕೆಲವು ಸ್ಥಳಗಳಲ್ಲಿ ಗುಡುಗು, ಆಲಿಕಲ್ಲು ಸಹಿತ ಮಳೆಯಾಗಲಿದ್ದು, ಗಂಟೆಗೆ 40-50 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನಲ್ಲಿಯೂ ಗುಡುಗು ಸಹಿತ ಮಳೆಯೊಂದಿಗೆ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ.ಮುಂದಿನ 5 ದಿನಗಳವರೆಗೆ ಕರಾವಳಿಯಲ್ಲಿ ಉಷ್ಣ ಅಲೆ ಇರಲಿದ್ದು, ಮುನ್ನೆಚ್ಚರಿಕಾ ಕ್ರಮವಹಿಸುವಂತೆ ಹವಾಮಾನ ಇಲಾಖೆ ತಿಳಿಸಿದೆ.

