ಬೆಂಗಳೂರು: ಕಳೆದ ಹಲವು ದಿನಗಳಿಂದ ರಾಜ್ಯಾದ್ಯಂತ ಹೆಚ್ಚುತ್ತಿರುವ ತಾಪಮಾನ, ರಣ ಬಿಸಿಲಿನಿಂದಾಗಿ ಕರ್ನಾಟಕ ಕಾದ ಕಾವಲಿಯಂತಾಗಿದೆ. ಅಲ್ಲಲ್ಲಿ ಮಳೆಯಾಗುತ್ತಿದ್ದರೂ ಬಿಸಿಗಾಳಿಯ ಅಬ್ಬರ ಮತ್ತಷ್ಟು ಹೆಚ್ಚಾಗುತ್ತಿದೆ. ಸುಡು ಬಿಸಿಲು, ಸೆಖೆಯಿಂದಾಗಿ ಕರುನಾಡ ಜನರು ತತ್ತರಿಸಿ ಹೋಗಿದ್ದಾರೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಈಗಾಗಲೇ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತಿದೆ. ಮುಂಜಾನೆಯಿಂದಲೇ ನೆತ್ತಿ ಸುಡುವಷ್ಟರ ಮಟ್ಟಿದ ಬಿಸಿಲ ಧಗೆ ಜನರನ್ನು ಹೈರಾಣಾಗಿಸುತ್ತಿದ್ದು, ಮನೆಯಿಂದ ಹೊರಬರಲೂ ಆಗದೇ ಬಿಸಿ ಗಾಳಿಯಿಂದಾಗಿ ಮನೆಯಲ್ಲೂ ಇರಲಾಗದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯದಲ್ಲಿ ತಾಪಮಾನ ಇನ್ನಷ್ಟು ಹೆಚ್ಚಳವಾಗಲಿದ್ದು, ರಾತ್ರಿ ವೇಳೆಯೂ ಉಷ್ಣ ಅಲೆ ಬೀಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಹವಾಮಾನ ತಜ್ಞ ಸಿ.ಎಸ್. ಪಾಟೀಲ್ ಮಾಹಿತಿ ಪ್ರಕಾರ, ರಾಜ್ಯದ ಹಲವು ಜಿಲ್ಲೆಗಳಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ತಲುಪಿದ್ದು, ಜನರು ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಕೆರೆ, ಬಾವಿ ಮತ್ತು ಜಲಾಶಯಗಳಲ್ಲಿ ನೀರಿನ ಮಟ್ಟ ಇಳಿಕೆಯಾಗುವ ಸಾಧ್ಯತೆಗಳು ಗೋಚರಿಸುತ್ತಿವೆ. ನೀರಿನ ಅಭಾವ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ರಾಜ್ಯದ ಉತ್ತರ ಒಳನಾಡು, ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಹಗಲು ಮತ್ತು ರಾತ್ರಿ ಎರಡೂ ವೇಳೆಯಲ್ಲೂ ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್ ಹೆಚ್ಚು ಉಷ್ಣಾಂಶ ದಾಖಲಾಗುತ್ತಿದೆ. ಇದು ಮಣ್ಣಿನ ತೇವಾಂಶವನ್ನು ವೇಗವಾಗಿ ಕಡಿಮೆ ಮಾಡುತ್ತದೆ ಮತ್ತು ಜಲಮೂಲಗಳ ಆವಿಯಾಗುವಿಕೆಯನ್ನು ಹೆಚ್ಚಿಸುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇದರಿಂದ ಕೆರೆ ಮತ್ತು ಜಲಾಶಯಗಳು ಬೇಗ ಒಣಗಲಿದೆ. ಇದು ಮನುಷ್ಯನಿಗೆ ಮಾತ್ರವಲ್ಲ ಪಕ್ಷಿ, ಪ್ರಾಣಿ ಸಂಕುಲಗಳಿಗೂ ತೊಂದರೆ ಉಂಟುಮಾಡಬಹುದು ಎಂದು ತಿಳಿಸಿದ್ದಾರೆ.
ಒಂದು ವಾರಗಳ ಕಾಲ ರಾಜ್ಯದ ಒಳನಾಡಿನಲ್ಲಿ ಟ್ರಫ್ ಇರುವುದರಿಂದ ಕೆಲವೆಡೆ ಗುಡುಗು ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಮಳೆಯಾದರೂ ಕೂಡ ಉಷ್ಣ ಅಲೆ ಕಡಿಮೆಯಾಗುವುದಿಲ್ಲ. ಬಿಸಿ ಗಾಳಿ, ಸೆಖೆ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ.

