HomeKarnatakaBIG NEWS: ಕಾಂಗ್ರೆಸ್ ನಲ್ಲಿ ಮತ್ತೆ ಗರಿಗೆದರಿದ ಸಚಿವ ಸಂಪುಟ ಪುನಾರಚನೆ ಚಟುವಟಿಕೆ: 20ಕ್ಕೂ ಹೆಚ್ಚು...

BIG NEWS: ಕಾಂಗ್ರೆಸ್ ನಲ್ಲಿ ಮತ್ತೆ ಗರಿಗೆದರಿದ ಸಚಿವ ಸಂಪುಟ ಪುನಾರಚನೆ ಚಟುವಟಿಕೆ: 20ಕ್ಕೂ ಹೆಚ್ಚು ಶಾಸಕರಿಂದ ದೆಹಲಿ ಪ್ರಯಾಣಕ್ಕೆ ಸಿದ್ಧತೆ

ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ಮತ್ತೆ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಸಚಿವ ಸಂಪುಟ ಪುನಾರಚನೆ ಕೂಗು ಕೇಳಿಬರುತ್ತಿರುವ ಬೆನ್ನಲ್ಲೇ ಕೈ ಶಾಸಕರು ದೆಹಲಿ ಪ್ರಯಾಣದತ್ತ ಮುಖ ಮಾಡಿದ್ದಾರೆ.

ರಾಜ್ಯ ಸಚಿವ ಸಂಪುಟ ಪುನರ್‌ ರಚನೆಯ ವಿಚಾರ ಚರ್ಚೆಯಾಗುತ್ತಿದ್ದು, ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ 20ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು ಏಪ್ರಿಲ್ 12 ರ ಭಾನುವಾರ ದೆಹಲಿಗೆ ತೆರಳಲಿದ್ದಾರೆ. ಅಶೋಕ್ ಪಟ್ಟಣ್ ನೇತೃತ್ವದಲ್ಲಿ ಹೈಕಮಾಂಡ್ ಭೇಟಿ ಮಾಡಲಿರುವ ಶಾಸಕರು, ತಮಗೂ ಸಚಿವ ಸ್ಥಾನ ನೀಡುವಂತೆ ಒತ್ತಡ ಹೇರಲಿದ್ದಾರೆ.

ಸರ್ಕಾರದ ಮುಖ್ಯ ಸಚೇತಕ ಅಶೋಕ್ ಪಟ್ಟಣ್ ಮತ್ತು ಹಿರಿಯ ಶಾಸಕ ಟಿ.ಬಿ. ಜಯಚಂದ್ರ ಅವರ ನೇತೃತ್ವದಲ್ಲಿ ಶಾಸಕರ ಟೀಂ ನಾಳೆ ದೆಹಲಿಗೆ ತೆರಳಲಿದೆ. ಈ ತಂಡದಲ್ಲಿ ಮೂರರಿಂದ ಆರು ಬಾರಿ ಗೆದ್ದಿರುವ ಅನುಭವಿ ಶಾಸಕರು ಸೇರಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಾಂಗ್ರೆಸ್ ಹೈಕಮಾಂಡ್ ನಾಯಕರಾದ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆ.ಸಿ ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಭೇಟಿ ಮಾಡಿ ಸಚಿವ ಸ್ಥಾನಕ್ಕಾಗಿ ಮನವಿ ಸಲ್ಲಿಸುವುದು ಅವರ ಉದ್ದೇಶವಾಗಿದೆ.

ಸರ್ಕಾರ ರಚನೆಯಾಗಿ ಮೂರು ವರ್ಷಗಳು ಕಳೆಯುತ್ತಾ ಬಂದಿವೆ. ಆರಂಭದಲ್ಲಿ ಎರಡೂವರೆ ವರ್ಷದ ನಂತರ ಸಂಪುಟ ಪುನರ್‌ ರಚನೆ ಮಾಡಿ ಹೊಸಬರಿಗೆ ಅವಕಾಶ ನೀಡಲಾಗುವುದು ಎಂಬ ಭರವಸೆ ನೀಡಲಾಗಿತ್ತು. ಪಕ್ಷಕ್ಕಾಗಿ ನಾವು ನಿರಂತರವಾಗಿ ದುಡಿದಿದ್ದೇವೆ. ಉಳಿದಿರುವ ಎರಡು ವರ್ಷದ ಅವಧಿಗಾದರೂ ನಮಗೆ ಸಚಿವ ಸ್ಥಾನ ನೀಡಬೇಕು ಎಂಬುದು ಶಾಸಕರ ವಾದವಾಗಿದೆ. ಇದಕ್ಕಾಗಿ ಸಂಪುಟ ಪುನರ್‌ ರಚನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೂಚನೆ ನೀಡುವಂತೆ ಹೈಕಮಾಂಡ್‌ಗೆ ಅವರು ಒತ್ತಾಯಿಸಲಿದ್ದಾರೆ ಎನ್ನಲಾಗಿದೆ.

ಇನ್ನು ನಾಯಕತ್ವ ಬದಲಾವಣೆಯ ಕುರಿತಾದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿರುವ ಶಾಸಕರು, ನಾಯಕತ್ವದ ವಿಚಾರ ಹೈಕಮಾಂಡ್‌ಗೆ ಬಿಟ್ಟಿದ್ದು, ವರಿಷ್ಠರು ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ. ಆದರೆ ಸಚಿವ ಸಂಪುಟದಲ್ಲಿ ಹಿರಿಯ ಮತ್ತು ಅನುಭವಿ ಶಾಸಕರಿಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಏಪ್ರಿಲ್ 17ರ ನಂತರ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ಕೂಡ ದೆಹಲಿಗೆ ಭೇಟಿ ನೀಡಲಿದ್ದು, ಅದಕ್ಕೂ ಮುನ್ನವೇ ಸಚಿವ ಸ್ಥಾನದ ಆಕಾಂಕ್ಷಿ ಶಾಸಕರು ವರಿಷ್ಠರ ಮನವೊಲಿಸಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular